"ಚಕ್ರ ತಿರುಗುತ್ತಿದೆ, ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ ಸಿದ್ದರಾಮಯ್ಯನವರೇ"
ಬೆಂಗಳೂರು, ಅ 16: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್/ಟ್ವೀಟ್ ಸಮರ ಮುಂದುವರಿದಿದೆ. ಕಾಂಗ್ರೆಸ್ಸಿನಲ್ಲಿ ಅಲ್ಪಸಂಖ್ಯಾತ ಸಮುದಾಯದವರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಎಳೆಎಳೆಯಾಗಿ ವಿವರಿಸಿ ಟ್ವೀಟ್ ಮಾಡಿದ್ದಾರೆ. ಅದು ಹೀಗಿದೆ:
"ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ʼಸಿದ್ದಹಸ್ತʼ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ. ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ" ಎಂದು ಎಚ್ಡಿಕೆ ಆರೋಪಿಸಿದ್ದಾರೆ.
"ತನ್ನೆಲ್ಲಾ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ʼಅಹಿಂದʼ ಎಂದು ಜನರನ್ನು 'ಅಡ್ಡದಾರಿ' ಹಿಡಿಸಿದ ʼಸಿದ್ದಹಸ್ತ ಶೂರರುʼ ತಮ್ಮ ಸ್ವಪಕ್ಷದಲ್ಲೇ ಮುಸ್ಲಿಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ʼಅಲ್ಪಸಂಖ್ಯಾತರ ಅಂತ್ಯ ರಾಜಕಾರಣದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ" ಎಂದು ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
"ನಂಬಿ ಅಧಿಕಾರ ಕೊಟ್ಟ ಪಕ್ಷದ ಕತ್ತನ್ನೇ ಕುಯ್ಯುವ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ʼಸಿದ್ದಹಸ್ತ ಸೂತ್ರಧಾರಿʼಯ ಒಳ ರಾಜಕೀಯಕ್ಕೆ ಬಲಿಯಾಗುತ್ತಿರುವ ಅಲ್ಪಸಂಖ್ಯಾತ ನಾಯಕರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್ʼನಲ್ಲಿ ನಡೆದಿರುವ ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣ ಎಂದು ಜನರಿಗೆ ಗೊತ್ತಾಗಲಿ"ಎಂದು ಕುಮಾರಸ್ವಾಮಿಯವರು ಮುಸ್ಲಿಂ ಸಮುದಾಯವನ್ನು ಎಚ್ಚರಿಸಿದ್ದಾರೆ.

2012ರ ವಿಧಾನ ಪರಿಷತ್ ಚುನಾವಣೆ
ಬೈರತಿ ಸುರೇಶ್ ಗೆಲುವಿಗೆ ಕಾರಣವಾದ ʼಸಿದ್ದಸೂತ್ರʼ ಹಣೆದಿದ್ದು ಯಾರು "2012ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋಲುತ್ತಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಬೈರತಿ ಸುರೇಶ್ ತಮ್ಮ ಗೆಲುವಿಗೆ ಬೇಕಿದ್ದ 19 ಮತ ಮೀರಿ 23 ಮತ ಪಡೆದು ಗೆಲ್ಲುತ್ತಾರೆ!! ಇಲ್ಲಿ ಸರಡಗಿ ಸೋಲಿಗೆ, ಬೈರತಿ ಸುರೇಶ್ ಗೆಲುವಿಗೆ ಕಾರಣವಾದ ʼಸಿದ್ದಸೂತ್ರʼ ಹಣೆದಿದ್ದು ಯಾರು" - ಕುಮಾರಸ್ವಾಮಿ ಪ್ರಶ್ನೆ.
"ಈ " ಸಿದ್ದಹಸ್ತರ ಸಿದ್ದಸೂತ್ರʼ ಅಲ್ಲಿಗೇ ನಿಲ್ಲುವುದಿಲ್ಲ. 2016ರಲ್ಲಿ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಅಧಿಕೃತ ಟಿಕೆಟ್ ಕೊಡುತ್ತದೆ" ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರೋಷನ್ ಬೇಗ್ʼಗೆ ಶೋಕಾಸ್ ನೊಟೀಸ್ ನೀಡಿ, ತಮ್ಮನ್ನು ಬಹಿರಂಗವಾಗಿ ಪ್ರಶ್ನಿಸಿದರು
"ಆಗ ಬೈರತಿ ಸುರೇಶ್ ಪರ ಲಾಬಿ ಮಾಡಿದ್ದ ಸಿದ್ಧಕಲೆ ಸೂತ್ರಧಾರರು, ಅವರನ್ನೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಒಳಸುಳಿ ಸೃಷ್ಟಿಸಿ ಷರೀಫರ ಮೊಮ್ಮಗನನ್ನು ಸೋಲಿಸುತ್ತಾರೆ! 2023ರ ಚುನಾವಣೆಯಲ್ಲಿ ಭೈರತಿ ಸುರೇಶ್ʼಗೇ ಹೆಬ್ಬಾಳದ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ. ಹಾಗಾದರೆ ಜಾಫರ್ ಷರೀಫರ ಮೊಮ್ಮಗನ ಕಥೆ ಏನು?"
"ಕಳೆದ ಲೋಕಸಭೆ ಚುನಾವಣೆ ನಂತರ ತಮಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಿದ ರೋಷನ್ ಬೇಗ್ʼಗೆ ಶೋಕಾಸ್ ನೊಟೀಸ್ ನೀಡಿ, ತಮ್ಮನ್ನು ಬಹಿರಂಗವಾಗಿ ಪ್ರಶ್ನಿಸಿದರು ಎಂಬ ಕಾರಣಕ್ಕೆ ಅವರನ್ನು ಬೇಕಾಬಿಟ್ಟಿ ನಡೆಸಿಕೊಂಡು ಅಪಮಾನ ಮಾಡುತ್ತಾರೆ ಸಿದ್ದಹಸ್ತರು. ಕೊನೆಗೆ ರೋಷನ್ ಬೇಗ್ ಕಾಂಗ್ರೆಸ್ ಪಕ್ಷದಿಂದಲೇ ದೂರವಾಗುತ್ತಾರೆ" - ಕುಮಾರಸ್ವಾಮಿ ಟ್ವೀಟ್
|
ತನ್ವೀರ್ ಸೇಠ್ ಅವರನ್ನು ಅಪಮಾನಕರವಾಗಿ ನಡೆಸಿಕೊಂಡಿದ್ದು ಇದೇ ಸಿದ್ದಹಸ್ತರು
"ಮೈಸೂರಿನ ಹಿರಿಯ ನಾಯಕ ತನ್ವೀರ್ ಸೇಠ್ ಅವರನ್ನು ಅಪಮಾನಕರವಾಗಿ ನಡೆಸಿಕೊಂಡಿದ್ದು ಇದೇ ಸಿದ್ದಹಸ್ತರು. ಅಲ್ಲಿನ ಪಾಲಿಕೆಯಲ್ಲಿ ಜಾತ್ಯತೀತ ಶಕ್ತಿಗಳನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ ತನ್ವೀರ್ ಮೇಲೆ ಕೂಗಾಡಿದ ಸಿದ್ದಸೂತ್ರ ಪ್ರವೀಣರು, ಇನ್ನಿಲ್ಲದ ಅಪಮಾನ ಮಾಡಿ ನಿಂದಿಸುತ್ತಾರೆ".
"ಈಗ ಆಡಿಯೋ ನೆಪದಲ್ಲಿ ಸಲೀಂ ಮೊಹಮದ್ ಬಲಿ ಪಡೆದಾಗಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ದೊಡ್ಡವರ ರಕ್ಷಣೆ ಮಾಡಲಾಗಿದೆ. ಸಲೀಂ ಹೇಳಿದ್ದೆಲ್ಲವನ್ನೂ ಕೇಳಿಕೊಂಡು ʼರಸಸ್ವಾದʼ ಮಾಡಿ ಪುಕ್ಕಟೆ ಮನರಂಜನೆ ಪಡೆದ ವ್ಯಕ್ತಿಗೆ ರಕ್ಷಣೆ ನೀಡಿ ಓರ್ವ ಅಲ್ಪಸಂಖ್ಯಾತ ನಾಯಕನನ್ನು 6 ವರ್ಷ ಉಚ್ಚಾಟಿಸಲಾಗಿದೆ. ಇದು ಯಾವ ಸೀಮೆ ನ್ಯಾಯ? "ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಇದೇನಾ ಸಿದ್ದಹಸ್ತರೇ?
ಚಕ್ರ ತಿರುಗುತ್ತಿದೆ, ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ "ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಇದೇನಾ ಸಿದ್ದಹಸ್ತರೇ? ತೊಟ್ಟಿಲನ್ನೂ ತೂಗುತ್ತಾ, ಮಗುವನ್ನೂ ಚಿವುಟುತ್ತಾ, ಸಾಧ್ಯವಾದರೆ ಆ ಮಗುವಿನ ಕತ್ತನ್ನೂ ಕುಯ್ಯುತ್ತಾ ನಡೆಸುತ್ತಿರುವ ಇಂಥ ನೀಚ ರಾಜರಾರಣ ಮುಸ್ಲೀಂ ಬಾಂಧವರಿಗೆ ಈಗ ಗೊತ್ತಾಗಿಬಿಟ್ಟಿದೆ". "ಚಕ್ರ ತಿರುಗುತ್ತಿದೆ, ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ. ಅಲ್ಪಸಂಖ್ಯಾತ ಬಾಂಧವರಿಗೆ ನಿಮ್ಮ ನಿಜಬಣ್ಣ ಗೊತ್ತಾಗಿದೆ ಸಿದ್ದಹಸ್ತರೇ. ನಿಮಗೆ ಪಾಠ ಕಲಿಸುವ #ಜನತಾಪರ್ವ ಈಗಷ್ಟೇ ಆರಂಭವಾಗಿದೆ. ಕಾದು ನೋಡಿ" ಎಂದು ಎಚ್.ಡಿ.ಕುಮಾರಸ್ವಾಮಿಯವರು ಸಿದ್ದರಾಮಯ್ಯನವರನ್ನು ಎಚ್ಚರಿಸಿದ್ದಾರೆ.











Click it and Unblock the Notifications