ಗೃಹಜ್ಯೋತಿ ಮರುಪರಿಶೀಲನೆ ವಿಳಂಬ: ಬೆಸ್ಕಾಂ ಆ್ಯಪ್ ದೋಷ, ಕಚೇರಿ ಮುಂದೆ ಸಾರ್ವಜನಿಕರ ಕ್ಯೂ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ಮರುಪರಿಶೀಲನೆ ಪ್ರಕ್ರಿಯೆ ಪ್ರಸ್ತುತ ರಾಜ್ಯಾದ್ಯಂತ ನಡೆಯುತ್ತಿದೆ. ಆದರೆ, ಈ ಕಾರ್ಯ ತೀರಾ ಮಂದಗತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಉಚಿತ ವಿದ್ಯುತ್ ಪಡೆಯುತ್ತಿರುವ ಲಕ್ಷಾಂತರ ಫಲಾನುಭವಿಗಳು ಈಗ ತಮ್ಮ ಸೌಲಭ್ಯ ರದ್ದಾಗುವ ಆತಂಕದಲ್ಲಿ ಬೆಸ್ಕಾಂ ಕಚೇರಿಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಖ್ಯವಾಗಿ, ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮೊಬೈಲ್ ಆ್ಯಪ್‌ನಲ್ಲಿನ ತಾಂತ್ರಿಕ ದೋಷಗಳು ಹಾಗೂ ಸರ್ವರ್ ಸಮಸ್ಯೆಗಳಿಂದಾಗಿ ಸಿಬ್ಬಂದಿ ಮತ್ತು ಗ್ರಾಹಕರು ಇಬ್ಬರೂ ಪರದಾಡುತ್ತಿದ್ದಾರೆ.

ಮನೆಮನೆಗೆ ತೆರಳಿ ಗೃಹಜ್ಯೋತಿ ಮರುಪರಿಶೀಲನೆ ನಡೆಸಲು ಬೆಸ್ಕಾಂ ಸಿಬ್ಬಂದಿಗೆ ನೀಡಲಾಗಿರುವ ಆ್ಯಪ್‌ನಲ್ಲಿ ಪದೇ ಪದೇ ದೋಷಗಳು ಕಾಣಿಸಿಕೊಳ್ಳುತ್ತಿವೆ. ಸರಿಯಾದ ದಾಖಲೆಗಳ ಬದಲಿಗೆ ಬೇರೆ ಫೋಟೋಗಳು ಅಪ್‌ಲೋಡ್ ಆಗುತ್ತಿರುವುದು, ಸರ್ವರ್ ಡೌನ್ ಆಗುವುದು ಪರಿಶೀಲನಾ ಕೆಲಸಕ್ಕೆ ಅಡ್ಡಿಯಾಗುತ್ತಿದೆ.
ಜುಲೈ 1ರಿಂದ ಆರಂಭವಾಗಿರುವ ಈ ಪ್ರಕ್ರಿಯೆಯು ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಜುಲೈ ಅಂತ್ಯದ ವೇಳೆಗೆ 1.65 ಕೋಟಿ ನೋಂದಾಯಿತ ಗ್ರಾಹಕರ ಪೈಕಿ ಕೇವಲ 64.18 ಲಕ್ಷ ಕುಟುಂಬಗಳ ಪರಿಶೀಲನೆ ಮಾತ್ರ ಪೂರ್ಣಗೊಂಡಿದೆ. ಉಳಿದ ಮನೆಗಳಿಗೆ ಸಿಬ್ಬಂದಿ ಇನ್ನೂ ಭೇಟಿ ನೀಡಿಲ್ಲ ಎಂಬ ದೂರು ಸಹ ಕೇಳಿಬರುತ್ತಿವೆ.
ಬಾಡಿಗೆದಾರರ ಗೊಂದಲ
ಮರುಪರಿಶೀಲನೆ ವೇಳೆ ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವುದು ಬಾಡಿಗೆದಾರರು. ಮನೆ ಬದಲಾಯಿಸಿದಾಗ ಹಳೆಯ ಸಂಪರ್ಕದಿಂದ ಆಧಾರ್ ಡಿಲೀಟ್ ಮಾಡಿ, ಹೊಸ ಮನೆಗೆ ಲಿಂಕ್ ಮಾಡುವ ಪ್ರಕ್ರಿಯೆ ಅತ್ಯಂತ ಕ್ಲಿಷ್ಟಕರವಾಗಿದೆ. ಹಳೆಯ ಮಾಲೀಕರು ಅಥವಾ ಬಾಡಿಗೆದಾರರು ತಮ್ಮ ಆಧಾರ್ ಲಿಂಕ್ ರದ್ದುಗೊಳಿಸದ ಕಾರಣ, ಹೊಸ ನಿವಾಸಿಗಳಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ.
ಅಪಾರ್ಟ್‌ಮೆಂಟ್‌ಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗಳಿಗೆ ಬೀಗ ಹಾಕಿರುವುದು, ಅನೇಕರು ಬೇರೆ ರಾಜ್ಯ ಅಥವಾ ವಿದೇಶದಲ್ಲಿರುವುದು ಸಹ ಪರಿಶೀಲನೆಗೆ ಸವಾಲಾಗಿ ಪರಿಣಮಿಸಿದೆ. ಜೊತೆಗೆ, ಜಾತಿ ಪ್ರಮಾಣಪತ್ರ ನೀಡುವುದು ಕಡ್ಡಾಯವಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ, ಜನರಲ್ಲಿದ್ದ ಗೊಂದಲ ಮಾತ್ರ ಇನ್ನೂ ಬಗೆಹರಿದಂತಿಲ್ಲ.
ಉಚಿತ ವಿದ್ಯುತ್ ಲೆಕ್ಕಾಚಾರ ಹೇಗೆ ನಡೆಯುತ್ತದೆ?
ಗ್ರಾಹಕರಿಗೆ ಪ್ರತಿ ತಿಂಗಳು ನೇರವಾಗಿ 200 ಯೂನಿಟ್ ಉಚಿತ ವಿದ್ಯುತ್ ಲಭ್ಯವಿರುವುದಿಲ್ಲ. ಬದಲಾಗಿ, 2022-23ರ ಸಾಲಿನ ಒಂದು ವರ್ಷದ ವಿದ್ಯುತ್ ಬಳಕೆಯ ಸರಾಸರಿಯನ್ನು ಲೆಕ್ಕಹಾಕಿ, ಅದಕ್ಕೆ ಶೇ.10ರಷ್ಟು ಹೆಚ್ಚುವರಿ ಯೂನಿಟ್‌ಗಳನ್ನ ಸೇರಿಸಿ ಉಚಿತ ಮಿತಿಯನ್ನ ನಿಗದಿಪಡಿಸಲಾಗಿದೆ.
ಅಂದರೆ ಉದಾಹರಣೆಗೆ, ನಿಮ್ಮ ಹಿಂದಿನ ಸರಾಸರಿ ಬಳಕೆ 100 ಯೂನಿಟ್ ಆಗಿದ್ದರೆ, ನಿಮಗೆ ಗರಿಷ್ಠ 110 ಯೂನಿಟ್‌ವರೆಗೆ ಮಾತ್ರ ಉಚಿತ ವಿದ್ಯುತ್ ಸಿಗುತ್ತದೆ. ಒಂದು ವೇಳೆ ಬಳಕೆ 200 ಯೂನಿಟ್ ದಾಟಿದರೆ, ಸಂಪೂರ್ಣ ಬಿಲ್ ಮೊತ್ತವನ್ನ ಗ್ರಾಹಕರೇ ಪಾವತಿಸಬೇಕಾಗುತ್ತದೆ.
ಯಾವುದೇ ಹಿಂದಿನ ದಾಖಲೆಗಳಿಲ್ಲದ ಹೊಸ ಸಂಪರ್ಕ ಪಡೆದವರಿಗೆ ಕನಿಷ್ಠ 58 ಯೂನಿಟ್‌ಗಳ ಅರ್ಹತೆ ನೀಡಲಾಗಿದೆ.
ಮರುಪರಿಶೀಲನೆಗೆ ಬೇಕಾದ ಅಗತ್ಯ ದಾಖಲೆಗಳೇನು?
ಅನರ್ಹರನ್ನ ಯೋಜನೆಯಿಂದ ಕೈಬಿಟ್ಟು, ನಿಜವಾದ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ಒದಗಿಸುವುದು ಈ ಮರುಪರಿಶೀಲನೆಯ ಮುಖ್ಯ ಉದ್ದೇಶವಾಗಿದೆ. ಮೃತಪಟ್ಟವರ ಹೆಸರಿನಲ್ಲಿರುವ ಸಂಪರ್ಕ, ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿರುವ ಗೃಹ ವಿದ್ಯುತ್, ಹಾಗೂ ಒಂದೇ ವ್ಯಕ್ತಿಯ ಹೆಸರಿನಲ್ಲಿರುವ ಬಹು ಸಂಪರ್ಕಗಳನ್ನು ಪತ್ತೆಹಚ್ಚಿ ಸಬ್ಸಿಡಿ ರದ್ದುಗೊಳಿಸಲಾಗುತ್ತದೆ. ಪರಿಶೀಲನೆಗೆ,
1. ಆಧಾರ್ ಕಾರ್ಡ್
2.ವೋಟರ್ ಐಡಿ
3.ಪಾಸ್ಪೋರ್ಟ್ ಅಳತೆಯ ಫೋಟೋ
4.ಪಾನ್ ಕಾರ್ಡ್
5.ರೇಷನ್ ಕಾರ್ಡ್
6.ಬಾಡಿಗೆದಾರರಾಗಿದ್ದರೆ ಕಡ್ಡಾಯವಾಗಿ ಬಾಡಿಗೆ ಒಪ್ಪಂದದ ಪತ್ರ
ಬೆಸ್ಕಾಂ ಸ್ಪಷ್ಟನೆ
ಈ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿರುವ ಬೆಸ್ಕಾಂ ಎಂಡಿ ಡಾ. ಎನ್. ಶಿವಶಂಕರ್, "ಆರಂಭದಲ್ಲಿ ಮೀಟರ್ ರೀಡಿಂಗ್ ಜೊತೆಯಲ್ಲೇ ಪರಿಶೀಲನೆ ನಡೆಸಿದ್ದರಿಂದ ಪ್ರಕ್ರಿಯೆ ನಿಧಾನವಾಗಿತ್ತು. ಜುಲೈನಲ್ಲಿ ರೀಡಿಂಗ್ ಕೈಬಿಟ್ಟು ಕೇವಲ ಪರಿಶೀಲನೆ ಮಾಡಿದ್ದರಿಂದ ಕಾರ್ಯ ಚುರುಕು ಪಡೆದುಕೊಂಡಿತ್ತು. ಇದೀಗ ಆಗಸ್ಟ್‌ನಿಂದ ಮತ್ತೆ ರೀಡಿಂಗ್ ಜೊತೆಗೆ ಪರಿಶೀಲನೆ ನಡೆಯುತ್ತಿರುವುದರಿಂದ ಸ್ವಲ್ಪ ವಿಳಂಬವಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಈಗಾಗಲೇ ಶೇ.65ರಷ್ಟು ಕಾರ್ಯ ಪೂರ್ಣಗೊಂಡಿದ್ದು, ಆಗಸ್ಟ್ ಅಂತ್ಯದೊಳಗೆ ಸಂಪೂರ್ಣ ಪ್ರಕ್ರಿಯೆ ಮುಗಿಸುವ ಗುರಿ ಹೊಂದಿದ್ದೇವೆ," ಎಂದು ಭರವಸೆ ನೀಡಿದ್ದಾರೆ.
ಸಾರ್ವಜನಿಕರು ತಮ್ಮ ಪ್ರಸ್ತುತ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಸಮೀಕ್ಷೆಯ ಅಪ್‌ಡೇಟ್ ಬಂದಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಯಾವುದೇ ದೂರುಗಳು ಅಥವಾ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಬೆಸ್ಕಾಂ ಸಹಾಯವಾಣಿ 1912 ಅನ್ನು ಸಂಪರ್ಕಿಸಬಹುದು.


Click it and Unblock the Notifications
