ಜೂನ್ ತಿಂಗಳ ಬಿಲ್‌ನಲ್ಲಿ ಜುಲೈ ತಿಂಗಳ ಶುಲ್ಕ: ಕ್ಯಾಶ್‌ಬ್ಯಾಕ್ ಭರವಸೆ ಕೊಟ್ಟ ಸಚಿವ ಕೆ.ಜೆ. ಜಾರ್ಜ್
ಗೃಹಜ್ಯೋತಿ ಯೋಜನೆ ಜುಲೈ 1ರಿಂದಲೇ ರಾಜ್ಯಾದ್ಯಂತ ಜಾರಿಯಾಗಿದೆ. ಜೂನ್ 25ರ ಒಳಗೆ ನೋಂದಣಿ ಮಾಡಿಕೊಂಡ ಗ್ರಾಹಕರು ಜುಲೈ 1ರಿಂದ ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿದ್ದಾರೆ. ಆದರೆ ಜೂನ್ ತಿಂಗಳು ಬಂದ ವಿದ್ಯುತ್ ಬಿಲ್‌ನಲ್ಲಿ ಜುಲೈ ತಿಂಗಳ ಕೆಲವು ದಿನಗಳಿಗೆ ಶುಲ್ಕ ವಿಧಿಸಲಾಗಿದ್ದು ಜನರಲ್ಲಿ ಆಕ್ರೋಶ ಉಂಟುಮಾಡಿದೆ.
ಜೂನ್ ತಿಂಗಳ ವಿದ್ಯುತ್ ಬಿಲ್ ಗೊಂದಲದ ಬಗ್ಗೆ ಮಾತನಾಡಿರುವ ಇಂಧನ ಸಚಿವ ಕೆ.ಜೆ. ಜಾರ್ಜ್, ಯಾರ ಬಿಲ್‌ನಲ್ಲಿ ಜುಲೈ ತಿಂಗಳ ಶುಲ್ಕ ಸೇರಿಸಲಾಗಿದೆಯೋ ಅವರು ಈಗಾಗಲೇ ವಿದ್ಯುತ್ ಬಿಲ್ ಕಟ್ಟಿದ್ದರೆ ಹೆಚ್ಚುವರಿ ಶುಲ್ಕ ಮರುಪಾವತಿ ಮಾಡಲಾಗುವುದು ಎಂದು ಹೇಳಿದ್ದಾರೆ. ಯಾವುದೇ ಬಾಕಿ ಇರಿಸಿಕೊಳ್ಳದೆ ಸಂಪೂರ್ಣ ವಿದ್ಯುತ್ ಬಿಲ್ ಕಟ್ಟಿದ್ದರೆ ಮಾತ್ರ ಹಣ ಮರುಪಾವತಿಯಾಗಲಿದೆ ಎಂದು ಹೇಳಿರುವುದಾಗಿ ಟಿವಿ9 ವರದಿ ಮಾಡಿದೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಅವರು, ಜೂನ್ ತಿಂಗಳ ವಿದ್ಯುತ್ ಬಿಲ್ ಗೊಂದಲದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಜೂನ್ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಒಂದಷ್ಟು ಗೊಂದಲಗಳಿವೆ, ಜೂನ್ ತಿಂಗಳ ಬಿಲ್‌ನಲ್ಲಿ ಜುಲೈ ತಿಂಗಳ ಕೆಲವು ದಿನಗಳಿಗೂ ಶುಲ್ಕ ವಿಧಿಸಲಾಗಿದೆ. ಕೆಲವು ಗ್ರಾಹಕರಿಗೆ ಮಾತ್ರ ಈ ರೀತಿಯ ಸಮಸ್ಯೆಯಾಗಿದೆ, ಅಂತಹ ಗ್ರಾಹಕರಿಗೆ ಕ್ರೆಡಿಟ್ ನೀಡಲಾಗುವುದು, ಬಾಕಿ ಮೊತ್ತ ಯಾವುದು ಇಲ್ಲದಿದ್ದರೆ ನಾಲ್ಕು ತಿಂಗಳ ನಂತರ ಹಣ ವಾಪಸ್ ನೀಡಲಾಗುವುದು, ಜುಲೈ ತಿಂಗಳ ಬಿಲ್ ಕಟ್ಟಿದರೆ ಹಣ ವಾಪಸ್ ನೀಡುತ್ತೇವೆ" ಎಂದು ಹೇಳಿದ್ದಾರೆ.
ಆಗಸ್ಟ್ 5ಕ್ಕೆ ಅಧಿಕೃತ ಚಾಲನೆ
ಜುಲೈ 1ರಿಂದಲೇ ನೋಂದಣಿ ಮಾಡಿರುವ ಗ್ರಾಹಕರು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಇದಕ್ಕೆ ಅಧಿಕೃತ ಚಾಲನೆಯನ್ನು ಆಗಸ್ಟ್ 5ರಂದು ನೀಡಲಾಗುವುದು ಎಂದು ಸಚಿವ ಜಾರ್ಜ್ ಹೇಲಿದ್ದಾರೆ. ಕಲಬುರಗಿಯಲ್ಲಿ ಇದಕ್ಕೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದುವರೆಗೆ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು 1.40 ಕೋಟಿ ಗ್ರಾಹಕರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಜೂನ್ 25ರ ಒಳಗೆ ನೋಂದಣಿ ಮಾಡಿಕೊಂಡಿರುವ ಗ್ರಾಹಕರು ಜುಲೈ 1ರಿಂದ ಉಚಿತ ವಿದ್ಯುತ್ ಪಡೆದರೆ, ಜುಲೈ 25ರ ಒಳಗೆ ನೋಂದಣಿ ಮಾಡಿಕೊಂಡ ಗ್ರಾಹಕರು ಆಗಸ್ಟ್ 1ರಿಂದ ಉಚಿತ ವಿದ್ಯುತ್ ಪಡೆಯಲಿದ್ದಾರೆ.












Click it and Unblock the Notifications