ಅಕ್ರಮ ಗಣಿಗಾರಿಕೆ: ಡಿಕೆಶಿ ಸೇರಿದಂತೆ 64 ಮಂದಿಗೆ 'ಹೈ' ನೋಟಿಸ್
ಬೆಂಗಳೂರು,ಜೂ.22: ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಹೊತ್ತಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸೇರಿದಂತೆ 64 ಮಂದಿ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲವೇಕೆ? ಎಂದು ಪ್ರಶ್ನಿಸಿ ಹೈಕೋರ್ಟ್ ಸೋಮವಾರ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್ ಕರ್ನಾಟಕ ಸರ್ಕಾರ ಹಾಗೂ ತನಿಖಾಧಿಕಾರಿಗಳಿಗೂ ತಟ್ಟಲಿದೆ.
ರಾಮನಗರ ಮತ್ತು ಕನಕಪುರ ಅರಣ್ಯಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೋಷಾರೋಪ ಪಟ್ಟಿ ಸಂಬಂಧ ಇದುವರೆವಿಗೂ ಯಾವುದೇ ಕ್ರಮ ಕೈಗೊಳ್ಳದಿರುವ ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ಬಿ.ವಿ.ನಾಗರತ್ನ ಅವರ ವಿಭಾಗೀಯ ಪೀಠ ಡಿಕೆಶಿ ಕುಟುಂಬದ 27 ಜನ ಸೇರಿದಂತೆ ಒಟ್ಟು 64 ಜನರಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.

ರಾಮನಗರ ಹಾಗೂ ಕನಕಪುರ ಅರಣ್ಯ ಪ್ರದೇಶದಲ್ಲಿ ಡಿಕೆಶಿ ಕುಟುಂಬದವರು ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು 2006ರಲ್ಲಿ ಲೋಕಾಯುಕ್ತ ತಂಡದ ಯು.ವಿ.ಸಿಂಗ್ ಅವರು ವರದಿ ನೀಡಿದ್ದರು.
ವರದಿಯನ್ನು ಅನುಷ್ಠಾನಗೊಳಿಸುವಂತೆ ಪಿಐಎಲ್ ಹಾಕಲಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಈ ವರದಿ ಅನ್ವಯ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಅದರೆ ಈವರೆಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕಾರ್ಯದರ್ಶಿ ನಾರಾಯಣಸ್ವಾಮಿ ಮತ್ತು ಎ.ಸಿ.ಶಿವರಾಮ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ.
ಡಿಕೆಶಿ ಕುಟುಂಬದವರು ಅರಣ್ಯ ಕಾಯ್ದೆ ಉಲ್ಲಂಘನೆ, ಗಡಿನಾಶ, ಅಕ್ರಮ ಗಣಿಗಾರಿಕೆ, ತೆರಿಗೆ ವಂಚನೆ ಮಾಡಿದ ಆರೋಪವಿದೆ. ಯು.ವಿ.ಸಿಂಗ್ 2006ರಲ್ಲಿ ನೀಡಿದ ವರದಿಯಲ್ಲಿ ಸುಮಾರು 37.61 ಕೋಟಿ ರು ಮೌಲ್ಯದ 1,44,139 ಕ್ಯೂಬಿಕ್ ಮೀಟರ್ಸ್ ಗ್ರಾನೈಟ್ ಬ್ಲಾಕ್ ಗಳನ್ನು ಅಕ್ರಮವಾಗಿ ಕನಕಪುರ, ಸಾತನೂರು ಅರಣ್ಯ ಪ್ರದೇಶದಿಂದ ಸಾಗಿಸಲಾಗಿದೆ. ಸುಮಾರು 22ಕ್ಕೂ ಅಧಿಕ ಗ್ರಾನೈಟ್ ಕಂಪನಿಗಳ ಸಹಕಾರದಿಂದ 112 ಎಕರೆ ಅರಣ್ಯ ಭೂಮಿ ಕಬಳಿಸಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 64 ಕೋಟಿ ರು ನಷ್ಟವಾಗಿದೆ ಎಂದು ಹೇಳಲಾಗಿದೆ.












Click it and Unblock the Notifications