ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಶೀಘ್ರವೇ ಆಸ್ತಿಗಳ ಇ-ಸ್ವತ್ತು ವಿತರಣೆಗೆ ಮಾರ್ಗಸೂಚಿ ಪ್ರಕಟ.!
ಬೆಂಗಳೂರು, ಜೂನ್ 21: ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ಇ-ಸ್ವತ್ತು ವಿತರಿಸುವಲ್ಲಿ ರೂಪಿಸಲಾಗುತ್ತಿರುವ ಕರಡು ನಿಯಮಾವಳಿಗಳು ಈ ಮಾಸಾಂತ್ಯಕ್ಕೆ ಸಿದ್ಧಗೊಳ್ಳುತ್ತಿದ್ದು, ಜುಲೈ ಎರಡನೆಯ ವಾರದಲ್ಲಿ ಅಂತಿಮ ನಿಯಮಾವಳಿಗಳು ಪ್ರಕಟಗೊಳ್ಳಲಿವೆ, ಆನಂತರ ಇ-ಸ್ವತ್ತು ವಿತರಣೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಸಂಬಂಧ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಸಚಿವರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ವಿತರಣೆ ಪ್ರಕ್ರಿಯೆಯ ನಿರೀಕ್ಷೆಯಲ್ಲಿದ್ದು ಸರಳ ಹಾಗೂ ಸುಗಮ ರೀತಿಯಲ್ಲಿ ಇ-ಸ್ವತ್ತು ವಿತರಣೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.

ವಿಧಾನ ಮಂಡಲದ ಅಧಿವೇಶನದಲ್ಲಿ ಇ-ಸ್ವತ್ತು ವಿತರಣೆಗೆ ಅನುವಾಗುವಂತೆ 199 (ಬಿ) ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು, ಅದಕ್ಕೆ ಅನುಗುಣವಾಗಿ ಇ-ಸ್ವತ್ತು ವಿತರಣೆಯನ್ನು ಸುಗಮಗೊಳಿಸಲು ನಿಯಮಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಇ-ಸ್ವತ್ತು ಆಸ್ತಿ ನಮೂನೆಗಳನ್ನು ವಿತರಿಸುವದರಿಂದ ರಾಜ್ಯದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 1.45 ಕೋಟಿ ಆಸ್ತಿಗಳು ಇ-ಸ್ವತ್ತು ತೆಕ್ಕೆಗೆ ಬರುವ ನಿರೀಕ್ಷೆಯಿದ್ದು, ಸಾರ್ವಜನಿಕರ ಆಸ್ತಿಗಳು ಅಧಿಕೃತಗೊಳ್ಳುವದಲ್ಲದೆ, ಗ್ರಾಮ ಪಂಚಾಯತಿಗಳ ಆದಾಯ ಹೆಚ್ಚಲಿರುವುದರಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಲಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ (ಪಂಚಾಯತ್ ರಾಜ್) ಉಮಾ ಮಹದೇವನ್, ಪಂಚಾಯತ್ ರಾಜ್ ಇಲಾಖೆಯ ಆಯಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications