ಯಕ್ಷಲೋಕದ ಧೃವತಾರೆ ಚಿಟ್ಟಾಣಿ ನಿಧನ: ಶ್ರದ್ದಾಂಜಲಿ ಸಭೆ
ಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನಕ್ಕೆ ಭಾವಪೂರ್ಣ ಶ್ರದ್ದಾಂಜಲಿ ಸಭೆಯನ್ನು ಅಖಿಲ ಹವ್ಯಕ ಮಹಾಸಭಾ ಆಯೋಜಿಸಿದೆ. ಇದೇ ಅಕ್ಟೋಬರ್ 15 ರಂದು ಮಹಾಸಭೆಯ ಅವರಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ನುಡಿನಮನ ಸಲ್ಲಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರು, ಅ 4: ಯಕ್ಷಲೋಕದ ಧೃವತಾರೆ ಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನಕ್ಕೆ ಭಾವಪೂರ್ಣ ಶ್ರದ್ದಾಂಜಲಿ ಸಭೆಯನ್ನು ಅಖಿಲ ಹವ್ಯಕ ಮಹಾಸಭಾ ಆಯೋಜಿಸಿದೆ.
ಇದೇ ಅಕ್ಟೋಬರ್ 15 ರಂದು ಮಹಾಸಭೆಯ ಅವರಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ನುಡಿನಮನ ಸಲ್ಲಿಸಲು ತೀರ್ಮಾನಿಸಲಾಗಿದ್ದು, ಯಕ್ಷಲೋಕದ ದಿಗ್ಗಜನಿಗೆ ಹವ್ಯಕ ಮಹಾಸಭೆಯ ಮೂಲಕ ಗೌರವಾರ್ಪಣೆ ಸಲ್ಲಿಸಲಾಗುತ್ತಿದೆ.
(ಚಿಟ್ಟಾಣಿ ರಾಮಚಂದ್ರ ಹೆಗಡೆಗೆ ನುಡಿನಮನ)

ಹವ್ಯಕ ಸಮಾಜದ ಹೆಮ್ಮೆಯ ಪುತ್ರ, ಯಕ್ಷಲೋಕದ ಧೃವನಕ್ಷತ್ರ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಮರಣಹೊಂದಿರುವುದು ಕಲಾ ಪ್ರಪಂಚಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದ್ದು, ಕಲಾತಪಸ್ವಿಯ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಸಮಸ್ತ ಹವ್ಯಕ ಸಮಾಜದ ಪರವಾಗಿ ಹವ್ಯಕ ಮಹಾಸಭೆ ಪ್ರಾರ್ಥಿಸುತ್ತದೆ ಎಂದು ಅಖಿಲ ಹವ್ಯಕ ಮಹಾಸಭಾ (ರಿ) ಅಧ್ಯಕ್ಷರಾದ ಡಾ. ಗಿರಿಧರ್ ಕಜೆ ಹೇಳಿದ್ದಾರೆ.
ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಚಿಟ್ಟಾಣಿಯವರ ಕೊಡುಗೆ ಅನನ್ಯವಾಗಿದ್ದು, ತಮ್ಮದೇ ಆದ ವಿಶೇಷತೆಗಳಿಂದ ಯಕ್ಷಗಾನ ರಂಗದ ಮೆರುಗನ್ನು ಹೆಚ್ಚಿಸಿದ ಕೀರ್ತಿ ಚಿಟ್ಟಾಣಿಯವರಿಗೆ ಸಲ್ಲುತ್ತದೆ.
ಸರಳ ಸಜ್ಜನಿಕೆಯ ಕಲಾತಪಸ್ವಿಗೆ ನಾಡಿನ ಉನ್ನತವಾದ ಗೌರವವಾದ 'ಪದ್ಮಶ್ರೀ' ಪ್ರಶಸ್ತಿ ಲಭಿಸಿದ್ದು, ಯಕ್ಷಗಾನದ ಜೊತೆಗೆ ಹವ್ಯಕ ಸಮಾಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ಅಕ್ಟೋಬರ್ 8 ರಂದು ಹವ್ಯಕ ಮಹಾಸಭೆ ಆಯೋಜಿಸಿರುವ 'ಸಂಸ್ಕಾರೋತ್ಸ'ವಕ್ಕೆ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ವೀಡಿಯೋ ಸಂದೇಶವನ್ನು ನೀಡಿದ್ದು, ಬಹುಶಃ ಅದು ಸಮಾಜಕ್ಕೆ ಅವರ ಕೊಟ್ಟಕೊನೆಯ ಸಂದೇಶವಾಗಿದೆ. ಎಂದು ಹವ್ಯಕ ಮಹಾಸಭಾದ ಪ್ರಧಾನ ಕಾರ್ಯದರ್ಶಿ ವೇಣು ವಿಘ್ನೇಶ್ ಸಂಪ ಹೇಳಿದ್ದಾರೆ.












Click it and Unblock the Notifications