ಹಂಪಿ ಕನ್ನಡ ವಿವಿ ಹಗರಣ; ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು, ನವೆಂಬರ್ 25; ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಗರಣದ ಆರೋಪಗಳ ಬಗ್ಗೆ ತನಿಖೆ ನಡೆಸಲು ತಜ್ಞರು ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ತಕ್ಷಣ ರಚಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

ಗುರುವಾರ ಸಿದ್ದರಾಮಯ್ಯ ಈ ಕುರಿತು ಪತ್ರವನ್ನು ಬರೆದಿದ್ದಾರೆ. 1991ರಲ್ಲಿ ಹಂಪಿಯಲ್ಲಿರುವ 'ಕನ್ನಡ ವಿಶ್ವವಿದ್ಯಾಲಯ' ವನ್ನು ವಿಶೇಷ ನಿಯಮಗಳನ್ನು ರೂಪಿಸಿ ಸ್ಥಾಪಿಸಲಾಗಿದೆ. ನಾಡಿನ ಎಲ್ಲ ವಿಶ್ವವಿದ್ಯಾಲಯಗಳು ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಕಲಿಸುವ ಕೆಲಸ ಮಾಡುತ್ತವೆ ಆದರೆ ಹಂಪಿಯಲ್ಲಿರುವ ಈ ವಿಶ್ವ ವಿದ್ಯಾಲಯವನ್ನು ಜ್ಞಾನ ಸೃಷ್ಟಿಯ ಕೆಲಸ ಮಾಡುವ ವಿಶಿಷ್ಟ ಉದ್ದೇಶದಿಂದ ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.

1991ರಿಂದ ಈ ವಿಶ್ವವಿದ್ಯಾಲಯದಲ್ಲಿ ನಾಡಿನ ಅನೇಕ ಧೀಮಂತ ವಿದ್ವಾಂಸರು ಕೆಲಸ ಮಾಡಿದ್ದಾರೆ. ಹಾಗಾಗಿ ಈ ವಿ ವಿಯಲ್ಲಿ ಅತ್ಯುತ್ತಮ ಕೆಲಸವೂ ಆಗಿದೆ. ವಿಜ್ಞಾನ, ತಾಂತ್ರಿಕ ಶಿಕ್ಷಣವೂ ಸೇರಿದಂತೆ ಅನೇಕ ವಿಷಯಗಳಿಗೆ ಕನ್ನಡದಲ್ಲಿ ಪಠ್ಯ ಪುಸ್ತಕಗಳನ್ನು ರೂಪಿಸುವ ಕೆಲಸವನ್ನೂ ಈ ವಿಶ್ವವಿದ್ಯಾಲಯ ಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Hampi University Scam Siddaramaiah Letter To Chief Minister

ಇಡೀ ದೇಶದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಗುಣಮಟ್ಟ ಕುಸಿದು ಹೋಗುತ್ತಿದೆ ಎಂಬ ಗಂಭೀರ ಆರೋಪ ವಿದ್ವತ್ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಅಪವಾದವೆಂಬಂತೆ ಕನ್ನಡ ವಿಶ್ವವಿದ್ಯಾಲಯವು ಮೌಲ್ಯಯುತ ಸಂಶೋಧನಾ ಕೆಲಸಗಳನ್ನು ಮಾಡುತ್ತಿದೆ. ಆದರೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯವೂ ಸೇರಿದಂತೆ ನಾಡಿನ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಗುಣಮಟ್ಟದ ನೇಮಕಾತಿಗಳು ನಡೆಯದ ಕಾರಣದಿಂದ ಉತ್ತಮ ವಿದ್ವಾಂಸರುಗಳು, ಬೋಧಕರು ಲಭ್ಯವಾಗುತ್ತಿಲ್ಲ. ಉನ್ನತ ಶಿಕ್ಷಣವು ತನ್ನ ಗುಣಮಟ್ಟವನ್ನು ಕಳೆದುಕೊಂಡರೆ, ನಾಡಿನ ಸಮಸ್ತ ವಿಭಾಗಗಳೂ ಕುಸಿದು ಬೀಳುತ್ತವೆ ಎಂದು ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಸರಿಯಾಗಿದ್ದರೆ ಮಾತ್ರ ಉತ್ತಮ ಪ್ರಾಥಮಿಕ, ಪ್ರೌಢ ಶಿಕ್ಷಣ ಸಿಗಲು ಸಾಧ್ಯ. ಜ್ಞಾನವಂತ, ಸೂಕ್ಷ್ಮ ಮತ್ತು ಮಾನವೀಯ ಸಂವೇದನೆಯ ಸಮಾಜದ ನಿರ್ಮಾಣದಲ್ಲಿ ಉನ್ನತ ಶಿಕ್ಷಣದ ಪಾತ್ರ ಬಹಳ ದೊಡ್ಡದು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ಭ್ರಷ್ಟಾಚಾರ, ಕಮಿಷನ್ ದಂಧೆ ಮುಂತಾದ ಕೆಟ್ಟ ಕಾರಣಗಳಿಂದ ಸುದ್ಧಿಯಲ್ಲಿದೆ. ತೀವ್ರವಾದ ಹಗರಣಗಳ ಆರೋಪಗಳು ಈ ವಿಶ್ವವಿದ್ಯಾಲಯದ ಘನತೆಯನ್ನು ಗುಡಿಸಿ ಹಾಕುತ್ತಿವೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಬರೆದಿದ್ದಾರೆ.

ಸಿದ್ದರಾಮಯ್ಯ ಪತ್ರದಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಹಗರಣಗಳ ಕುರಿತು ಮಾಧ್ಯಮಗಳು ವರದಿ ಮಾಡುತ್ತಿದೆ. ಅದರಲ್ಲಿ ಮುಖ್ಯವಾಗಿ ಇತ್ತೀಚೆಗೆ ವಿವಿಯಲ್ಲಿ ಕೆಲವು ಬೋಧಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪತ್ರಿಕೆಗಳ ಪ್ರಕಾರ ಪ್ರತಿ ಹುದ್ದೆಗೆ 50 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಿ, ಹರಾಜು ಮಾಡಲಾಗುತ್ತಿದೆಯೆಂದು ವರದಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹಣ ಕೊಟ್ಟವರಿಗೆ ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳಿವೆಯೆಂದು ಪತ್ರಿಕೆ ವರದಿ ಮಾಡಿದೆ. ವಿಶ್ವವಿದ್ಯಾಲಯಗಳು ಹುದ್ದೆಗಳನ್ನು ಹರಾಜಿಗಿಟ್ಟರೆ ಬಡತನದ ಹಿನ್ನೆಲೆಗಳಿಂದ ಬರುವ ಪ್ರತಿಭಾವಂತರು ಆಯ್ಕೆಯಾಗಲು ಸಾಧ್ಯವೆ?. ಪ್ರತಿಭಾವಂತರು ವಿವಿಗಳಲ್ಲಿ ಇಲ್ಲವಾದರೆ ಯಾವ ದೇಶವಾದರೂ ಉದ್ಧಾರವಾಗಲು ಸಾಧ್ಯವೆ? ಎಂದು ಪ್ರಶ್ನೆ ಮಾಡಿದ್ದಾರೆ.

ಕನ್ನಡ ವಿವಿಯು ವಿವಿಧ ಹುದ್ದೆಗಳನ್ನು ತುಂಬಿಸಲು ಹೊರಡಿಸಿರುವ ಅಧಿಸೂಚನೆಯಲ್ಲಿ ಮೀಸಲಾತಿ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ ಎಂಬ ಆರೋಪವಿದೆ ಜೊತೆಗೆ ಹಿಂದೆ ನೇಮಕವಾದ ಬೋಧಕ, ಬೋಧಕೇತರ ಸಿಬ್ಬಂದಿಗಳ ಪ್ರೊಬೆಷನರಿ ಅವಧಿಯನ್ನು ಘೋಷಿಸಲೂ ಸಹ ಕಮಿಷನ್ ನಿಗದಿಗೊಳಿಸಲಾಗಿದೆ ಮತ್ತು ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ ಎಂದು ಹೇಳಿದ್ದಾರೆ.

ನೇಮಕಾತಿ ಪ್ರಕ್ರಿಯೆ ನಿಲ್ಲಿಸಿ; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೂಡಲೇ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಿ ಈ ಕುರಿತು ತನಿಖೆ ನಡೆಸಿ‌ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿರುವ ಪ್ರತಿಭಾವಂತರ ಪಟ್ಟಿಯನ್ನು ವಿಷಯವಾರು ತಯಾರಿಸಿ ಅವರುಗಳನ್ನು ಯುಜಿಸಿ ನಿಯಮಾವಳಿಗಳಂತೆ ವಿಶ್ವವಿದ್ಯಾಲಯಗಳಿಗೆ ಕರೆತರುವ ಕೆಲಸ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಬಳ ನೀಡಲು, ಪಿಂಚಣಿ ನಿಗದಿಪಡಿಸಲು, ಪಿಂಚಣಿ ಬಿಡುಗಡೆ ಮಾಡಲೂ ಕಮಿಷನ್ ನಿಗದಿಗೊಳಿಸಲಾಗಿದೆ, ಕಮಿಷನ್ ನೀಡದೆ ಯಾವ ಕಡತಗಳಿಗೂ ಜೀವ ಬರುವುದಿಲ್ಲವೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಕುರಿತಂತೆ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರುಗಳು ವಿಶ್ವ ವಿದ್ಯಾಲಯದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ನಿವೃತ್ತರಾದ ಕೆಲವು ಪ್ರೊಫೆಸರ್‌ಗಳ ಪಿಂಚಣಿಯನ್ನು ನಿಗದಿಪಡಿಸದೆ ಏಳೆಂಟು ತಿಂಗಳಿಂದ ಅವರು ಜೀವನ ನಿರ್ವವಹಿಸಲಾರದೆ ಒದ್ದಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ. ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳೂ ನೀಡುತ್ತಿದ್ದ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನವನ್ನು 2-3 ವರ್ಷಗಳಿಂದ ನಿಲ್ಲಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಂಶೋಧನೆ, ಕಲಿಕೆ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳೂ ಕೇಳಿ ಬಂದಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೆ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ವಿಶ್ವವಿದ್ಯಾಲಯದ ಹಗರಣಗಳ ಕುರಿತು ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ಈಗ ನೇಮಕಾತಿ ಮಾಡಿಕೊಳ್ಳಲು ಹೊರಟಿರುವ ಹುದ್ದೆಗಳ ವಿಚಾರದಲ್ಲಿ ಮೀಸಲಾತಿ ಉಲ್ಲಂಘನೆಯ ಆರೋಪವಿದೆ. ಈ ವಿಚಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕೋಶಗಳು ತನಿಖೆ ನಡೆಸಿ ವರದಿ ನೀಡಬೇಕು. ಅಲ್ಲಿಯವರೆಗೆ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+