ಎಂ.ಪಿ.ರವೀಂದ್ರ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ಸಿದ್ದರಾಮಯ್ಯ ಭೇಟಿ
ಬೆಂಗಳೂರು, ನವೆಂಬರ್ 02 : ಹರಪನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ರವೀಂದ್ರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಮಾಜಿ ಸಚಿವ ಎಂ.ಪಿ.ಪ್ರಕಾಶ್ ಪುತ್ರ ಎಂ.ಪಿ.ರವೀಂದ್ರ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮೂರು ತಿಂಗಳ ಹಿಂದೆ ಎಂ.ಪಿ.ರವೀಂದ್ರ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಸಿಂಗಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ವಾಪಸ್ ಆಗಿದ್ದರು. ಆದರೆ, ಈಗ ಅವರ ಆರೋಗ್ಯ ಮತ್ತೆ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎಂ.ಪಿ.ರವೀಂದ್ರ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ರವೀಂದ್ರ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರು ಯಾರನ್ನು ಗುರುತು ಹಿಡಿಯುತ್ತಿಲ್ಲ' ಎಂದು ಹೇಳಿದರು.

ರವೀಂದ್ರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದುಕೊಂಡು ಹೋಗುವ ಕುರಿತು ಚರ್ಚೆ ನಡೆಯುತ್ತಿದೆ. ವಿಕ್ರಂ ಆಸ್ಪತ್ರೆಯ ವೈದ್ಯರು ಈ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದ್ದಾರೆ.
ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಶಾಸಕ ರವೀಂದ್ರ ಅವರ ಆರೋಗ್ಯ ವಿಚಾರಿಸಿದೆ. ಈ ಸಂದರ್ಭದಲ್ಲಿ ರವೀಂದ್ರ ಅವರ ತಾಯಿಯವರನ್ನೂ ಭೇಟಿಯಾಗಿ ಧೈರ್ಯ ತುಂಬಿದ್ದೇನೆ. ಆದಷ್ಟು ಬೇಗ ರವೀಂದ್ರರವರು ಸಂಪೂರ್ಣ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/vXRuCtONTL
— Siddaramaiah (@siddaramaiah) November 2, 2018
ಎಂ.ಪಿ.ರವೀಂದ್ರ ಅವರು ಮಾಜಿ ಸಚಿವ, ಸಜ್ಜನ ರಾಜಕಾರಣಿ ಎಂ.ಪಿ.ಪ್ರಕಾಶ್ ಅವರ ಪುತ್ರ. 2013ರ ಚುನಾವಣೆಯಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅವರು 56,954 ಮತಗಳನ್ನು ಪಡೆದು ಜಯಗಳಿಸಿದ್ದರು.
2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ, ಪಕ್ಷದ ನಾಯಕರ ಒತ್ತಡಕ್ಕೆ ಮಣಿದು ಸ್ಪರ್ಧಿಸಿದ್ದರು. 57,956 ಮತಗಳನ್ನು ಪಡೆದು ಚುನಾವಣೆಯಲ್ಲಿ ಸೋತಿದ್ದರು.












Click it and Unblock the Notifications