ಭಾನುವಾರ ಹಾಸನಾಂಬೆ ದರ್ಶನಕ್ಕೆ ಹರಿದುಬಂದ ಭಕ್ತಸಾಗರ; ನೂಕುನುಗ್ಗಲು, ರೇವಣ್ಣ ಅಸಮಾಧಾನ

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದುಬರುತ್ತಿದೆ. ಭಾನುವಾರ ರಜೆಯ ದಿನವಾಗಿದ್ದರಿಂದ ಸಹಜವಾಗಿಯೇ ದೇವಾಲಯದ ಆವರಣದಲ್ಲಿ ಜನವೋ ಜನ. ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಇನ್ನೊಂದೆಡೆ, ಹಾಸನಾಂಬೆ ಜಾತ್ರಾ ಮಹೋತ್ಸವದ ಪಾಸ್ ವಿತರಣೆ ಮತ್ತು ಶಿಷ್ಟಾಚಾರ ಉಲ್ಲಂಘನೆ ವಿಚಾರದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಜಿಲ್ಲಾಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Hassan Hasanamba Temple Darshan Devotees Massive Crowd Sunday Special Pass Controversy

ವಿಶೇಷ ದರ್ಶನದ ಸಾಲಿನಲ್ಲಿಯೂ ಭಾರಿ ಜನದಟ್ಟಣೆ

ದರ್ಶನ ಆರಂಭವಾದ ಮೂರನೇ ದಿನವಾದ ಭಾನುವಾರ, ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸಿದ್ದರು. ಸಾಮಾನ್ಯ ಧರ್ಮದರ್ಶನದ ಸಾಲಿನ ಜೊತೆಗೆ, 300 ರೂಪಾಯಿ ಹಾಗೂ 1,000 ರೂಪಾಯಿ ಮೌಲ್ಯದ ವಿಶೇಷ ದರ್ಶನದ ಟಿಕೆಟ್ ಪಡೆದವರ ಸರತಿ ಸಾಲುಗಳಲ್ಲೂ ಕಾಲಿಡಲು ಜಾಗವಿಲ್ಲದಷ್ಟು ಜನದಟ್ಟಣೆ ಇತ್ತು.

ಆದ್ರೂ ಕೂಡ ಭಕ್ತರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ನೂಕುನುಗ್ಗಲು ಹೆಚ್ಚಾದ ಕಾರಣ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ ಜನರನ್ನ ನಿಯಂತ್ರಿಸಲು ಸಾಕಷ್ಟು ಶ್ರಮಪಡಬೇಕಾಯಿತು.

ನೈವೇದ್ಯದ ಸಮಯದಲ್ಲೂ ದರ್ಶನಕ್ಕೆ ಅವಕಾಶ

ಸಾಮಾನ್ಯವಾಗಿ ದೇವಿಗೆ ನೈವೇದ್ಯ ಅರ್ಪಿಸುವ ಸಮಯದಲ್ಲಿ ದರ್ಶನವನ್ನ ಸ್ಥಗಿತಗೊಳಿಸಲಾಗುತ್ತದೆ. ಭಾನುವಾರ ಮುಂಜಾನೆ 3 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈವೇದ್ಯಕ್ಕೆ ಸಮಯ ನಿಗದಿಪಡಿಸಲಾಗಿತ್ತು. ಆದರೆ, ಶನಿವಾರ ಮಧ್ಯಾಹ್ನದಿಂದಲೇ ಭಕ್ತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದ ಕಾರಣ, ಸರತಿ ಸಾಲುಗಳಲ್ಲಿ ಕಾಯುತ್ತಿರುವವರ ಅನುಕೂಲಕ್ಕಾಗಿ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿತು.

ದರ್ಶನಕ್ಕೆ ದೀರ್ಘ ವಿರಾಮ ನೀಡಿದರೆ ಜನದಟ್ಟಣೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಕಾರಣಕ್ಕೆ, ನೈವೇದ್ಯ ಪೂಜೆಯ ನಡೆಯುತ್ತಿರುವಾಗಲೇ ಭಕ್ತರಿಗೂ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಯಿತು. ಇದರಿಂದಾಗಿ ತಾಸುಗಟ್ಟಲೆ ಕಾಯುತ್ತಿದ್ದ ಸಾವಿರಾರು ಭಕ್ತರಿಗೆ ಸ್ವಲ್ಪ ಮಟ್ಟಿಗೆ ನಿರಾಳವಾಯಿತು.

ಸರತಿ ಸಾಲಿನಲ್ಲಿ ಕಾಯುವವರಿಗಾಗಿ ಸಂಗೀತ ರಸಸಂಜೆ

ಮುಂಜಾನೆ 4 ಅಥವಾ 5 ಗಂಟೆಗೆ ಬಂದು ಸಾಲಿನಲ್ಲಿ ನಿಂತ ಭಕ್ತರಿಗೆ ದರ್ಶನ ಸಿಗುವ ಹೊತ್ತಿಗೆ ಮಧ್ಯಾಹ್ನವಾಗಿರುತ್ತಿತ್ತು. ಇಷ್ಟು ದೀರ್ಘ ಕಾಲ ನಿಂತು ಕಾಯುವುದರಿಂದ ಉಂಟಾಗುವ ಆಯಾಸ ಮತ್ತು ಬೇಸರವನ್ನು ಹೋಗಲಾಡಿಸಲು ಜಿಲ್ಲಾಡಳಿತ ವಿನೂತನ ಪ್ರಯತ್ನವೊಂದನ್ನ ಮಾಡಿತ್ತು.

ಭಕ್ತರನ್ನ ರಂಜಿಸಲು ದೇವಾಲಯದ ಆವರಣದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸುಶ್ರಾವ್ಯ ಹಾಡುಗಳಿಗೆ ಸಾಲಿನಲ್ಲಿ ನಿಂತಿದ್ದ ಯುವಕರು ಮತ್ತು ಭಕ್ತರು ಹೆಜ್ಜೆ ಹಾಕಿ ಕುಣಿಯುವ ಮೂಲಕ ದರ್ಶನದ ಆಯಾಸವನ್ನ ಸ್ವಲ್ಪ ಮಟ್ಟಿಗೆ ಮರೆತು ಸಂತಸಪಟ್ಟರು.

ಪಾಸ್ ವಿತರಣೆ: ದರ್ಶನಕ್ಕೆ ಬರುವುದಿಲ್ಲ ಎಂದ ಎಚ್.ಡಿ ರೇವಣ್ಣ

ಒಂದೆಡೆ ಭಕ್ತರ ಸಂಭ್ರಮ ಮುಗಿಲುಮುಟ್ಟಿದ್ದರೆ, ಇನ್ನೊಂದೆಡೆ ಹಾಸನಾಂಬ ಜಾತ್ರಾ ಮಹೋತ್ಸವದ ಪಾಸ್ ವಿಚಾರವಾಗಿ ಜಿಲ್ಲಾಡಳಿತ ಮತ್ತು ಮಾಜಿ ಸಚಿವ ಎಚ್.ಡಿ. ರೇವಣ್ಣ ನಡುವಿನ ಶೀತಲ ಸಮರ ಮತ್ತೆ ಮುನ್ನೆಲೆಗೆ ಬಂದಿದೆ.

ಜಿಲ್ಲಾಡಳಿತವು ಶಿಷ್ಟಾಚಾರವನ್ನ ಉಲ್ಲಂಘಿಸಿ ತಮಗೆ ಅವಮಾನ ಮಾಡಿದೆ ಎಂದು ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ. "ಸಂಸದರ ಮನೆ ಬಾಗಿಲಿಗೆ ಖುದ್ದಾಗಿ ಹೋಗಿ ಪಾಸ್ ನೀಡುತ್ತಾರೆ. ಆದರೆ, ನಮಗೆ ಕನಿಷ್ಠ ಒಂದು ಪಾಸ್ ಇರಲಿ, ಆಹ್ವಾನ ಪತ್ರಿಕೆಯನ್ನೂ ಸಹ ನೀಡಿಲ್ಲ. ಜಿಲ್ಲಾಡಳಿತದ ಈ ತಾರತಮ್ಯದ ಧೋರಣೆಯಿಂದ ಬೇಸರವಾಗಿದ್ದು, ಈ ಬಾರಿ ನಾನು ಹಾಸನಾಂಬೆಯ ದರ್ಶನಕ್ಕೆ ತೆರಳದಿರಲು ತೀರ್ಮಾನಿಸಿದ್ದೇನೆ" ಎಂದು ಎಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ವಿಜಯವಾಣಿ ದಿನಪತ್ರಿಕೆ ವರದಿ ಮಾಡಿದೆ. ಈ ವಿಚಾರ ಇದೀಗ ಹಾಸನ ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+