Ugadi 2025 Prediction: ಇದೇ ವರ್ಷ ಸಿಎಂ ಬದಲಾಗ್ತಾರಾ? ಯುಗಾದಿ ದಿನವೇ ಬೊಂಬೆಗಳಿಂದ ಅಚ್ಚರಿ ಭವಿಷ್ಯ
ಐತಿಹಾಸಿಕ ಹಿನ್ನೆಲೆಯುಳ್ಳ ಧಾರವಾಡ ತಾಲ್ಲೂಕಿನ ಹನುಮನಕೊಪ್ಪದ ಯುಗಾದಿ ಬೊಂಬೆ ಭವಿಷ್ಯ ಇಂದು ಹೊರಬಿದ್ದಿದೆ. ಈ ಬೊಂಬೆಗಳು ಪ್ರತಿ ಯುಗಾದಿ ಹಬ್ಬದಂದು ಅಚ್ಚರಿ ಭವಿಷ್ಯ ನುಡಿಯುತ್ತವೆ. ಈ ಪೈಕಿ ಬಹುತೇಕ ಭವಿಷ್ಯವಾಣಿಗಳು ನಿಜವಾಗಿರುವ ನಿದರ್ಶನವೂ ಇದೆ. ಇಂದು ನುಡಿದಿರುವ ಭವಿಷ್ಯವು ಅಚ್ಚರಿ ಮೂಡಿಸುತ್ತಿದ್ದು, ರಾಜ್ಯ ರಾಜಕಾರಣ ಹಾಗೂ ಸಿಎಂ ಸ್ಥಾನದ ಬಗ್ಗೆಯೂ ಕುತೂಹಲಕಾರಿ ಭವಿಷ್ಯ ನುಡಿದಿವೆ.
ಹನುಮನಕೊಪ್ಪ ಗ್ರಾಮದಲ್ಲಿ ಸುಮಾರು 1936ರಿಂದಲೂ ಈ ಭವಿಷ್ಯವಾಣಿ ಪ್ರಸಿದ್ಧಿ ಪಡೆದಿದೆ. ಪ್ರತಿ ವರ್ಷದ ಯುಗಾದಿಯಂದು ನುಡಿಯುವ ಭವಿಷ್ಯವು ನಿಜವಾಗುತ್ತೆ ಎಂದೇ ನಂಬಲಾಗಿದೆ. ರಾಜ್ಯರಾಜಕಾರಣ, ಪ್ರಾಕೃತಿಕ ವಿಕೋಪಗಳು ಸೇರಿದಂತೆ ಒಂದು ವರ್ಷದಲ್ಲಿ ನಡೆಯಲಿರುವ ಮಹತ್ವದ ಘಟನೆಗಳ ಬಗ್ಗೆ ಇಲ್ಲಿ ಭವಿಷ್ಯ ನುಡಿಯಲಾಗುತ್ತದೆ. ಅದರಂತೆ ಈ ಬಾರಿಯೂ ರಾಜ್ಯ ರಾಜಕಾರಣ ಹಾಗೂ ಮುಖ್ಯವಾಗಿ ಸಿಎಂ ಕುರ್ಚಿ ಬದಲಾವಣೆ ಬಗ್ಗೆಯೂ ಭವಿಷ್ಯ ಹೊರಬಿದ್ದಿದೆ.

ಈ ಸಲ ಮುಂಗಾರು ಮಳೆ ಕಡಿಮೆ ಆಗಲಿದೆ. ಆದರೆ ಹಿಂಗಾರು ಮಳೆಯೂ ರೈತರಿಗೆ ವರದಾನವಾಗಲಿದೆ. ಉಳಿದಂತೆ ಕೊಬ್ಬರಿ, ಶೇಂಗಾ, ಬೆಲ್ಲ, ಜೋಳ ಸೇರಿದಂತೆ ವಿವಿಧ ಧಾನ್ಯಗಳಿಗೆ ಒಳ್ಳೆಯ ಬೆಲೆ ಸಿಗಲಿದೆಯಂತೆ. ಇನ್ನು ಕಳೆದ ವರ್ಷವೂ ಕೇಂದ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬೊಂಬೆಗಳು ಭವಿಷ್ಯ ನುಡಿದಿದ್ದವು. ಅದು ಕೂಡ ನಿಜವಾಗಿದೆ. ಇನ್ನು ಈ ಬಾರಿಯೂ ಕೇಂದ್ರ-ರಾಜ್ಯ ರಾಜಕಾರಣವು ಯಥಾಸ್ಥಿತಿಯಲ್ಲೇ ಇರಲಿದೆ ಎಂದು ಭವಿಷ್ಯ ನುಡಿದಿದೆ.
ರಾಜ್ಯದಲ್ಲಿ ಸಿಎಂ ಬದಲಾಗುತ್ತಾರೆ ಎಂಬ ವಿಚಾರವಾಗಿಯೂ ಭವಿಷ್ಯ ಹೊರಬಿದ್ದಿದ್ದು, ಈ ವರ್ಷವೂ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಕುರ್ಚಿಯಲ್ಲಿ ಇರುತ್ತಾರೆ ಎಂದು ಗೊಂಬೆಗಳು ಭವಿಷ್ಯ ನುಡಿದಿವೆ. ಕಳೆದ ಯುಗಾದಿ ಭವಿಷ್ಯದಲ್ಲೂ ಈ ಗೊಂಬೆಗಳು ಸಿಎಂ ಬದಲಾವಣೆ ಬಗ್ಗೆ ಇದೇ ಭವಿಷ್ಯ ಹೇಳಿದ್ದವು. ಹಾಗಾಗಿ ಈ ವರ್ಷ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಗೊಂಬೆಗಳು ಹೇಳಿವೆ. ಇನ್ನು ಗೋವಾ ದಿಕ್ಕಿನ ಕಡೆಗೆ ಇದ್ದ ಗೊಂಬೆಗೆ ಧಕ್ಕೆಯಾಗಿದ್ದು, ಈ ಹಿನ್ನೆಲೆ ಗೋವಾ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗಲಿದೆಯಂತೆ.
ಯುಗಾದಿ ಹಬ್ಬದ ವೇಳೆ ಅಮವಾಸ್ಯೆ ದಿನ ಇಲ್ಲಿನ ಹಳ್ಳದಲ್ಲಿ ಒಂದು ಆಕೃತಿ ಮಾಡಿ ಅದರ ನಾಲ್ಕೂ ದಿಕ್ಕಿಗೆ ರಾಜಕೀಯದ ಭವಿಷ್ಯ ನುಡಿಯುವ ಗೊಂಬೆಗಳನ್ನ ಇಡಲಾಗುತ್ತೆ. ಮರುದಿನ ಬೆಳಿಗ್ಗೆ ಎಲ್ಲ ಗೊಂಬೆಗಳನ್ನು ಪರಿಶೀಲಿಸಲಾಗುವುದು. ಆಗ ಯಾವುದಾದ್ರೂ ಗೊಂಬೆಗೆ ಹಾನಿಯಾಗಿದ್ದರೆ ಅದರ ಮೇಲೆ ಈ ಭವಿಷ್ಯ ಹೇಳಲಾಗುತ್ತೆ.
ಈ ಹಿಂದೆ ಕಾಂಗ್ರೆಸ್‌ನ ಪಕ್ಷದ ನಾಯಕಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಸಮಯದಲ್ಲೂ ಇಲ್ಲಿದ್ದ ಗೊಂಬೆಗೆ ಹಾನಿಯಾಗಿತ್ತು. ಆಗ ದೊಡ್ಡ ರಾಜಕಾರಣಿಯೊಬ್ಬರು ಸಾಯುತ್ತಾರೆ ಎಂದು ಗೊಂಬೆಗಳು ಭವಿಷ್ಯ ನುಡಿದಿದ್ದವು. ಅದರಂತೆ ಅದೇ ವರ್ಷ ಇಂದಿರಾ ಗಾಂಧಿ ಅವರು ಹಸುನೀಗಿದ್ದರು. ಇನ್ನು ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವ ಬಗ್ಗೆಯೂ ಗೊಂಬೆಗಳು ತಲೆಕೆಳಗಾಗಿದ್ದವು. ಅದರಂತೆ ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿದಿದ್ದರು. ಈಗ ರಾಜ್ಯ ರಾಜಕಾರಣ ಯತಾಸ್ಥಿತಿಯಲ್ಲಿರುತ್ತೆ ಎಂದು ಭವಿಷ್ಯ ನುಡಿದಿದ್ದು, ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಸೇಫ್ ಎನ್ನಲಾಗಿದೆ.












Click it and Unblock the Notifications