ನ್ಯಾಯಾಲಯದಲ್ಲಿ ಶಿಷ್ಟಾಚಾರ ಮರೆತ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೈಕೋರ್ಟ್ ಗರಂ
ಬೆಂಗಳೂರು.ಅ.20: ಚುನಾವಣಾ ತಕರಾರು ಅರ್ಜಿ ಸಂಬಂಧ ಹೈಕೋರ್ಟ್‌ಗೆ ವಿಚಾರಣೆಗೆ ಹಾಜರಾಗಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ವಿಚಾರಣೆ ವೇಳೆ ಅನುಮತಿ ಇಲ್ಲದೆ, ಶಿಷ್ಟಾಚಾರ ಉಲ್ಲಂಘಿಸಿ ವಕೀಲರ ಜೊತೆ ಔಪಚಾರಿಕವಾಗಿ ಮಾತನಾಡಲು ಮುಂದಾದ ಪ್ರಜ್ವಲ್ ವಿರುದ್ಧ ನ್ಯಾಯಾಲಯ ಗರಂ ಆಗಿ 'ನಿಮ್ಮ ಮಿತಿ ಅರ್ಥ ಮಾಡಿಕೊಳ್ಳಿ, ಇಲ್ಲಿ ಮಾತನಾಡಬೇಡಿ, ಬೇಕಿದ್ದರೆ ಹೊರಗೆ ಹೋಗಿ' ಎಂದು ವಾರ್ನಿಂಗ್ ನೀಡಿದೆ.
'ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧುಗೊಳಿಸಬೇಕೆಂದು ಕೋರಿ ಪರಾಜಿತ ಅಭ್ಯರ್ಥಿ ಎ.ಮಂಜು ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ವಕೀಲರು ಕೇಳಿದ ಪ್ರಶ್ನೆಗಳಿಗೆ ಪ್ರಜ್ವಲ್ ಉತ್ತರಿಸಿದರು. ಆ ನಂತರ ವಕೀಲರ ಜೊತೆ ಮಾಮೂಲಿಯಾಗಿ ಮಾತನಾಡಲು ಮುಂದಾದ್ದಕ್ಕೆ ನ್ಯಾಯಮೂರ್ತಿ ಕೋರ್ಟ್‌ಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದು ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
'ಚುನಾವಣೆಯಲ್ಲಿ ನಿಮ್ಮ ಪರ ಪ್ರಚಾರ ಮಾಡಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಲಿಕಾಪ್ಟರ್‌ನಲ್ಲಿ ಕಡೂರಿಗೆ ಬಂದಿದ್ದು ನಿಜವೇ, ಈ ಪ್ರಯಾಣದ ಖರ್ಚು ವೆಚ್ಚವನ್ನು ನೀವು ಆಯೋಗದ ಮುಂದೆ ವಿವರಿಸಿದ್ದೀರಾ' ಎಂಬ ಪ್ರಶ್ನೆಗೆ, 'ಹೌದು, ಅವರು ಹೆಲಿಕಾಪ್ಟರ್‌ನಲ್ಲಿ ಬಂದದ್ದು ನಿಜ. ಅವರಿಬ್ಬರೂ ಸ್ಟಾರ್ ಕ್ಯಾಂಪೇನರ್. ಆಯೋಗದ ನಿಯಮಗಳ ಪ್ರಕಾರ ಸ್ಟಾರ್ ಕ್ಯಾಂಪೇನರ್ ಅವರ ಖರ್ಚು ವೆಚ್ಚಗಳನ್ನು ನಮೂದು ಮಾಡಬೇಕಾಗಿಲ್ಲ' ಎಂದು ಉತ್ತರಿಸಿದರು.
ಮತ್ತೊಂದು ಪ್ರಶ್ನೆಗೆ, 'ನಾನು 1.45 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೇನೆ. ಆಯೋಗವು ನನಗೆ ಗೆದ್ದ ಅಭ್ಯರ್ಥಿ ಎಂದು ಪ್ರಮಾಣ ಪತ್ರ ನೀಡಿದೆ' ಎಂದರು.

'ಈ ಅರ್ಜಿಯಲ್ಲಿ ನಿಮ್ಮ ಮನವಿ ಏನು' ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಲು ಪ್ರಜ್ವಲ್ ರೇವಣ್ಣ ತಡಬಡಾಯಿಸಿದರು. ನಂತರ ಅವರ ಹೇಳಿಕೆ ದಾಖಲಿಸಿಕೊಂಡು, ಪಾಟಿ ಸವಾಲಿಗೆ ತಯಾರಾಗುವಂತೆ ತಿಳಿಸಲಾಯಿತು. ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಲಾಗಿದೆ.
ಈ ಮಧ್ಯೆ ನ್ಯಾಯಾಲಯ ಇತ್ತೀಚೆಗೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದು ಪ್ರಜ್ವಲ್ ರೇವಣ್ಣಗೆ ಬೆನ್ನುಹುರಿಯ ನೋವಿಗೆ ತಜ್ಞರಿಂದ ಚಿಕಿತ್ಸೆ ಪಡೆಯಲು ಲಂಡನ್‌ಗೆ ಪ್ರಯಾಣಿಸಲು ಅನುಮತಿ ನೀಡಿತು.
'ತಾನು ಆಗಸ್ಟ್ ಕೊನೆಯ ವಾರದಲ್ಲೇ ಹೋಗಬೇಕಿತ್ತು. ಆದರೆ, ವಿಚಾರಣೆಯ ಕಾರಣದಿಂದಾಗಿ ಹೋಗಲಾಗಿಲ್ಲ. ಇದೇ 23 ಮತ್ತು 26ರಂದು ವೈದ್ಯರು ನನಗೆ ದಿನಾಂಕ ನಿಗದಿಗೊಳಿಸಿದ್ದಾರೆ. ನವೆಂಬರ್ 1ಕ್ಕೆ ವಾಪಸು ಬರುತ್ತೇನೆ' ಎಂದು ಸಂಸದರು ಕೋರ್ಟ್‌ಗೆ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಚುನಾವಣಾ ಅಕ್ರಮ ಎಸಗಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿಯ ಕುರಿತು ನಿಖರ ಮಾಹಿತಿ ನೀಡಿಲ್ಲ. ಖರ್ಚು-ವೆಚ್ಚಗಳನ್ನು ವಿವರ ಸರಿಯಾಗಿ ಸಲ್ಲಿಸಿಲ್ಲ. ಆದ್ದರಿಂದ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಅರ್ಜಿದಾರರ ಮನವಿ ಮಾಡಿದ್ದಾರೆ.
ಆರೋಪವೇನು?: ಸಂಸದ ಪ್ರಜ್ವಲ್ ರೇವಣ್ಣ ಅಕ್ರಮವಾಗಿ ಆಸ್ತಿಗಳಿಸಿದ್ದಾರೆ. ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ್ದಾರೆ. ಹಲವು ಕಂಪನಿಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಆದರೆ, ಚುನಾವಣೆ ವೇಳೆ ನಾಮಪತ್ರ ಸಲ್ಲಿಸುವಾಗ ಇವುಗಳ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂಬುದು ಆರೋಪವಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಇದ್ದ ಆರೋಪವೇನು?: "ಪ್ರಜ್ವಲ್ ರೇವಣ್ಣ ಅಕ್ರಮವಾಗಿ ಆಸ್ತಿ ಗಳಿಕೆ ಮಾಡಿ ಸುಳ್ಳು ಮಾಹಿತಿ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಘೋಷಣೆ ಮಾಡಿದ್ದಾರೆ. ಹಲವು ಕಂಪೆನಿಗಳಲ್ಲಿ ಪಾಲುದಾರಿಕೆ ಹೊಂದಿದ್ದರೂ ಅದನ್ನು ಪ್ರಮಾಣ ಪತ್ರದಲ್ಲಿ ನಮೂದಿಸಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಸಾಲದ ವ್ಯವಹಾರವನ್ನು ಮುಚ್ಚಿಟ್ಟಿದ್ದಾರೆ. ಸುಮಾರು 6 ಕೋಟಿ ಮೌಲ್ಯದ ಆಸ್ತಿ ಬಗ್ಗೆ ವಿವರ ನೀಡಿಲ್ಲ. ಈ ಬಗ್ಗೆ ಈ ಮುಂಚೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿತ್ತು" ಎಂದು ಮಂಜು ಹಾಗೂ ವಕೀಲ ದೇವರಾಜು ಆರೋಪಿಸಿದ್ದರು.
ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಕ್ಕೂ ದೂರು ಸಲ್ಲಿಸಿ ತನಿಖೆಗೆ ಆಗ್ರಹಿಸಿದ್ದರು. ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಕೂಡಾ ಇದು ಆದಾಯ ತೆರಿಗೆ ಇಲಾಖೆ ತನಿಖೆಗೆ ಸೂಕ್ತವಾದ ಪ್ರಕರಣ ಎಂದು ವರದಿ ನೀಡಿದ್ದರು. ನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಪ್ರಜ್ವಲ್ ಪರ ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎ.ಮಂಜು, ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ದ 141,324 ಮತಗಳ ಅಂತರದಿಂದ ಪರಾಭವಗೊಂಡಿದ್ದರು.












Click it and Unblock the Notifications