ಹಜ್ ಯಾತ್ರಿಕರನ್ನು ವಂಚಿಸಿದರೆ, ಕೇಸ್ : ಸಚಿವ ಬೇಗ್
ಬೆಂಗಳೂರು, ಏ. 28 : ಹಜ್ ಯಾತ್ರಿಕರಿಂದ ಹಣ ಪಡೆದುಕೊಂಡು ಅವರಿಗೆ ಸರಿಯಾದ ಸೇವೆ ನೀಡದ ಖಾಸಗಿ ಟೂರ್ ಆರಪೇಟರ್ ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹಜ್ ಖಾತೆ ಸಚಿವ ರೋಷನ್ ಬೇಗ್ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಆನ್‌ಲೈನ್ ಖುರ್ರಾ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರೋಷನ್ ಬೇಗ್ ಅವರು, ಖಾಸಗಿ ಟೂರ್ ಆಪರೇಟರ್ ಗಳು ಯಾತ್ರಿಕರನ್ನು ವಂಚಿಸುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿವೆ ಎಂದು ಹೇಳಿದರು.
ಖಾಸಗಿಯವರು ಯಾತ್ರಿಕರಿಂದ 3 ರಿಂದ 7 ಲಕ್ಷ ಹಣವನ್ನು ಪಡೆಯುತ್ತಾರೆ. ನಂತರ ಅವರಿಗೆ ಯಾತ್ರೆಯ ವೇಳೆ ಯಾವುದೇ ಸೌಲಭ್ಯವನ್ನು ಒದಗಿಸಿದೆ ವಂಚಿಸುತ್ತಿದ್ದಾರೆ. ಅಧಿಕೃತ ಟೂರ್ ಆಪರೇಟರ್ ಗಳು ಉರ್ದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ತಮ್ಮದೇ ಆದ ವ್ಯವಸ್ಥಿತ ಜಾಲವನ್ನು ಎಲ್ಲ ಪ್ರಮುಖ ನಗರ ಮತ್ತು ಜಿಲ್ಲೆಗಳಲ್ಲಿ ಹೊಂದಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಗೃಹ ಸಚಿವರನ್ನು ಕೋರಲಾಗಿದೆ ಎಂದು ರೋಷನ್ ಬೇಗ್ ತಿಳಿಸಿದರು.

ಕಠಿಣ ಕಾನೂನು ಕ್ರಮ
ಹಜ್ ಯಾತ್ರಿಕರಿಂದ 3 ರಿಂದ 7 ಲಕ್ಷದವರೆಗೆ ಹಣ ಪಡೆದುಕೊಂಡು ಅವರಿಗೆ ಸರಿಯಾದ ಸೇವೆ ನೀಡದ ಖಾಸಗಿ ಟೂರ್ ಆರಪೇಟರ್ ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹಜ್ ಖಾತೆ ಸಚಿವ ರೋಷನ್ ಬೇಗ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಗೃಹ ಸಚಿವ ಕೆ.ಜೆ.ಜಾರ್ಜ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

1 ಲಕ್ಷ ಮಂದಿಗೆ ಅವಕಾಶ
ಈ ವರ್ಷ ವಿದೇಶಾಂಗ ಸಚಿವಾಲಯ ದೇಶದ 1 ಲಕ್ಷ ಮಂದಿಗೆ ಹಜ್ ಯಾತ್ರೆಗೆ ತೆರಳಲು ಅವಕಾಶ ಕಲ್ಪಿಸಿದೆ. ಇದರಲ್ಲಿ ಕರ್ನಾಟಕದ 4,977ಯಾತ್ರಿಗಳು ತೆರೆಳಬಹುದಾಗಿದೆ. ಆದರೆ, ಒಟ್ಟು ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ 871 ಮಂದಿ 70 ವರ್ಷ ಮೇಲ್ಪಟ್ಟವರು ಮತ್ತು 478 ಮಂದಿ ನಾಲ್ಕನೇ ಬಾರಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲರಿಗೂ ಆದ್ಯತೆ ನಿಡಬೇಕಾಗಿರುವುದರಿಂದ ಆನ್ ಲೈನ್ ಲಾಟರಿ ಮೂಲಕ 3,628 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

ಪ್ರಧಾನಿಗೆ ಮನವಿ ಮಾಡಲಾಗುವುದು
ಹಜ್ ಯಾತ್ರೆಗೆ ಈ ಬಾರಿ ರಾಜ್ಯದ ಕೋಟಾ ಕಡಿತಗೊಳಿಸಿರುವ ಬಗ್ಗೆ ಪ್ರಧಾನಿ ಮತ್ತು ವಿದೇಶಾಂಗ ಸಚಿವರಿಗೆ ಪತ್ರ ಬರೆದು ಯಥಾಸ್ಥಿತಿ ಕಾಪಾಡಲು ಮನವಿ ಮಾಡಲಾಗುವುದು ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೆ. ರೆಹಮಾನ್ ಖಾನ್ ಭರವಸೆ ನೀಡಿದರು. ಕೋಟಾ ಕಡಿತ ಮಾಡಿದಾಗ ಹಜ್ ಸಮಿತಿ ಪ್ರತಿಭಟನೆ ಮಾಡಬೇಕಾಗಿತ್ತು. ನನ್ನ ಗಮನಕ್ಕೂ ಈ ವಿಷಯ ತಂದಿಲ್ಲ. ನನಗೆ ಗೊತ್ತಿದ್ದರೆ ಹೋರಾಟ ಮಾಡುತ್ತಿದ್ದೆ ಎಂದು ಸಚಿವರು ಹೇಳಿದರು.

ಹಜ್ ಯಾತ್ರೆಗೆ 17 ಸಾವಿರ ಅರ್ಜಿ
ಕರ್ನಾಟಕದಲ್ಲಿ ಈ ಬಾರಿ ಹಜ್ ಯಾತ್ರೆಗೆ ತೆರಳಲು 17,182 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 8,762 ಪುರುಷರು ಮತ್ತು 8,409 ಮಹಿಳೆಯರು ಹಾಗೂ 11 ಮಕ್ಕಳು ಸೇರಿದ್ದಾರೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷ ಎಂ.ಎಂ. ಅಹ್ಮದ್ ತಿಳಿಸಿದರು. ಅರ್ಜಿ ಸಲ್ಲಿಸಿದವರ ಪೈಕಿ ಆನ್ ಲೈನ್ ಲಾಟರಿ ಮೂಲಕ 3,628 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದರು.












Click it and Unblock the Notifications