Gruha Lakshmi: ಗೃಹಿಣಿಯರಿಗೆ ಸಿಹಿ ಸುದ್ದಿ: ಒಂದೇ ಕಂತಿನಲ್ಲಿ 2 ತಿಂಗಳ ಬಾಕಿ ಹಣ ಜಮೆ
ಬೆಂಗಳೂರು, ಆಗಸ್ಟ್ 06: ಕರ್ನಾಟಕ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ 'ಗೃಹ ಲಕ್ಷ್ಮಿ' ಯೋಜನೆಗೆ ಇದೇ ಆಗಸ್ಟ್‌ಗೆ ಒಂದು ವರ್ಷ ತುಂಬುತ್ತಿದೆ. ಕಳೆದ 2023 ಆಗಸ್ಟ್ 30ರಂದು ಸರ್ಕಾರ ಯೋಜನೆಗೆ ಚಾಲನೆ ನೀಡಿತ್ತು. ಆದರೆ ಕಳೆದ ಎರಡು (ಜೂನ್, ಜುಲೈ) ತಿಂಗಳಿನಿಂದ ಹಣ ಜಮೆ ಆಗಿಲ್ಲ ಎಂಬ ದೂರುಗಳು ಬಂದಿವೆ. ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಯ ಯಜಮಾನಿಗೆ ಗುಡ್ ನ್ಯೂಸ್ ನೀಡಿದ್ದಾರೆ.
'ಗೃಹ ಲಕ್ಷ್ಮಿ' ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗೆ ಮಾಸಿಕ ರೂ.2000 ಜಮೆ ಮಾಡಲಾಗುತ್ತದೆ. ಜೂನ್, ಜುಲೈ ತಿಂಗಳ ಹಣ ಜಮೆ ಆಗಿಲ್ಲ. ಮುಂದಿನ ಒಂದೆರಡು ದಿನಗಳಲ್ಲಿ ಎರಡು ತಿಂಗಳ ಹಣ ಫಲಾನುಭವಿಗಳ ಖಾತೆಗೆ ಏಕಕಾಲಕ್ಕೆ ಜಮೆ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

2 ತಿಂಗಳ ಹಣ ಒಟ್ಟಿಗೆ ಜಮೆ: ಸಚಿವೆ
ಈ ಕುರಿತು ಮಂಡ್ಯದ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ, ತಾಂತ್ರಿಕ ಕಾರಣದಿಂದಾಗಿ ಈ ರೀತಿ ವಿಳಂಬವಾಗಿದೆ. ಯಾರು ಭಯಪಡುವ ಅಗತ್ಯವಿಲ್ಲ. ನಿಮಗೆ ಕಳೆದ ಎರಡು ತಿಂಗಳಿಂದ ಭಾರದ ಗೃಹ ಲಕ್ಷ್ಮೀ ಯೋಜನೆಯ ಹಣ ಆಗಸ್ಟ್‌ನಲ್ಲಿ ಜಮೆ ಆಗಲಿದೆ ಎಂದು ಹೇಳಿದರು.
ಹಣ ಜಮೆ ವೇಳೆ ಒಂದಷ್ಟು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಹೀಗಾಗಿ ಯೋಜನೆಯ ಫಲಾನಭವಿಗಳಿಗೆ ಸಕಾಲಕ್ಕೆ ಹಣ ಜಮೆ ಆಗಿಲ್ಲ. ಇದೀಗ ಉಂಟಾದ ತಾಂತ್ರಿಕ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿದೆ. ಆದಷ್ಟು ಶೀಘ್ರವೇ ನಿಮ್ಮ ಖಾತೆಗೆ ಹಣ ಬರಲಿದೆ. ಆತಂಕ, ಚಿಂತೆ ಪಡಬೇಡಿ, ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದೆ ಎಂದರು.
ವರಮಹಾಲಕ್ಷ್ಮೀ ಹಬ್ಬಕ್ಕೂ ಮೊದಲೇ ಗುಡ್‌ನ್ಯೂಸ್
ಇದಷ್ಟೇ ಅಲ್ಲದೇ ಯೋಜನೆಯಡಿ ನೋಂದಾಯಿ ಫಲಾನುಭವಿಗಳಿಗೆ ಇನ್ನು ಮುಂದೆ ಪ್ರತಿ ತಿಂಗಳು15ನೇ ತಾರೀಖಿನೊಳಗೆ ಹಣ ಜಮೆ ಮಾಡಲು ನಿರ್ಧರಿಸಲಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗಲಿದೆ ಎಂದು ಅವರು ತಿಳಿಸಿದರು. ಈ ಮೂಲಕ ಮುಂಬರಲಿರುವ ವರಮಹಾಲಕ್ಷ್ಮೀ ಹಬ್ಬಕ್ಕೂ ಮೊದಲೇ ಸಚಿವೆ ಮನೆ ಯಜಮಾನಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಸಚಿವೆ ಹೇಳಿಕೆಯಿಂದ ಅನುಮಾನ ನಿವಾರಣೆ
ರಾಜ್ಯ ಸರ್ಕಾರ ಐದು ಗ್ಯಾರೆಂಟಿ ಘೋಷಣೆಗಳನ್ನು ಜಾರಿ ಮಾಡಿತು. ಈ ಪೈಕಿ ಗೃಹ ಲಕ್ಷ್ಮಿ ಯೋಜನೆಯು ಒಂದಾಗಿದೆ. ಇದರಡಿ ಮನೆಯ ಯಜಮಾನಿಯೊಬ್ಬರಿಗೆ ಮನೆ ನಿರ್ವಹಣೆ, ಆರ್ಥಿಕ ಸ್ಥಿತಿ ಸರಿದೂಗಿಸಲು, ಮಹಿಳೆಯರ ಆರ್ಥಿಕ ಸಬಲತೆಗಾಗಿ ಮಾಸಿಕವಾಗಿ ಎರಡು ಸಾವಿರ ರೂಪಾಯಿ ಹಣ ನೀಡುತ್ತಾ ಬಂದಿದೆ. ಆದರೆ ಕಳೆದ ಎರಡು ತಿಂಗಳಿನಿಂದ ಹಣ ಬಾರದಿದ್ದಾಗ, ಸರ್ಕಾರ ಯೋಜನೆ ನಿಲ್ಲಿಸಿತಾ? ಎಂಬ ಅನುಮಾನ ಕಾಡಿತ್ತು. ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತಿನಿಂದ ಸಂಶಯ, ಗೊಂದಲಗಳು ನಿವಾರಣೆ ಆಗಿದೆ.












Click it and Unblock the Notifications