ಗುಲ್ಬರ್ಗ ಕಾಮಶಾಸ್ತ್ರ ಪ್ರೊಫೆಸರ್ ದಶರಥ ಅಮಾನತು

ಬೆಳಗಿನ ಸುದ್ದಿ: ಕಡುಬಡತನದ ನಡುವೆಯೂ ಹೆಚ್ಚಿನ ವ್ಯಾಸಂಗ ಮಾಡಿ, ಮನೆಗೆ ಬೆಳಕಾಗಬೇಕೆಂದು ಬಂದ ಯುವ ವಿದ್ಯಾರ್ಥಿನಿಗೆ ಗೈಡ್ ರೂಪದಲ್ಲಿ ವಕ್ಕರಿಸಿಕೊಂಡ ಅರ್ಥಶಾಸ್ತ್ರದ ಪ್ರೊಫೆಸರೊಬ್ಬ ಕಾಮಶಾಸ್ತ್ರ ಬೋಧಿಸಲು ಹೋಗಿ ರಾದ್ಧಾಂತ ಮಾಡಿಕೊಂಡಿದ್ದಾರೆ.
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಈ ಪ್ರಕರಣ ನಡೆದಿದೆ. ಪ್ರೊ. ದಶರಥ ನಾಯಕ ಈ ಕಥಾನಕದ ಖಳನಾಯಕ. ದಶರಥನಾಗದೆ ದುಶ್ಶಾಸನನಾದ ಸದರಿ ಪ್ರೊಫೆಸರ್ ವಿರುದ್ಧ ಕುಲಪತಿ ಡಾ. ಈಟಿ ಪುಟ್ಟಯ್ಯ ಅವರು ಶಿಸ್ತು ಕ್ರಮಕ್ಕೆ ಮುಂದಾಗಿದ್ದು, ಇನ್ನು ನಾಲ್ಕು ವರ್ಷ ಕಾಲ ಯಾರಿಗೂ ಗೈಡ್ ಆಗದಂತೆ ತಕ್ಷಣಕ್ಕೆ ನಿರ್ಬಂಧ ಹೇರಿದ್ದಾರೆ. ಮತ್ತು ಪ್ರೊ. ದಶರಥ ನಾಯಕ ಅವರ ವಿರುದ್ಧ ಆಂತರಿಕ ವಿಚಾರಣೆಗೆ ಆದೇಶಿಸಿದ್ದಾರೆ.
ಅಂದಹಾಗೆ ಡಾ. ದಶರಥ ನಾಯಕ ಅವರು 3 ದಶಕಗಳಿಂದ ಅರ್ಥಶಾಶ್ತ್ರ ಬೋಧಿಸುತ್ತಿದ್ದಾರೆ. ಎಂಎ, ಪಿಎಚ್. ಡಿ ಮಾಡಿರುವ ಡಾ. ದಶರಥರು ಮೈಕ್ರೋ ಎಕನಾಮಿಕ್ಸ್, ಲೇಬರ್ ಎಕನಾಮಿಕ್ಸ್ ಮತ್ತು ಇನ್ಫ್ರಾಸ್ಟ್ರಕ್ಚರ್ ವಿಷಯ ತಜ್ಞರು. ಪಸ್ತುತ ಅವರು Reader, Department of P.G. Studies and Research in Economics.
ಗುಲ್ಬರ್ಗ ವಿವಿಯ ಜ್ಞಾನಗಂಗೆ ಅರ್ಥಶಾಸ್ತ್ರ ವಿಭಾಗದ ಸದರಿ ಪ್ರಾಧ್ಯಾಪಕ ಪಿಎಚ್. ಡಿ ಸಂಶೋಧನಾ ವಿದ್ಯಾರ್ಥಿನಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದು ಪ್ರಕರಣ ತಿರುಳು. ಈ ಪ್ರೊಫೆಸರ್, ವಿವಿ ಕಂಪ್ಯೂಟರಿನಲ್ಲಿ ಬ್ಲೂ ಫಿಲಂಗಳನ್ನು ಡೌನ್ ಲೋಡ್ ಮಾಡಿ ಅದನ್ನು ವಿದ್ಯಾರ್ಥಿನಿಗೆ ತೋರಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಆ ಪ್ರೊಫೆಸರ್ ಮಹಾಶಯರು ಮೊದಲೇ ಬಡತನದಿಂದ ಬಂದಿದ್ದ ಅಫಜಲಪುರದ ವಿದ್ಯಾರ್ಥಿನಿಯಿಂದ 1 ಲಕ್ಷ ರೂ. ಗಳನ್ನು ಲಂಚವಾಗಿ 'ಗೈಡೆನ್ಸ್ ರಾಯಲ್ಟಿ' ಕೇಳಿದ್ದಾರೆ ಎಂದು ದೂರಲಾಗಿದೆ. ಇದರಿಂದ ರೋಸಿಹೋದ ವಿದ್ಯಾರ್ಥಿನಿ ಸೀದಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆದರೆ ಇದು ವಿವಿಯ ಮಾನ ಮರ್ಯಾದೆ ಪ್ರಶ್ನೆಯೆಂದು ಬ್ಯಾಂಕಾಕ್ ಪ್ರವಾಸದಲ್ಲಿದ್ದ ಕುಲಪತಿ ಡಾ. ಪುಟ್ಟಯ್ಯ ಅವರು FIR ದಾಖಲಿಸದಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಹಾಗಾಗಿ ಪ್ರಕರಣವನ್ನು ದಾಖಲಿಸಿಕೊಳ್ಳುವ ಬಗ್ಗೆ ಪೊಲೀಸರು ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ. ಯುವತಿಗೆ ಕಿರುಕುಳ ನೀಡಿದ ಪ್ರಾಧ್ಯಾಪಕರ ವಿರುದ್ಧ ವಿಶ್ವವಿದ್ಯಾಲಯದಲ್ಲಿ ಇಲಾಖಾ ವಿಚಾರಣೆಯನ್ನು ಸಮಿತಿಗೆ ಒಪ್ಪಿಸಲಾಗಿದ್ದು, ವರದಿ ಬಂದ ನಂತರ ಕ್ರಮ ಕೈಗೊಳ್ಳುವುದಾಗಿ ಡಾ. ಪುಟ್ಟಯ್ಯ ತಿಳಿಸಿದ್ದಾರೆ.












Click it and Unblock the Notifications