Mysuru Dasara: ದಸರಾ ಉದ್ಘಾಟಕರ ಹೆಸರು ಘೋಷಿಸಿದ ಸಿಎಂ
ವಿಶ್ವವಿಖ್ಯಾತ ಈ ಬಾರಿಯ ನಾಡಹಬ್ಬ ಮೈಸೂರು ದಸರಾಗೆ ದಿನಗಣನೆ ಶುರುವಾಗಿದ್ದು, ಎಲ್ಲೆಡೆ ಭರ್ಜರಿ ತಯಾರಿ ನಡೆಯುತ್ತಿದೆ. ಆದರೆ, ಇಲ್ಲಿವರೆಗೆ ಈ ಬಾರಿ ದಸರಾ ಮಹೋತ್ಸವದ ಉದ್ಘಾಟಕರು ಯಾರಾಗಲಿದ್ದಾರೆ ಎನ್ನುವ ಕುತೂಹಲವಿತ್ತು. ಸದ್ಯ ಸಿಎಂ ಸಿದ್ದರಾಮಯ್ಯ ಅವರು ದಸರಾ ಉದ್ಘಾಟಕರ ಹೆಸರು ಘೋಷಣೆ ಮಾಡಿ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ.
ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಸಾಹಿತಿ ಹಂ.ಪ.ನಾಗರಾಜಯ್ಯ ಉದ್ಘಾಟಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಿರಿಯ ಸಾಹಿತಿಯಾಗಿರುವ ಹಂ.ಪ.ನಾಗರಾಜಯ್ಯ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ದಸರಾ ಉದ್ಘಾಟಕರ ಹೆಸರು ಘೋಷಣೆ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಅವರಿಗೇ ನೀಡಲಾಗಿತ್ತು. ಅದರಂತೆ ಇತ್ತೀಚೆಗೆ ಸಭೆಯೂ ನಡೆದಿತ್ತು. ಕೊನೆಗೆ ಸಿಎಂ ಸಿದ್ದರಾಮ್ಯಯ ಅವರು ಹಂ.ಪ.ನಾಗರಾಜಯ್ಯ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ. ಶೀಘ್ರದಲ್ಲೇ ಅವರಿಗೆ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ದಸರಾ ಉದ್ಘಾಟನೆಗೆ ಆಹ್ವಾನ ನೀಡಲಿದ್ದಾರೆ.
ಇನ್ನು ಬಾರಿಯ ದಸರಾ ಮಹೋತ್ಸವ ಅಕ್ಟೋಬರ್ 3ರಂದು ಆರಂಭಗೊಂಡು 12ನೇ ತಾರೀಖಿನವರೆಗೂ ನಡೆಯಲಿದೆ. ಅದರಂತೆ ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಆಗಲಿದೆ.
ಹಂ.ಪ.ನಾಗರಾಯಜಯ್ಯ ಅವರ ಹಿನ್ನೆಲೆ: ಕನ್ನಡ ಸಾಹಿತ್ಯ ಲೋಕದಲ್ಲಿ ಹಂ.ಪ.ನಾಗರಾಜಯ್ಯನವರು ʼಹಂಪನಾʼ ಎಂದೇ ಖ್ಯಾತಿ ಪಡೆದಿದ್ದಾರೆ. ಇವರ ಹುಟ್ಟೂರು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರ. ಇವರು ಶಾನುಬೋಗ ಪದ್ಮನಾಭಯ್ಯ ಮತ್ತು ಪದ್ಮಾವತಮ್ಮ ದಂಪತಿಯ ಪುತ್ರ. ಇವರ ಪತ್ನಿ ಕಮಲಾ ಹಂಪನಾ ಅವರೂ ಸಾಹಿತಿ.

ಮೈಸೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದಿರುವ ಇವರು, ವಡ್ಡಾರಾಧನೆ ಸಮಗ್ರ ಅಧ್ಯಯನಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. ಹಂಪನಾ ಅವರು ಕನ್ನಡ ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ ಹೆಚ್ಚು ಜನಮನ್ನಣೆ ಗಳಿಸಿದ್ದಾರೆ.
ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸಿದ್ದರು. ಇವರಿಗೆ ನಾಡೋಜ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮಕ್ಕಳ ಸಾಹಿತ್ಯಕ್ಕಾಗಿ ನೀಡಲಾಗುವ ರಾಷ್ಟ್ರೀಯ ಪುರಸ್ಕಾರ, ಚಾವುಂಡರಾಯ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಾಸನ ಸಾಹಿತ್ಯ ಪ್ರಶಸ್ತಿ, ಚಿ.ನ.ಮಂಗಳಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಕಳೆದ ವರ್ಷ ರಾಜ್ಯದ ಇದ್ದಿದ್ದರಿಂದ ದಸರಾ ಮಹೋತ್ಸವವನ್ನು ಸಿಂಪಲ್ ಆಗಿ ಆಚರಿಸಲಾಗಿತ್ತು. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ ಆಗಿರುವುದರಿಂದ ಅದ್ಧೂರಿಯಾಗಿ ದಸರಾ ಮಹೋತ್ವವವನ್ನು ಆಚರಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಸದ್ಯ ಉದ್ಘಾಟಕರ ಹೆಸರನ್ನು ಖುದ್ದು ಸಿಎಂ ಘೋಷಣೆ ಮಾಡಿದ್ದು, ಶೀಘ್ರದಲ್ಲೇ ಅಲ್ಲಿನ ಕಾರ್ಯಕ್ರಮಗಳ ರೂಪುರೇಷೆಗಳು ಕೂಡ ಅಂತಿಮವಾಗಲಿವೆ. ಈ ಬಾರಿಯ ಉದ್ಘಾಟನೆಯನ್ನು ಸಾಹಿತಿ ಹಂ.ಪ.ನಾಗರಾಜಯ್ಯ ಅವರು ಮಾಡಲಿದ್ದು, ಇನ್ನುಳಿದಂತೆ ಯಾರೆಲ್ಲ ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.












Click it and Unblock the Notifications