ಹಾವೇರಿ ಶಾಸಕ ನೆಹರೂ ಓಲೇಕಾರ್ ಚುನಾವಣೆಗೆ ಸ್ಪರ್ಧಿಸಲು ಹಾದಿ ಸುಗಮ!
ಬೆಂಗಳೂರು, ಏಪ್ರಿಲ್ 06; ಸ್ವಜನ ಪಕ್ಷಪಾತ ಮತ್ತು ಕ್ರಿಮಿನಲ್ ವಂಚನೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಅನರ್ಹತೆ ಭೀತಿ ಎದುರಿಸುತ್ತಿದ್ದ ಹಾವೇರಿಯ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಕೊನೆಗೂ ಆದರಿಂದ ಪಾರಾಗಿದ್ದಾರೆ. ಅವರನ್ನು ದೋಷಿ ಎಂದು ತೀರ್ಮಾನಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಇದೇ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ವಿಧಿಸಿದ್ದ ಎರಡು ವರ್ಷ ಶಿಕ್ಷೆಗೆ ಹೈಕೋರ್ಟ್ ತಡೆ ಹಾಕಿತ್ತು. ದೋಷಿ ಮತ್ತು ಶಿಕ್ಷೆ ಆದೇಶಗಳೆರಡಕ್ಕೂ ತಡೆಯಾಗಿರುವುದರಿಂದ ಶಾಸಕ ನೆಹರು ಓಲೇಕಾರ್ ಅವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹಾದಿ ಸುಗಮವಾಗಿದೆ. ಕರ್ನಾಟಕದಲ್ಲಿ ಮೇ 10ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ಬಿಜೆಪಿ ಚುನಾವಣೆಗೆ ಇನ್ನೂ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಸಿಗಲಿದೆಯೇ? ಕಾದು ನೋಡಬೇಕಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಧಿಸಿರುವ ಎರಡು ವರ್ಷಗಳ ಶಿಕ್ಷೆ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಶಾಸಕ ನೆಹರು ಎಸ್. ಓಲೇಕಾರ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೆ. ನಟರಾಜನ್ ನೇತೃತ್ವದ ಏಕಸದಸ್ಯ ಪೀಠ ಬುಧವಾರ ತೀರ್ಪು ಪ್ರಕಟಿಸಿದೆ. ಹಾವೇರಿ ನಗರಸಭೆ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ಹಣ ನಷ್ಟ ಉಂಟುಮಾಡಿದ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಓಲೇಕಾರ್, ಅವರ ಇಬ್ಬರು ಪುತ್ರರು ಮತ್ತು ಅಧಿಕಾರಿಗಳನ್ನು ದೋಷಿಗಳು ಎಂದು ಪರಿಗಣಿಸಿ ತಲಾ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಓಲೇಕಾರ್ ಅವರು ಫೆಬ್ರವರಿ 23ರಂದು ಕರ್ನಾಟಕ ಹೈಕೋರ್ಟ್ ಕದ ತಟ್ಟಿದ್ದರು. ವಿಚಾರಣಾಧೀನ ನ್ಯಾಯಾಲಯವು ಖಾಸಗಿ ದೂರನ್ನು ಪರಿಗಣಿಸುವ ಕಾನೂನು ಪಾಲಿಸಿಲ್ಲ. ಹೀಗಾಗಿ, ಮೊದಲಿಗೆ ದೋಷಿ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯವು ಮಾರ್ಚ್ 4ರಂದು ಮಾನ್ಯ ಮಾಡಿತ್ತು. ಇದರ ಆಧಾರದ ಮೇಲೆ ಜೈಲು ಶಿಕ್ಷೆಗೆ ತಡೆ ನೀಡುವಂತೆ ಕೋರಿ ಇನ್ನೊಂದು ಮಧ್ಯಂತರ ಅರ್ಜಿಯನ್ನು ದಾಖಲಿಸಲಾಗಿತ್ತು. ಈಗ ಅದನ್ನೂ ಹೈಕೋರ್ಟ್ ಮಾನ್ಯ ಮಾಡಿರುವುದರಿಂದ ಓಲೇಕಾರ್ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದಾಗಿದೆ.
ಪ್ರಕರಣದ ಹಿನ್ನೆಲೆ:
ಸ್ವಜನ ಪಕ್ಷಪಾತ ಮತ್ತು ಕ್ರಿಮಿನಲ್ ವಂಚನೆ ಪ್ರಕರಣದಲ್ಲಿ ಶಾಸಕ ನೆಹರು ಓಲೇಕಾರ್ ಮತ್ತು ಅವರ ಇಬ್ಬರು ಪುತ್ರ ದೇವರಾಜ್ ಮತ್ತು ಮಂಜುನಾಥ್ ಹಾಗೂ ಐವರು ಅಧಿಕಾರಿಗಳಿಗೆ ತಲಾ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಫೆಬ್ರವರಿ 13ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿತ್ತು. 2013ರಲ್ಲಿ ಹಾವೇರಿಯ ಶಶಿಧರ್ ಹಳ್ಳಿಕೇರಿ ಅವರು ದೂರು ದಾಖಲಿಸಿ, 2008 ಮತ್ತು 2013ರ ಅವಧಿಯಲ್ಲಿ ಶಾಸಕರಾಗಿದ್ದ ಓಲೇಕಾರ್ ಅವರು ಸರ್ಕಾರದ ಸಿವಿಲ್ ಕೆಲಸಗಳನ್ನು ಬೇರೆಯವರಿಗೆ ದಕ್ಕದಂತೆ ತಮ್ಮ ಇಬ್ಬರು ಪುತ್ರರಿಗೆ ಕೊಡಿಸಿದ್ದರು ಎಂದು ಆರೋಪಿಸಿದ್ದರು. ಈ ಖಾಸಗಿ ದೂರನ್ನು ಆಧರಿಸಿ ಹಾವೇರಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿತ್ತು.

ಇದರ ಅನ್ವಯ ಐಪಿಸಿ ಸೆಕ್ಷನ್‌ಗಳಾದ 197, 198, 409 ಮತ್ತು 420 ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 13(1) (ಡಿ) ಜೊತೆಗೆ 13(2) ಅಡಿ ಪ್ರಕರಣ ದಾಖಲಿಸಿ, ಲೋಕಾಯುಕ್ತ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು ಜೈಲು ಶಿಕ್ಷೆಯ ಜೊತೆಗೆ ಶಾಸಕ ಓಲೆಕಾರ್‌ಗೆ 2,000 ರೂ. ದಂಡ ವಿಧಿಸಿದ್ದು, ಅವರ ಇಬ್ಬರು ಪುತ್ರರಿಗೆ ತಲಾ 6,000 ರೂ. ಹಾಗೂ 4,5,7,8 ಮತ್ತು 9ನೇ ಆರೋಪಿಗಳಿಗೆ ತಲಾ 8,000 ರೂ. ದಂಡ ವಿಧಿಸಿತ್ತು. ದೋಷಿಗಳ ಪೈಕಿ ಓಲೇಕಾರ್ ಮಾತ್ರ ಹೈಕೋರ್ಟ್ ಕದತಟ್ಟಿದ್ದಾರೆ.












Click it and Unblock the Notifications