ಸ್ಮಶಾನ ಜಾಗದ ಕೊರತೆ, ನಾಚಿಕೆಯಿಲ್ಲದ ಭಂಡಗೆಟ್ಟ ಸರ್ಕಾರ-ಹೈಕೋರ್ಟ್ ಕಿಡಿ
ಬೆಂಗಳೂರು. ಜೂ.9: ಸ್ಮಶಾನ ಜಾಗದ ಕೊರತೆ ನೀಗಿಸುವ ನಿಟ್ಟಿನಲ್ಲಿ ಕೋರ್ಟ್ ಆದೇಶ ಪಾಲನೆ ಮಾಡದ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಹೈಕೋರ್ಟ್, ಹೆಣಗಳನ್ನು ರಸ್ತೆಯಲ್ಲಿ ಹೂಳಬೇಕೆ? ನಾಚಿಕೆಯಿಲ್ಲದ ಭಂಡಗೆಟ್ಟ ಸರ್ಕಾರಕ್ಕೆ ಬುದ್ದಿಕಲಿಸಬೇಕು ಎಂದು ಎಚ್ಚರಿಕೆ ನೀಡಿದೆ. ಅಲ್ಲದೆ, ಹೆಣಗಳನ್ನು ರಸ್ತೆಗಳಲ್ಲಿ ಹೂಳಬೇಕಾ ಎಂದು ತರಾಟೆಗೆ ತೆಗೆದುಕೊಂಡಿದೆ.
ಬೆಂಗಳೂರಿನ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯು ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾ.ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಾಗ ನ್ಯಾಯಪೀಠ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೆ, ಸ್ಮಶಾನವಿಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸುವ ಕುರಿತ 15 ದಿನಗಳಲ್ಲಿ ಕೋರ್ಟ್ ಆದೇಶ ಪೂರ್ಣ ಪ್ರಮಾಣದಲ್ಲಿ ಪಾಲಿಸದಿದ್ದರೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ ಜೈಲಿಗೆ ಕಳಿಸಲಾಗುವುದು ಎಂದು ಎಚ್ಚರಿಕೆ ನೀಡಿತು.

ಆದೇಶ ಪಾಲಿಸದಿದ್ದರೆ ಬಿಡುವುದಿಲ್ಲ:''ಈ ರೀತಿ ಸುಮ್ಮನೆ ಕಾಲಹರಣ ಮಾಡಿದರೆ ಚೆನ್ನಾಗಿರೋಲ್ಲ, ಸರ್ಕಾರದ ಭಂಡ ಧೈರ್ಯವನ್ನು ಮೆಚ್ಚಬೇಕು. ಸರ್ಕಾರ ಭಂಡವಾದರೆ ನಾವು (ಕೋರ್ಟ್) ಜಗ ಭಂಡ. ಕೋರ್ಟ್ ಆದೇಶ ಪಾಲನೆ ಮಾಡುವ ತನಕ ಬಿಡುವುದಿಲ್ಲ'' ಎಂದು ವಾರ್ನ್ ಮಾಡಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ಪರ ವಕೀಲರು, ಕೋರ್ಟ್ ಆದೇಶ ಪಾಲನೆಯ ವಸ್ತುಸ್ಥಿತಿ ವರದಿ ಸಲ್ಲಿಸಲು ಕಾಲಾವಕಾಶ ಕೋರಿದರು.
ಕೋಪಗೊಂಡ ನ್ಯಾಯಮೂರ್ತಿಗಳು, ''ವಸ್ತುಸ್ಥಿತಿ ವರದಿ ಸಲ್ಲಿಸಲು ಇದೇನು 'ನಾಪತ್ತೆ ಪ್ರಕರಣವೇ'. ವಸ್ತುಸ್ಥಿತಿ ವರದಿ, ಅಂಕಿ-ಅಂಶ ಬೇಡ, ಪೂರ್ಣ ಪ್ರಮಾಣದಲ್ಲಿ ಕೋರ್ಟ್ ಆದೇಶ ಪಾಲನೆ ಮಾಡಿದ ವರದಿ ಬೇಕು. ಅಂತಿಮವಾಗಿ 15 ದಿನ ಕಾಲಾವಕಾಶ ನೀಡಲಾಗುತ್ತದೆ.
ಈ ಅವಧಿಯಲ್ಲಿ ಬಿಡಿ ಬಿಡಿಯಾಗಿ ಅಲ್ಲ. ಪೂರ್ಣ ಪ್ರಮಾಣದಲ್ಲಿ ಕೋರ್ಟ್ ಆದೇಶ ಪಾಲನೆ ಮಾಡಬೇಕು. ಇಲ್ಲವಾದರೆ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ ಕೋರ್ಟ್ ಮುಂದೆ ಹಾಜರಾಗಬೇಕು. ಅವರ ವಿರುದ್ದ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ ನೇರ ಜೈಲಿಗೆ ಕಳಿಸಲಾಗುವುದು'' ಎಂದು ಎಚ್ಚರಿಕೆ ನೀಡಿ ವಿಚಾರಣೆ ಮುಂದೂಡಿತು.
ರಸ್ತೆಯಲ್ಲಿ ಹೆಣ ಹೂಳಬೇಕಾ?:
ಕೋರ್ಟ್ ಆದೇಶ ಪಾಲನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಶೇ.60ರಷ್ಟು ಕಾರ್ಯವಾಗಿದೆ ಎಂದು ಸರ್ಕಾರದ ಪರ ವಕೀಲರು ವಿವರಣೆ ನೀಡಿದರು. ಇದಕ್ಕೆ ಮತ್ತೆ ಸಿಟ್ಟಾದ ನ್ಯಾ. ಬಿ.ವೀರಪ್ಪ "ಸ್ಮಶಾನಕ್ಕೆ ಜಾಗ ಇಲ್ಲದ ಶೇ.40ರಷ್ಟು ಕಡೆ ಹೆಣಗಳನ್ನು ರಸ್ತೆಯಲ್ಲಿ ಹೂಳಬೇಕಾ'' ಎಂದು ತರಾಟೆಗೆ ತೆಗೆದುಕೊಂಡರು.
''ಸರ್ಕಾರ ಮಾಡುವ ಕೆಲಸ ಕೋರ್ಟ್ ಮಾಡಬೇಕಾಗಿದೆ. ಸರ್ಕಾರಕ್ಕೆ ನಾಚಿಕೆ ಆಗಬೇಕು. ಸತ್ತವರಿಗೆ ಸ್ಮಶಾನಕ್ಕೆ ಜಾಗ ಒದಗಿಸಲು ಸರ್ಕಾರ ಇಷ್ಟೊಂದು ಬೇಜಾಬ್ದಾರಿಯಿಂದ ವರ್ತಿಸುತ್ತಿರುವುದು ಸರಿಯೇ? ಒಳ್ಳೆಯ ಕೆಲಸ ಮಾಡಿದರೆ ಜನ ಮೆಚ್ಚಿ ಮತ ಹಾಕುತ್ತಾರೆ'' ಎಂದು ಆಕ್ರೋಶ ಹೊರಹಾಕಿತು.
Recommended Video
ಪ್ರಕರಣದ ಹಿನ್ನೆಲೆ: ಶವಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳಿಗೆ ಅಗತ್ಯ ಭೂಮಿಯನ್ನು ಆರು ತಿಂಗಳಲ್ಲಿ ಒದಗಿಸುವಂತೆ 2019ರಲ್ಲಿ ಕೋರ್ಟ್ ಆದೇಶ ಮಾಡಿತ್ತು. ಮೂರು ವರ್ಷವಾದರೂ ಈ ಆದೇಶವನ್ನು ಪಾಲಿಸಿಲ್ಲ. ಸರ್ಕಾರದ 2020ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಲಾಯಿತು. ಹಲವು ಬಾರಿ ನಿರ್ದೇಶನ ನೀಡಲಾಯಿತು. ಅಂತಿಮವಾಗಿ ಒತ್ತುವರಿಯಾಗಿರುವ 1.77 ಲಕ್ಷ ಎಕರೆ ಸರ್ಕಾರಿ ಜಾಗವನ್ನು ತೆರವುಗೊಳಿಸಿ ಸ್ಮಶಾನಕ್ಕೆ ಜಾಗ ಒದಗಿಸಲು 6 ತಿಂಗಳು ಕಾಲಾವಕಾಶ ನೀಡಿ 2022ರ ಜ.19ಕ್ಕೆ ಆದೇಶ ನೀಡಲಾಗಿತ್ತು. ಸರ್ಕಾರ ಅದನ್ನೂ ಪಾಲಿಸಿಲ್ಲ. ಜೊತೆಗೆ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿಯೂ ಸಲ್ಲಿಸಿಲ್ಲ.












Click it and Unblock the Notifications