ಪ್ರೀತಿಸದಿದ್ದರೆ ಆ್ಯಸಿಡ್ ದಾಳಿ ಬೆದರಿಕೆಯೊಡ್ಡಿದ್ದ ಭೂಪನಿಗೆ ಜೈಲೇ ಗತಿ!
ಬೆಂಗಳೂರು, ಜನವರಿ 19; ಪ್ರೀತಿಸದಿದ್ದರೆ ಆ್ಯಸಿಡ್ ಎರುಚುವುದಾಗಿ ಅಪ್ರಾಪ್ತೆಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಹಾಸನ ಜಿಲ್ಲೆಯ ಯವಕನೊಬ್ಬ ಇನ್ನೂ ಕೆಲ ದಿನ ಜೈಲಿನಲ್ಲೇ ಕಳೆಯಬೇಕಾಗಿದೆ.
ಏಕೆಂದರೆ ಕರ್ನಾಟಕ ಹೈಕೋರ್ಟ್ ಆತನಿಗೆ ಜಾಮೀನು ನೀಡಲು ನಿರಾಕರಿಸಿದೆ. ಅದಕ್ಕೆ ಕಾರಣ ಆತ ಬೆದರಿಕೆಯೊಡ್ಡಿದ್ದ ಯುವತಿ ತನಗೆ ಪ್ರಾಣಾಪಾಯವಿದೆ ಎಂದು ಪ್ರಮಾಣಪತ್ರ ಸಲ್ಲಿಸಿರುವುದು.
ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹೊಸಕಲ್‌ನಾಯಕನಕಹಳ್ಳಿ ನಿವಾಸಿ ಪವನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಂ. ಜಿ. ಉಮಾ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.
ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾದರೆ ತನ್ನ ಮೇಲೆ ಆ್ಯಸಿಡ್ ಎರಚಬಹುದು. ತನಗೆ ಮತ್ತು ತನ್ನ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆಯಿದೆ ಎಂದು ಆಕ್ಷೇಪಣೆಯಲ್ಲಿ ಸಂತ್ರಸ್ತೆ ಆತಂಕ ವ್ಯಕ್ತಪಡಿಸಿದ್ದಾರೆ.

ಆಕೆಯ ಭಯ ನ್ಯಾಯಸಮ್ಮತವಾಗಿದೆ. ಒಂದು ವೇಳೆ ಆರೋಪಿ ಆ್ಯಸಿಡ್ ದಾಳಿ ಮಾಡಿದರೆ, ಅದರಿಂದ ಉಂಟಾಗುವ ನಷ್ಟವನ್ನು ಭರಿಸಲಾಗದು. ಆದ್ದರಿಂದ ಜಾಮೀನು ನೀಡಲು ಇದು ಅರ್ಹ ಪ್ರಕರಣವಲ್ಲ ಎಂದು ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ.
ಆರೋಪಿ ಪರ ವಕೀಲರು, ಆರೋಪಿಯು ಯಾವುದೇ ತಪ್ಪು ಮಾಡಿಲ್ಲ. ಆತನನ್ನು ಆಧಾರವಿಲ್ಲದೆ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. 2022ರ ಜೂ.12ರಿಂದ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಬಾಲಕಿಯನ್ನು ಬಲವಂತವಾಗಿ ತಡೆದು ನಿಲ್ಲಿಸಿದ, ಮರ್ಯಾದೆ ಕಳೆದ ಮತ್ತು ಜೀವ ಬೆದರಿಕೆ ಹಾಕಿದ ಆರೋಪವಿದೆ. ಆ ಅಪರಾಧ ಕೃತ್ಯಕ್ಕೆ ಜೀವಾವಧಿ ಶಿಕ್ಷೆ ಅಥವಾ ಮರಣ ದಂಡನೆ ಶಿಕ್ಷೆ ವಿಧಿಸುವ ಅವಕಾಶವೇನು ಇಲ್ಲ.
ಈಗಾಗಲೇ ಪ್ರಕರಣದ ತನಿಖಾ ಪೂರ್ಣಗೊಂಡಿದ್ದು, ಆರೋಪ ಪಟ್ಟಿ ಸಹ ಸಲ್ಲಿಕೆಯಾಗಿದೆ. ಆದ್ದರಿಂದ ಅರ್ಜಿದಾರನ ಬಂಧನದ ಅವಶ್ಯಕತೆ ಇಲ್ಲವಾಗಿದೆ. ಬಂಧನದಲ್ಲೇ ಮುಂದುವರಿಸುವುದು ಆರೋಪಿಗೆ ಪೂರ್ವ ವಿಚಾರಣಾ ಶಿಕ್ಷೆ ವಿಧಿಸಿದಂತಾಗಲಿದ್ದು, ಜಾಮೀನು ನೀಡಬೇಕು ಎಂದು ಕೋರಿದರು.
ಸರ್ಕಾರಿ ವಕೀಲರು, ಅರ್ಜಿದಾರನ ಮೇಲಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಒಂದೊಮ್ಮೆ ಆರೋಪಿಯನ್ನು ಜಾಮೀನು ಮೇಲೆ ಬಿಡುಗಡೆ ಮಾಡಿದರೆ, ಆತ ತನ್ನ ಮೇಲೆ ಆ್ಯಸಿಂಡ್ ದಾಳಿ ಮಾಡಬಹುದು ಎಂಬ ಆತಂಕವನ್ನು ಸಂತ್ರಸ್ತೆ ವ್ಯಕ್ತಪಡಿಸಿದ್ದಾರೆ.
ಆರೋಪಿಯಿಂದ ಸಂತ್ರಸ್ತೆಗೆ ಜೀವ ಬೆದರಿಕೆಯಿದೆ. ಜೀವ ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಸಂತ್ರಸ್ತೆಯು ಕುಟುಂಬ ಸಮೇತ ಗ್ರಾಮವನ್ನು ಬಿಟ್ಟು ತೆರಳುವ ಸಾಧ್ಯತೆಯಿದೆ. ಹಾಗಾಗಿ, ಆರೋಪಿಗೆ ಜಾಮೀನು ನೀಡಬಾರದು ಎಂದು ಕೋರಿದರು.
ಪ್ರಕರಣದ ಹಿನ್ನೆಲೆ ಏನು?; ಆರೋಪಿಯು 14 ವರ್ಷದ ಸಂತ್ರಸ್ತೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಪ್ರೀತಿ ಮಾಡಲು ಒಪ್ಪದಿದ್ದರೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಸಂತ್ರಸ್ತೆ ನೀಡಿದ ದೂರು ಆಧರಿಸಿ ಅರಸೀಕೆರೆ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಹೀಗಾಗಿ, ಆರೋಪಿ ಯುವಕನಿಗೆ ಹಾಸನದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಇದರಿಂದ ಆತನ ಹೈಕೋರ್ಟ್ ಮೊರೆ ಹೋಗಿದ್ದನು.












Click it and Unblock the Notifications