Gruha Jyothi Electricity Bill: ಹೇಗಿರುತ್ತೆ ಗೃಹಜ್ಯೋತಿ ಝೀರೋ ಬಿಲ್? ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ ಏನಾಗುತ್ತೆ?
ಕಾಂಗ್ರೆಸ್‌ನ ಪ್ರಮುಖ ಘೋಷಣೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಆಗಸ್ಟ್ 1ರಿಂದ ಜಾರಿಗೆ ಬಂದಿದೆ. ಜೂನ್ ತಿಂಗಳಿನಲ್ಲಿ ನೊಂದಾಯಿಸಿಕೊಂಡಿದ್ದ ಗ್ರಾಹಕರಿಗೆ ಜುಲೈ ತಿಂಗಳ ವಿದ್ಯುತ್ ಉಚಿತವಾಗಿದ್ದು, ಈಗಾಗಲೇ ಝೀರೋ ಬಿಲ್ ಪಡೆದ ಗ್ರಾಹಕರು ಖಷಿಯಾಗಿದ್ದಾರೆ. ಇನ್ನೂ ಕೆಲವರು ತಮಗೆ ಬಿಲ್ ಬಂದಿದೆ ಎಂದು ದೂರು ನೀಡಿದ್ದಾರೆ.
ಗೊಂದಲಗಳು ಇದ್ದರೂ ಸೊನ್ನೆ ವಿದ್ಯುತ್ ಬಿಲ್ ಪಡೆದ ಮಂದಿಯಂತೂ ಫುಲ್ ಖುಷಿಯಾಗಿದ್ದಾರೆ. ಗೃಹಜ್ಯೋತಿ ಯೋಜನೆಗಾಗಿ ಇಂಧನ ಇಲಾಖೆ ಬಿಲ್ ಮಾದರಿಯನ್ನು ಬದಲಾಯಿಸಿದೆ. ಗ್ರಾಹಕರಿಗೆ ತಮ್ಮ ವಿದ್ಯುತ್ ಬಿಲ್ ಹೇಗಿರುತ್ತೆ, ಸರಾಸರಿ ಹೇಗೆ ಲೆಕ್ಕ ಹಾಕ್ತಾರೆ, ಸರಾಸರಿಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಎಷ್ಟು ಬಿಲ್ ಬರುತ್ತದೆ ಎನ್ನುವ ಪ್ರಶ್ನೆಗಳು ಮೂಡುವುದು ಸಹಜ, ಅದಕ್ಕೆಲ್ಲಾ ಉತ್ತರ ಇಲ್ಲಿದೆ.

ಸರಾಸರಿ ಲೆಕ್ಕಾಚಾರ, ಶೂನ್ಯ ವಿದ್ಯುತ್ ಬಿಲ್
ಗೃಹಜ್ಯೋತಿ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಗ್ರಾಹಕರಿಗೆ ತಾವು 2022-2023ರ ಆರ್ಥಿಕ ವರ್ಷದಲ್ಲಿ ಬಳಕೆ ಮಾಡಿದ ವಿದ್ಯುತ್ ಅನ್ನು ಪರಿಗಣಿಸಿ ಸರಾಸರಿ ವಿದ್ಯುತ್ ಬಳಕೆಯನ್ನು ನಿಗದಿ ಮಾಡಲಾಗಿದೆ. ಉದಾಹರಣೆಗೆ : ಕಳೆದ 12 ತಿಂಗಳಿನಲ್ಲಿ ನೀವು ಸರಾಸರಿ 100 ಯೂನಿಟ್ ವಿದ್ಯುತ್ ಬಳಕೆ ಮಾಡಿದ್ದರೆ, ಗೃಹಜ್ಯೋತಿ ಯೋಜನೆಯಡಿ ನಿಮಗೆ 110 ಯೂನಿಟ್‌ವರೆಗೆ ವಿದ್ಯುತ್ ಉಚಿತವಾಗಿರಲಿದೆ.
ಬಿಲ್‌ನಲ್ಲಿ ಏನೆಲ್ಲಾ ಬದಲಾವಣೆ?
ಗೃಹಜ್ಯೋತಿ ಯೋಜನೆಯಡಿ ಬರುವ ಬಿಲ್‌ನಲ್ಲಿ ಹಲವು ಮಾಹಿತಿಗಳನ್ನು ಸೇರಿಸಲಾಗಿದೆ. ಇದರಲ್ಲಿ ನೀವು ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿದ ದಿನಾಂಕ ನಮೂದಿಸಿರಲಾಗುತ್ತದೆ. ನಂತರ 2022-23 ರ ಆರ್ಥಿಕ ವರ್ಷದಲ್ಲಿ ಬಳಕೆ ಮಾಡಿದ ಸರಾಸರಿ ವಿದ್ಯುತ್ ಮಾಹಿತಿ ಇರುತ್ತದೆ.
ನಂತರ ಎಷ್ಟು ಯೂನಿಟ್‌ವರೆಗೆ ಉಚಿತ ವಿದ್ಯುತ್ ಸಿಗುತ್ತದೆ ಎನ್ನುವ ಮಾಹಿತಿ ಕೂಡ ಬಿಲ್‌ನಲ್ಲಿ ಇರುತ್ತದೆ. ಅದಕ್ಕೂ ಮೀರಿ ವಿದ್ಯುತ್ ಬಳಕೆ ಮಾಡಿದ್ದಲ್ಲಿ, ಪಾವತಿ ಯೂನಿಟ್ ಎನ್ನುವ ಆಯ್ಕೆಯಿದ್ದು, ಹೆಚ್ಚುವರಿ ಬಳಕೆ ಮಾಡಿದ್ದಕ್ಕೆ ಬಿಲ್ ಬರಲಿದೆ.
ನಂತರ ಗೃಹಜ್ಯೋತಿ ಅನುದಾನ ಉಪಮೊತ್ತ ಎನ್ನುವ ಆಯ್ಕೆಯಿದ್ದು, ಇಲ್ಲಿ ವಿದ್ಯುತ್ ಶುಲ್ಕ, ಇಂಧನ ಹೊಂದಾಣಿಕೆ ಶುಲ್ಕ, ತೆರಿಗೆ ಮೊತ್ತದ ಮಾಹಿತಿ ಇರುತ್ತದೆ. ಒಟ್ಟು ಎಷ್ಟು ಉಪಮೊತ್ತ ಎನ್ನುವುದು ದಾಖಲಿಸಲಾಗುತ್ತದೆ.
ನಂತರ ಪಾವತಿಸಬೇಕಾದ ಬಿಲ್ ಮೊತ್ತದಲ್ಲಿ ಸರಾಸರಿ ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡಿದ್ದರೆ ಶೂನ್ಯ ಎಂದು ದಾಖಲಿಸಲಾಗುತ್ತದೆ. ಪಾವತಿಸಬೇಕಾದ ಮೊತ್ತ ಶೂನ್ಯ ಎಂದು ಬರುತ್ತದೆ.

ಸರಾಸರಿಗಿಂತ ಹೆಚ್ಚಿಗೆ ಬಳಕೆ ಮಾಡಿದರೆ?
ಸರಾಸರಿಗಿಂತ ಹೆಚ್ಚಿಗೆ ಬಳಕೆ ಮಾಡಿದರೆ ಸಂಪೂರ್ಣ ವಿದ್ಯುತ್ ಶುಲ್ಕ ಭರಿಸಬೇಕಾ ಎನ್ನುವ ಆತಂಕ ಇರುತ್ತದೆ. ಇದಕ್ಕೂ ಈಗ ಉತ್ತರ ಸಿಕ್ಕಿದೆ. ಸರಾಸರಿ ವಿದ್ಯುತ್‌ಗಿಂತ ಹೆಚ್ಚಿಗೆ ಬಳಕೆ ಮಾಡಿದಾಗ ನಿಮಗೆ ಹೆಚ್ಚುವರಿ ಬಳಸಿದ ವಿದ್ಯುತ್‌ಗೆ ಮಾತ್ರ ಬಿಲ್ ಬರುತ್ತದೆ.
ಉದಾಹರಣೆಗೆ : ನಿಮ್ಮ ಸರಾಸರಿ ವಿದ್ಯುತ್ ಪ್ರಮಾಣ 110 ಯೂನಿಟ್ ಇದ್ದಾಗ ಒಂದು ವೇಳೆ ನೀವು 135 ಯೂನಿಟ್ ವಿದ್ಯುತ್ ಬಳಕೆ ಮಾಡಿದರೆ ಹೆಚ್ಚುವರಿ 25 ಯೂನಿಟ್ ವಿದ್ಯುತ್ ದರ ಮಾತ್ರ ಭರಿಸಬೇಕಾಗುತ್ತದೆ.
ಬಿಲ್ ಹಿಂಭಾಗ ಸೂಚನೆಗಳು
ಇನ್ನು ವಿದ್ಯುತ್ ಬಿಲ್‌ನ ಹಿಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರ ಫೋಟೊಗಳನ್ನು ಮುದ್ರಿಸಲಾಗಿದ್ದು, ವಿದ್ಯುತ್ ಬಿಲ್ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ.
ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆಗೆ ಯಾವುದೇ ಕೊನೆಯ ದಿನಾಂಕವನ್ನು ಸರ್ಕಾರ ಘೋಷಿಸಿಲ್ಲ, ನೀವೂ ಕೂಡ ಸೇವಾಸಿಂಧು ವೆಬ್‌ಸೈಟ್‌ನಲ್ಲಿ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಯಾವುದೇ ಗೊಂದಲ, ಅನುಮಾನ ಇದ್ದರೆ ಸಹಾಯವಾಣಿ ಸಂಖ್ಯೆ 1912ಗೆ ಕರೆಮಾಡಬಹುದು.












Click it and Unblock the Notifications