ಜಾಹೀರಾತಲ್ಲಿ ಸಿಎಂ, ಡಿಸಿಎಂ ಫೋಟೋ ತೆಗೆಯುವಂತೆ ಕೋರಿದ್ದ ಅರ್ಜಿ ವಜಾ
ಬೆಂಗಳೂರು, ಸೆಪ್ಟೆಂಬರ್ 27; ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಜಾಹೀರಾತು ಮತ್ತು ಒಪ್ಪಿಗೆ ಆದೇಶಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಭಾವಚಿತ್ರ, ಹೆಸರು ಬಳಕೆಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ. ಇದರಿಂದಾಗಿ ಇನ್ನು ಮುಂದೆ ಸರ್ಕಾರಿ ಜಾಹೀರಾತುಗಳಲ್ಲಿ ಯಾವುದೇ ನಿರ್ಬಂಧ ಇಲ್ಲದೆ ಸಿಎಂ, ಡಿಸಿಎಂ ಹಾಗೂ ಜನಪ್ರತಿನಿಧಿಗಳ ಫೋಟೋವನ್ನು ಹಾಕಿಕೊಳ್ಳಬಹುದಾಗಿದೆ.
ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರವಾಗಿ ವಾದಿಸಿದ ವಕೀಲ ಎಸ್. ಉಮಾಪತಿ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಭಾವಚಿತ್ರ ಮತ್ತು ಹೆಸರು ಬಳಕೆ ಮಾಡಲಾಗುತ್ತದೆ.
ಸರ್ಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ, ಮಂತ್ರಿಗಳ ಭಾವಚಿತ್ರ ಬಳಸದಂತೆ ಸುಪ್ರೀಂಕೋರ್ಟ್ ಆದೇಶವಿದೆ. ಇದನ್ನು ಉಲ್ಲಂಘಿಸಲಾಗಿದೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭಾವಚಿತ್ರ ಬಳಕೆ ಮಾಡಿಕೊಂಡು ಪ್ರಚಾರ ನಡೆಸಲಾಗುತ್ತಿದೆ. ಈ ಮೂಲಕ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಾದಿಸಿದರು.
ಆಯ್ಕೆ ಮಾಡಬಾರದು; ಅದಕ್ಕೆ ಪೀಠವು 'ಜನರಿಗೆ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದವರು ಸಹಜವಾಗಿ ಯಾವೆಲ್ಲಾ ಕಾರ್ಯಕ್ರಮಗಳನ್ನು ಮತದಾರರಿಗೆ ರೂಪಿಸಲಾಗಿದೆ ಎಂಬ ಮಾಹಿತಿಯನ್ನು ನೀಡುತ್ತಾರೆ. ಇದರಲ್ಲಿ ತಪ್ಪೇನಿದೆ?. ಇದಕ್ಕೆ ನಿಮ್ಮ ಆಕ್ಷೇಪವೇನಾದರೂ ಇದ್ದರೆ ಅಂಥವರನ್ನು ಆಯ್ಕೆ ಮಾಡಬಾರದು' ಎಂದು ಹೇಳಿತು.
ಸುಪ್ರೀಂಕೋರ್ಟ್ ಈ ಕುರಿತಂತೆ ಹಿಂದೆ ನೀಡಿದ್ದ ಆದೇಶವನ್ನು ಪರಿಷ್ಕರಿಸಿದೆ. ಹೈಕೋರ್ಟ್ ಕೂಡ ಪ್ರತ್ಯೇಕ ಆದೇಶ ನೀಡಿದೆ, ಅದರಂತೆ ಜನಪ್ರತಿನಿಧಿಗಳು ಸರ್ಕಾರಿ ಯೋಜನೆಗಳಲ್ಲಿ ತಮ್ಮ ಫೋಟೋ ಬಳಸಲು ಅವಕಾಶವಿದೆ. ಅದಕ್ಕೆ ಯಾವುದೇ ನಿರ್ಬಂಧ ವಿಧಿಸಲಾಗದು ಎಂದು ನ್ಯಾಯಪೀಠ ಹೇಳಿತು. ಅಂತಿಮವಾಗಿ ಅರ್ಜಿದಾರರ ವಾದದಿಂದ ತೃಪ್ತಿಯಾಗದ ನ್ಯಾಯಪೀಠವು ಅರ್ಜಿ ವಜಾ ಮಾಡಿ, ವಿಸ್ತೃತ ಆದೇಶ ಪ್ರಕಟಿಸಲಾಗುವುದು ಎಂದು ಹೇಳಿತು.
ಕರ್ನಾಟಕದ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಯನ್ನು ಜನರಿಗೆ ನೀಡಿ ಅಧಿಕಾರಕ್ಕೆ ಬಂದಿತು. 100 ದಿನದಲ್ಲಿ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಕುರಿತು ಸರ್ಕಾರಿ ಜಾಹೀರಾತುಗಳನ್ನು ನೀಡುತ್ತಿದೆ. ಈ ಜಾಹೀರಾತುಗಳಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ವಿವಿಧ ಖಾತೆಯ ಸಚಿವರ ಫೋಟೋಗಳನ್ನು ಬಳಕೆ ಮಾಡಲಾಗುತ್ತಿದೆ.












Click it and Unblock the Notifications