ರಾಘವೇಶ್ವರ ಸ್ವಾಮೀಜಿ ಪೀಠತ್ಯಾಗಕ್ಕೆ ಹವ್ಯಕ ವೇದಿಕೆ ಪಟ್ಟು
ಬೆಂಗಳೂರು, ಅಕ್ಟೋಬರ್. 24 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಕೂಡಲೇ ಪೀಠತ್ಯಾಗ ಮಾಡಬೇಕು ಎಂದು ಸಮಾನ ಮನಸ್ಕ ಹವ್ಯಕ ವೇದಿಕೆ ಆಗ್ರಹಿಸಿದೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ವೇದಿಕೆ ಪ್ರಮುಖರು ಮಠದ ಪರಂಪರೆ ಕಾಪಾಡಲು ಸ್ವಾಮೀಜಿ ಪೀಠ ತ್ಯಾಗ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಮಾನ ಮನಸ್ಕರ ಹವ್ಯಕ ವೇದಿಕೆ ಗೌರವಾಧ್ಯಕ್ಷ, ಮಾಜಿ ಸಚಿವ ಕೆ ಎಚ್ ಶ್ರೀನಿವಾಸ್, ಭಕ್ತರಿಗೆ ಮಠದ ಮೇಲಿನ ಗೌರವ ಕಡಿಮೆಯಾಗಲು ಇತ್ತೀಚಿನ ಕೆಲ ಬೆಳವಣಿಗೆಗಳು ಕಾರಣವಾಗಿವೆ. ಆರೋಪ ಹೊತ್ತಿರುವ ಸ್ವಾಮೀಜಿ ಪೀಠ ತ್ಯಾಗ ಮಾಡಿದರೆ ಉತ್ತಮ. ಅದರಿಂದ ಸಮುದಾಯ ಭದ್ರತೆ ಮತ್ತು ಗೌರವ ಕಾಪಾಡಿದಂತಾಗುತ್ತದೆ ಎಂದು ಹೇಳಿದರು.[ಬ್ರಹ್ಮಚರ್ಯ, ಸನ್ಯಾಸತ್ವದ ಮಹತ್ವ ಹರಿಯ ಬಿಟ್ಟವರಿಗೇನು ಗೊತ್ತು!]

ಗಾಯಕಿ ಪ್ರೇಮಲತಾ ದಿವಾಕರ್ ಮತ್ತು ಯಕ್ಷಗಾನ ಕಲಾವಿದೆಯೊಬ್ಬರು ಸ್ವಾಮೀಜಿ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಅಲ್ಲದೇ ಸ್ವಾಮೀಜಿ ಮೇಲೆ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಇದೆಲ್ಲರಿಂದ ಹೊರಬರುವವರೆಗೂ ಸ್ವಾಮೀಜಿ ಪೀಠ ತ್ಯಾಗ ಮಾಡಬೇಕು ಎಂದು ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಧರ್ಮ ಬೋಧನೆ ಮಾಡಲು ರಾಮಚಂದ್ರಾಪುರ ಮಠ ಸ್ಥಾಪನೆಯಾಗಿದೆ. ಮಠಕ್ಕೆ 1,200 ವರ್ಷಗಳ ಇತಿಹಾಸ ಇದೆ. ಶುದ್ಧ ಚಾರಿತ್ರ್ಯ ಉಳ್ಳವರು ಪೀಠದಲ್ಲಿರಬೇಕು. ಕಳಂಕಿತರು ಪೀಠದಲ್ಲಿ ಮುಂದುವರೆಯಬಾರದು ಎಂದು ಹೇಳಿದರು.['169 ಬಾರಿ ರೇಪ್ ಆಗುವವರೆಗೆ ಯಾರಾದ್ರೂ ಸುಮ್ಮನಿರ್ತಾರಾ?']
ದಾಖಲಾಗಿರುವ ಪ್ರಕರಣಗಳಿಗೆ ಸ್ವಾಮೀಜಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ. ಎರಡು ಪ್ರಕರಣಗಳ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು ಹಲವಾರು ದಾಖಲೆಗಳನ್ನು ಕಲೆಹಾಕಿದೆ.












Click it and Unblock the Notifications