ಬೆಳಗಾವಿ ಅಧಿವೇಶನಕ್ಕೆ ಸಜ್ಜಾದ ಹೆಚ್ಡಿಕೆ, ವಿಜಯೇಂದ್ರ: ಯಾವ್ಯಾವ ವಿಷಯ ಮುಂದಿಟ್ಟು ಹೋರಾಟ?
ಬೆಂಗಳೂರು, ಡಿಸೆಂಬರ್ 02: ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರದಿಂದ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಸದನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಕಟ್ಟಿ ಹಾಕಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಭೆ ನಡೆಸಿದ್ದಾರೆ.
ಹೌದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾಟಿ ಬೀಸಲು ಶುಕ್ರವಾರ ನಗರದ ರೇಸ್‌ಕೋರ್ಸ್ ರಸ್ತೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಆರ್ ಅಶೋಕ್ ಸಭೆ ನಡೆಸಿದ್ದು, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಜನ ವಿರೋಧಿ ನೀತಿಗಳ ವಿರುದ್ಧ ಜಂಟಿಯಾಗಿ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಉತ್ತರ ಕರ್ನಾಟಕದ ಸಮಸ್ಯೆಗಳನ್ನ ಹೊರತು ಪಡಿಸಿ, ಸರ್ಕಾರದ ವಿರುದ್ಧ ಯಾವೆಲ್ಲಾ ವಿಷಯಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಬೇಕು ಮತ್ತು ಹೋರಾಟದ ರೂಪುರೇಷೆ ಹೇಗಿರಬೇಕು ಎಂಬುದರ ಕುರಿತು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮಾತುಕತೆ ನಡೆಸಲಾಗಿದೆ. ಅಲ್ಲದೇ ಸರ್ಕಾರದ ವಿರುದ್ಧ ಪರಿಣಾಮಕಾರಿ ಹೋರಾಟಕ್ಕೆ ಪ್ರತಿಪಕ್ಷಗಳು ಸಜ್ಜಾಗಿವೆ.
ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವೈಫಲ್ಯದ ಕುರಿತು ಸರ್ಕಾರದ ವಿರುದ್ದ ಸಮರಕ್ಕೆ ಸಿದ್ದರಾಗಿದ್ದಾರೆ. ಇನ್ನೂ ರಾಜ್ಯದಲ್ಲಿ ವಾಡಿಕೆಯಂತೆ ಮಳೆಯಾಗದೇ ಬರ ನಿರ್ವಹಣೆಯಲ್ಲಿ ವಿಫಲವಾಗಿರುವುದರ ಕುರಿತು ಚಾಟಿ ಬೀಸಲಿದ್ದಾರೆ. ಗುತ್ತಿಗೆದಾರರಿಂದ ಕಮೀಷನ್ ಪಡೆಯುತ್ತಿರುವ ಆರೋಪ, ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳು, ಅನುದಾನದ ವಿಚಾರದಲ್ಲಿ ಕಾಂಗ್ರೆಸ್ ಶಾಸಕರೇ ಅಸಮಾಧಾನಗೊಂಡಿರುವ ಕುರಿತು ಚರ್ಚೆ ನಡೆಸಿದ್ದಾರೆ.

ಶಾಸಕರಿಗೆ ಅನುದಾನ ಬಿಡುಗಡೆ ಮಾಡದಿರುವುದು, ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲದಿರುವುದು ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರ ವಿರುದ್ಧ ಸದನದಲ್ಲಿ ಹೋರಾಟ ನಡೆಸುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಯು.ಟಿ. ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈ ಮುಗಿದು ಗೌರವ ಕೊಡುವಂತೆ ಮಾಡಿದ್ದೇವೆ ಎಂದು ವಸತಿ ಸಚಿವ ಜಮೀರ್ ಅಹಮದ್ ನೀಡಿದ್ದ ಹೇಳಿಕೆ ಕುರಿತು ಸದನದಲ್ಲಿ ಪ್ರಸ್ತಾಪಿಸಿ ಕ್ಷಮೆಯಾಚನೆಗೆ ಪಟ್ಟುಹಿಡಿಯುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತೀರ್ಮಾನ ಕೈಗೊಂಡಿದ್ದಾರೆ.
ಇನ್ನೂ ಬಿಜೆಪಿ ನಾಯಕರ ಜೊತೆಗೆ ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿ, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚೆ ನಡೆಸುವ ಹಾಗೂ ಹೋರಾಟದ ಬಗ್ಗೆ ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ಯಾವ ರೀತಿಯ ಹೋರಾಟ ಎಂಬುದನ್ನು ಮುಂದೆ ಹೇಳುತ್ತೇವೆ. ಈ ಸರ್ಕಾರ ಬಂದ ನಂತರ ಜನತೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸರ್ಕಾರ ಬಂದ ನಂತರ ಜನತೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಕಾನೂನಿನ ವ್ಯವಸ್ಥೆ ಹದಗೆಟ್ಟಿದೆ. ಇದರ ವಿರುದ್ಧ ಸದನದಲ್ಲಿ ಹೋರಾಡುತ್ತೇವೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications