ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ ಎಚ್.ಡಿ.ದೇವೇಗೌಡ
ಬೆಂಗಳೂರು, ಜೂನ್ 28 : ಕೆಲವು ದಿನಗಳ ಹಿಂದೆ ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಈಗ ಉತ್ತರ ಕರ್ನಾಟಕದತ್ತ ಗಮನ ಹರಿಸಿದ್ದಾರೆ. ಪಕ್ಷ ಸಂಘಟನೆ ಮಾಡಲು ಉತ್ತರ ಕರ್ನಾಟಕ ಭಾಗದ ಪ್ರವಾಸ ಮಾಡಲು ಮುಂದಾಗಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಕೇವಲ ಒಂದು ಸ್ಥಾನದಲ್ಲಿ ಜಯಗಳಿಸಿದ ಬಳಿಕ ಎಚ್.ಡಿ.ದೇವೇಗೌಡ ಅವರು ಪಕ್ಷ ಸಂಘಟನೆಯತ್ತ ಹೆಚ್ಚು ಗಮನ ಹರಿಸಿದ್ದಾರೆ. ಆದ್ದರಿಂದ, ಜುಲೈ ತಿಂಗಳ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ.
ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಲು ದೇವೇಗೌಡರು ತೀರ್ಮಾನಿಸಿದ್ದಾರೆ. ಉತ್ತರ ಕರ್ನಾಟಕ, ಬಾಂಬೆ ಕರ್ನಾಟಕ ಭಾಗದಲ್ಲಿ ಪಕ್ಷ ಶಕ್ತಿಯುತವಾಗಿಲ್ಲ. ಆದ್ದರಿಂದ, ಆ ಭಾಗದಿಂದಲೇ ರಾಜ್ಯ ಪ್ರವಾಸವನ್ನು ದೇವೇಗೌಡರು ಆರಂಭಿಸಲಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಹ ಗ್ರಾಮ ವಾಸ್ತವ್ಯವನ್ನು ಆರಂಭಿಸಿದ್ದಾರೆ. ಈಗಾಗಲೇ ಮೂರು ಗ್ರಾಮ ವಾಸ್ತವ್ಯವನ್ನು ಉತ್ತರ ಕರ್ನಾಟಕ ಭಾಗದಲ್ಲಿಯೇ ಮಾಡಿದ್ದಾರೆ. ಈಗ ದೇವೇಗೌಡರು ಸಹ ಉತ್ತರ ಕರ್ನಾಟಕದತ್ತ ಹೆಚ್ಚು ಗಮನ ಹರಿಸಿದ್ದಾರೆ....

ಪಕ್ಷ ಹೆಚ್ಚು ಶಕ್ತಿಯುತವಾಗಿಲ್ಲ
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಹೆಚ್ಚು ಶಕ್ತಿಯುತವಾಗಿಲ್ಲ. ವಿಧಾನಸಭೆ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿಯೂ ಇದು ಸಾಬೀತಾಗಿದೆ. ಆದ್ದರಿಂದ, ಆ ಭಾಗದಲ್ಲಿ ಪಕ್ಷವನ್ನು ಸಂಘಟನೆ ಮಾಡಲು ದೇವೇಗೌಡರು ಉತ್ತರ ಕರ್ನಾಟಕ ಪ್ರವಾಸವನ್ನು ಮಾಡಲಿದ್ದಾರೆ.

ಹಲವು ಕೊಡುಗೆಗಳನ್ನು ಕೊಟ್ಟಿದೆ
ಉತ್ತರ ಕರ್ನಾಟಕ ಭಾಗಕ್ಕೆ ಜೆಡಿಎಸ್ ಪಕ್ಷದ ಕೊಡುಗೆಗಳು ಅಪಾರ. ನಾರಾಯಣಪುರ ಬಲದಂಡೆ ನಾಲೆ ಸೇರಿದಂತೆ ನೀರಾವರಿ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹಲವು ಕೊಡುಗೆ ನೀಡಲಾಗಿದೆ. ಅವುಗಳನ್ನು ಜನರಿಗೆ ನೆನಪು ಮಾಡಿಕೊಡುವ ಜೊತೆ ಪಕ್ಷವನ್ನು ಸಂಘಟನೆ ಮಾಡಲು ಪ್ರವಾಸ ಕೈಗೊಂಡಿದ್ದಾರೆ.

ಮಧ್ಯಂತರ ಚುನಾವಣೆ?
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಬಹುದು ಎಂಬ ಸುಳಿವನ್ನು ಈಗಾಗಲೇ ದೇವೇಗೌಡರು ನೀಡಿದ್ದಾರೆ. ಆದ್ದರಿಂದ, ಉತ್ತರ ಕರ್ನಾಟಕ ಪ್ರವಾಸ ಮಾಡುವ ಜೊತೆಗೆ ಚುನಾವಣಾ ಪ್ರಚಾರವನ್ನು ನಡೆಸಿದಂತಾಗುತ್ತದೆ ಎಂಬ ಲೆಕ್ಕಾಚಾರ ಪಕ್ಷದ್ದಾಗಿದೆ.

ಜೆಡಿಎಸ್ ಪಾದಯಾತ್ರೆ
ಆಗಸ್ಟ್ 20ರಿಂದ ವಿಚಾರ, ವಿಕಾಸ, ವಿಶ್ವಾಸ ಎಂಬ ಮೂರು ಪರಿಕಲ್ಪನೆಗಳನ್ನು ಇಟ್ಟುಕೊಂಡು ಜೆಡಿಎಸ್ ರಾಜ್ಯಾದ್ಯಂತ ಪಾದಯಾತ್ರೆ ಮಾಡಲಿದೆ. ಮೊದಲ ಹಂತದಲ್ಲಿ ಕಾವೇರಿಯಿಂದ ತುಂಗಭದ್ರಾ ತನಕ, 2ನೇ ಹಂತದಲ್ಲಿ ತುಂಗಭದ್ರಾದಿಂದ ಮಲಪ್ರಭಾ ತನಕ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆ ಉತ್ತರ ಕರ್ನಾಟಕ ಭಾಗ ತಲುಪುವ ಹೊತ್ತಿಗೆ ದೇವೇಗೌಡರು ಆ ಭಾಗದಲ್ಲಿ ಪ್ರವಾಸ ಮಾಡುತ್ತಿರುತ್ತಾರೆ.











Click it and Unblock the Notifications