ಹಿಂದುಳಿದ ವರ್ಗಗಳ ಆಯೋಗಕ್ಕೆ ಕಾಂತರಾಜು ಅಧ್ಯಕ್ಷ
ಬೆಂಗಳೂರು, ಜೂ. 28 : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಎಚ್.ಕಾಂತರಾಜು ಅವರನ್ನು ನೇಮಿಸಿ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಕಾಂತರಾಜು ಅವರು ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ.
ಶುಕ್ರವಾರ ಸಂಜೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಎಚ್. ಕಾಂತರಾಜು ಅವರು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಾದ ಆರ್. ಶಾಂತರಾಜು ಅವರು ಉಪಸ್ಥಿತರಿದ್ದರು. ಎನ್. ಶಂಕರಪ್ಪ ಅವರು ಆಯೋಗದ ಹಿಂದಿನ ಅಧ್ಯಕ್ಷರಾಗಿದ್ದರು. ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜೀನಾಮೆ ನೀಡಿದ್ದರು.

ಅಧಿಕಾರವಹಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂತರಾಜು ಅವರು, ಹಿಂದುಳಿದ ವರ್ಗಗಳ ಜಾತಿವಾರು ಜನಗಣತಿ ನಡೆಸುವುದು ಆಯೋಗದ ಪ್ರಮುಖ ಕೆಲಸವಾಗಿದೆ. ಈಗಾಗಲೇ ಜಾತಿವಾರು ಸಮೀಕ್ಷೆಗೆ ಸಿದ್ಧತೆಗಳು ನಡೆದಿವೆ. ವಾರದೊಳಗೆ ಅಧಿಕಾರಿಗಳ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. [ಜಾತಿವಾರು ಗಣತಿಗೆ ಸಮ್ಮತಿ ಸೂಚಿಸಿದ ಸರ್ಕಾರ]
ಹಿಂದುಳಿದ ವರ್ಗಗಳ ಜಾತಿವಾರು ಜನಗಣತಿಯಿಂದಾಗಿ ಆಯಾ ಜಾತಿಗಳ ಜನಸಂಖ್ಯೆ ಉದ್ಯೋಗ, ಶಿಕ್ಷಣ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ನಿಖರ ಮಾಹಿತಿ ದೊರೆಯುತ್ತದೆ. ಆಗ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ನಿರ್ಧಿಷ್ಟ ಯೋಜನೆಗಳನ್ನು ರೂಪಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಾಂತರಾಜು ಅವರ ಕಿರು ಪರಿಚಯ : ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಎಚ್. ಕಾಂತರಾಜು ಅವರು 1953ರಲ್ಲಿ ಜನಿಸಿದರು. ಬಿಎಸ್ಸಿ, ಎಲ್.ಎಲ್.ಬಿ.ಪದವೀಧರರಾಗಿರುವ ಇವರು 1978ರಲ್ಲಿ ವಕೀಲ ವೃತ್ತಿ ಆರಂಭಿಸಿದರು. ಹೈಕೋರ್ಟ್ ನಲ್ಲಿ ಸರ್ಕಾರಿ ವಕೀಲರಾಗಿ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿ, ಬೆಂಗಳೂರು ವಕೀಲರ ಸಹಕಾರ ಸಂಘದ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸದಸ್ಯರಾಗಿ, ರಾಜ್ಯದ ಹೆಚ್ಚುವರಿ ಅಡ್ವೋಕೆಟ್ ಜನರಲ್ ಆಗಿ ಕಾಂತರಾಜು ಅವರು ಕಾರ್ಯನಿರ್ವಹಿಸಿದ್ದಾರೆ.












Click it and Unblock the Notifications