ಹಾಸನದ ವಕೀಲ ದೇವರಾಜೇಗೌಡಗೆ ಜಾಮೀನು ನೀಡಿದ ಕೋರ್ಟ್
ಬೆಂಗಳೂರು, ಜುಲೈ 02: ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಬಂಧನಕ್ಕೊಳಗಾಗಿರುವ ಹಾಸನದ ವಕೀಲ ಜಿ. ದೇವರಾಜೇಗೌಡಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ಜಿ. ಉಮಾ ಅವರಿದ್ದ ಏಕಸದಸ್ಯಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು. ವಾದ-ಪ್ರತಿವಾದ ಆಲಿಸಿದ ಬಳಿಕ ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎನಿಸುತ್ತದೆಂದು ಹೇಳಿ ಜಾಮೀನು ನೀಡಿತು.

ಇದೇ ದೇವರಾಜೇಗೌಡ ಅವರ ಹೆಸರು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲೂ ಕೇಳಿ ಬಂದಿತ್ತು. ಅದರಲ್ಲೂ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಆ ಮಧ್ಯೆ ಅವರೇ ಬಂಧನಕ್ಕೊಳಗಾಗಿ ಇದೀಗ ಜೈಲು ಸೇರಿದ್ದರು. ಹಾಸನದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಆರೋಪಿ ಜಿ. ದೇವರಾಜೇಗೌಡಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಸುಳ್ಳು ಆರೋಪ: ದೇವರಾಜೇಗೌಡ ತಾನು ಅಮಾಯಕರಾಗಿದ್ದೇನೆ. ಸುಳ್ಳು ಆರೋಪ ಮಾಡಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪೊಲೀಸರು ಹಾಗೂ ದೂರುದಾರೆ ಮಹಿಳೆ ದುರುದ್ದೇಶ ಹೊಂದಿದ್ದಾರೆ. ದೂರುದಾರೆ ಮಹಿಳೆಯೇ ತನ್ನ ನಿವೇಶನದ ವ್ಯಾಜ್ಯದ ವಿಚಾರವಾಗಿ ನನ್ನನ್ನು ಸಂಪರ್ಕಿಸಿದ್ದರು.
ನಂತರ ನನ್ನ ನಂಬರ್ ಪಡೆದು ಸಂದೇಶ ಕಳುಹಿಸಿದ್ದರು. ಕೆಲ ಕಾಲದ ನಂತರ ನನ್ನ ಕಛೇರಿಗೆ ದೂರೆದಾರೆಯ ಪತಿ ಭೇಟಿ ನೀಡಿ ನನ್ನ ಮೇಲೆ ಮಾಟ ಮಂತ್ರ ಮಾಡಿಸಿದ್ದರು. ದೂರುದಾರೆ ನನಗೆ ಕುಂಕುಮವನ್ನು ಹಣೆಗೆ ಹಚ್ಚಿದರು. ಆಗ ನನಗೆ ತಲೆ ತಿರುಗಿತು. ನಂತರ ವಿಡಿಯೋಕಾಲ್ ಮಾಡಿ ನನಗೆ ಲೈಂಗಿಕ ಪ್ರಚೋದನೆ ನೀಡುತ್ತಿದ್ದರು. ಮಾಟಮಂತ್ರದಿಂದ ನಾನು ಬಲಿಪಶುವಾದೆ. ಆಕೆಯೇ ಕರೆ ಮಾಡಿ ಖಾಸಗಿ ಅಂಗ ತೋರಿಸುತ್ತಿದ್ದರು. ಮಹಿಳೆಯರನ್ನು ತೋರಿಸಿ ಕಾಮ ಪ್ರಚೋದನೆ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ನಂತರ ಅನಾಮಧೇಯ ವ್ಯಕ್ತಿ ನನಗೆ ಕರೆ ಮಾಡಿ 2 ಕೋಟಿ ಹಣ ನೀಡಬೇಕು. ಇಲ್ಲವಾದರೆ ನಿನ್ನ ಅಶ್ಲೀಲ ಫೋಟೋ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು.
ಈ ಬಗ್ಗೆ ನಾನು ಬೆಂಗಳೂರಿನ ಹೆಬ್ಬಾಳ ಠಾಣೆಗೆ ದೂರು ನೀಡಿದೆ. ವಿಚಾರಣೆಗೆ ಹಾಜರಾದ ದೂರುದಾರೆಯು ಆ ವೇಳೆ ನನ್ನ ಮೇಲೆ ಯಾವುದೇ ಆರೋಪ ಮಾಡಿಲ್ಲ. ನಂತರ ಏ.4ರಂದು ಆಕೆ ದೂರು ನೀಡಿದ್ದಾರೆ. ದುರುದ್ದೇಶದಿಂದ ನನ್ನ ವಿರುದ್ಧ ದೂರು ದಾಖಲಿಸಿರುವುದನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದು ದೇವರಾಜೇಗೌಡ ಕೋರಿದ್ದರು.
ಏನಿದು ಪ್ರಕರಣ: ದೇವರಾಜೇಗೌಡ ವಿರುದ್ಧ ಮಹಿಳೆಯೊಬ್ಬರು ಹೊಳೆನರಸೀಪುರ ಠಾಣೆಗೆ 2024ರ ಏ.1ರಂದು ದೂರು ದಾಖಲಿಸಿದ್ದರು. ನಿವೇಶನ ವಿಚಾರವಾಗಿ ಅವರನ್ನು ಭೇಟಿ ಮಾಡಿದ್ದೆ. ಅಂದಿನಿಂದ ತನ್ನೊಂದಿಗೆ ಅವರು ಮಾತನಾಡುತ್ತಿದ್ದರು ಎಂದು ಹೇಳಿದ್ದರು.
ಹೊಳೆನರಸೀಪುರ ರಸ್ತೆಗೆ ಹೊಂದಿಕೊಂಡಿರುವ ಬಿಯರ್ ತಯಾರಿಕಾ ಘಟಕದ ಹಿಂದಿರುವ ಪ್ರದೇಶಕ್ಕೆ ಕರೆದೊಯ್ದು, ಮೈ ಕೈಮುಟ್ಟಿ ದೈಹಿಕ ಹಿಂಸೆ ನೀಡಿದ್ದಾರೆ. ನಂತರ ತಮ್ಮ ಮನೆಗೆ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.












Click it and Unblock the Notifications