ಪತಿ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಪತ್ನಿಗೆ ಕಾದಿದೆ ಶಾಸ್ತಿ!
ಬೆಂಗಳೂರು, ಜುಲೈ 02: ತನ್ನ ಪತಿಯ ಜನನಾಂಗ ಗುಹ್ಯ ರೋಗಕ್ಕೆ ತುತ್ತಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದ ಪತ್ನಿ ಇದೀಗ ತಾನೇ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ಹೈಕೋರ್ಟ್ ಪತಿಗೆ ಅನುಮತಿ ನೀಡಿದೆ. ಹಾಗಾಗಿ ಆಕೆಗೆ ಇದೀಗ ತಕ್ಕ ಶಾಸ್ತಿ ಕಾದಿದೆ.
ಅನಗತ್ಯ ಆರೋಪಗಳನ್ನು ಮಾಡಿ ಪತ್ನಿಯೊಬ್ಬರು ಗಂಡನ ವಿರುದ್ಧ, ಭಾರತೀಯ ದಂಡ ಸಂಹಿತೆ ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಿಸಿದ್ದ ದೂರನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಅಮೆರಿಕದ ಪ್ರಸಿದ್ಧ ಕಂಪನಿಯೊಂದರಲ್ಲಿ ಉತ್ಪಾದನಾ ಘಟಕದ ಇಂಜಿನಿಯರ್ ಆಗಿರುವ 35 ವರ್ಷದ ಪತಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧ ವಿಚಾರಣಾ ಕೋರ್ಟ್‌ನಲ್ಲಿರುವ ಪ್ರಕರಣವನ್ನು ರದ್ದುಗೊಳಿಸಿದೆ.

'ಕ್ಷುಲಕ್ಕ ಕಾರಣಗಳಿಗಾಗಿ ಕಾನೂನಿನ ದುರ್ಬಳಕೆ ಮಾಡಿಕೊಂಡು ತನ್ನ ಗಂಡನನ್ನು ಪೊಲೀಸ್ ಠಾಣೆ, ಕೋರ್ಟ್, ಕಚೇರಿ ಅಲೆಯುವಂತೆ ಮಾಡಿರುವ ಪತ್ನಿಯ ದುರುದ್ದೇಶಪೂರಿತ ನಡೆಯನ್ನು ಆಕ್ಷೇಪಿಸಿ ಅರ್ಜಿದಾರ ಪತಿ ಇಚ್ಛೆಪಟ್ಟಲ್ಲಿ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬಹುದು' ಎಂದು ಆದೇಶಿಸಿದೆ.
ಕೋರ್ಟ್ ಸಮಯ ವ್ಯರ್ಥ: ಪ್ರಕರಣದಲ್ಲಿ ಪೊಲೀಸರ ಹೇಳಿಕೆ ಮತ್ತು ದೋಷಾರೋಪಣ ಪಟ್ಟಿಯಲ್ಲಿರುವ ಅಂಶಗಳ ಮುಖಾಂತರ ಫಿರ್ಯಾದುದಾರ ಪತ್ನಿಯ ದೂರಿನ ಲೋಪಗಳನ್ನು ಹೆಕ್ಕಿ ತೋರಿಸಿರುವ ನ್ಯಾಯಪೀಠ, 'ಭಾರತೀಯ ಸಂಪ್ರದಾಯದಂತೆ ವಿಧಿಬದ್ಧವಾಗಿ ಪಾಣಿಗ್ರಹಣ ಮಾಡಿರುವ ತನ್ನ ಪತಿಯ ವಿರುದ್ಧ ಧರ್ಮಪತ್ನಿ ಸಲ್ಲದ ಆರೋಪ ಹೊರಿಸಿ ಆತನನ್ನು ಕಂಗಾಲಾಗಿಸಿದ್ದಾರೆ. ಕ್ಷುಲ್ಲಕ ಮತ್ತು ಕೌಟುಂಬಿಕ ಕಾರಣಗಳಿಗೆ ರೋಗದ ಲೇಪನ ಮಾಡಿ ವ್ಯಾಜ್ಯ ಹೂಡಿ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿದ್ದಾರೆ. ಹೀಗಾಗಿ, ಈ ಪ್ರಕರಣ ಪತ್ನಿಯ ವಿರುದ್ಧ ಪತಿ ಐಪಿಸಿ ಕಲಂ 211ರ ಅಡಿಯಲ್ಲಿ ಕ್ರಿಮಿನಲ್ ದೂರು ದಾಖಲಿಸಿ ತಮಗಾಗಿರುವ ಅನ್ಯಾಯದ ವಿರುದ್ಧ ನ್ಯಾಯಪಡೆಯಲು ಅತ್ಯಂತ ಯೋಗ್ಯವಾಗಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
'ವರದಕ್ಷಿಣೆ ಬೇಡಿದ್ದಾರೆ ಎಂಬ ಅನುಮಾನಗಳ ಹುತ್ತಕಟ್ಟಿ, ಪತ್ನಿಯು ತನ್ನ ಪತಿಯನ್ನು ಎಚ್‌ಐವಿ, ಸಿಫಿಲಿಸ್, ಹೆಪಟೈಟಿಸ್ ಬಿ ಮತ್ತು ಎಸ್‌ಟಿಡಿ ಪರೀಕ್ಷೆಗಳಿಗೆ ಒಳಪಡುವಂತೆ ಒತ್ತಾಯಿಸಿದ್ದಾರೆ. ಆದರೆ, ಈ ಸಂಬಂಧ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾದ ಈ ಎಲ್ಲಾ ಪರೀಕ್ಷೆಗಳಲ್ಲೂ ಪತಿಗೆ ಯಾವುದೇ ರೋಗವಿಲ್ಲ ಎಂಬುದು ದೃಢಪಟ್ಟಿದೆ. ಆಕೆಯ ತಾಯಿ ಮತ್ತು ಸಹೋದರ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವರದಕ್ಷಿಣೆ ಕಿರುಕುಳದ ಬಗ್ಗೆ ನಿರಾಕರಿಸಿದ್ದಾರೆ. ಹೀಗಾಗಿ, ಈ ಪ್ರಕರಣದಲ್ಲಿನ ಸಂಪೂರ್ಣ ದಾಖಲೆಗಳನ್ನು ಗಮನಿಸಿದಾಗ ಪತಿಯ ದೋಷ, ಕೌಟುಂಬಿಕ ಕ್ರೌರ್ಯದ ಆರೋಪಗಳು ನಿರಾಧಾರ ಎಂಬುದು ಸ್ಪಷ್ಟವಾಗಿದೆ' ಎಂದು ನ್ಯಾಯಪೀಠ ವಿವರಿಸಿದೆ.
ಪ್ರಕರಣದ ಹಿನ್ನಲೆ: ದೋಷಾರೋಪಣಾ ಪಟ್ಟಿಯ ಅನುಸಾರ, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯ ನಿವಾಸಿಯಾದ ಪತ್ನಿ 2020ರಲ್ಲಿ ಸ್ವಜಾತಿ ವಧು-ವರರ ಮಾಹಿತಿ ಜಾಲತಾಣದ ಮುಖಾಂತರ ತನ್ನ ಪತಿಯನ್ನು ಕಂಡುಕೊಂಡಿದ್ದರು. ಹಿಂದೂ ಧಾರ್ಮಿಕ ವಿಧಿ ವಿಧಾನಗಳಿಗೆ ಅನುಗುಣವಾಗಿ 2020ರ ಮೇ 29ರಂದು ಮದುವೆಯಾಗಿದ್ದರು.
ಮದುವೆಯ ಮೊದಲ ರಾತ್ರಿ ಇಬ್ಬರೂ ದೈಹಿಕ ಸಂಪರ್ಕದಿಂದ ದೂರವಿದ್ದರು. ಎಚ್-1ಬಿ ವಿಸಾ ಹೊಂದಿದ್ದ ಪತಿ ಮದುವೆಯಾದ 40ನೇ ದಿನಕ್ಕೆ ಅಮೆರಿಕಕ್ಕೆ ತೆರಳಿದ್ದರು. ಈ 40 ದಿನಗಳ ಅಂತರದಲ್ಲಿ ಪತಿ ಏನಾದರೂ ಒಂದು ನೆಪ ಹೇಳಿ ನನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ನಿರಾಕರಿಸಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು.












Click it and Unblock the Notifications