Breaking; ಖರ್ಗೆಗೆ ಅದ್ದೂರಿ ಸ್ವಾಗತ, ಸಿದ್ಧತೆ ವೀಕ್ಷಿಸಿದ ಡಿಕೆಶಿ
ಬೆಂಗಳೂರು, ಅಕ್ಟೋಬರ್ 30; ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನವೆಂಬರ್ 6ರಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಮಲ್ಲಿಕಾರ್ಜುನ ಖರ್ಗೆ ನವೆಂಬರ್ 6ರಂದು ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪಕ್ಷದ ರಾಜ್ಯ ಘಟಕದ ವತಿಯಿಂದ ಅರಮನೆ ಮೈದಾನದಲ್ಲಿ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅರಮನೆ ಮೈದಾನಕ್ಕೆ ಭೇಟಿ ನೀಡಿದರು. ಮಲ್ಲಿಕಾರ್ಜುನ ಖರ್ಗೆ ಸ್ವಾಗತ ಕಾರ್ಯಕ್ರಮದದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು. ಕಾರ್ಯಕ್ರಮದ ಕುರಿತು ಹಲವು ಸೂಚನೆಗಳನ್ನು ನೀಡಿದರು.

ಮಲ್ಲಿಕಾರ್ಜುನ ಖರ್ಗೆಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅರಮನೆ ಮೈದಾನಕ್ಕೆ ಕರೆತರಲು ಚಿಂತನೆ ನಡೆಸಲಾಗಿದೆ. ಪಕ್ಷದ ವಿವಿಧ ನಾಯಕರು ಅದ್ದೂರಿಯಾಗಿ ಅವರನ್ನು ಬರಮಾಡಿಕೊಳ್ಳಲಿದ್ದಾರೆ.
ಎಸ್. ನಿಜಲಿಂಗಪ್ಪ ಬಳಿಕ ಕನ್ನಡಿಗೊಬ್ಬರು ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು, ಪದಗ್ರಹಣ ಮಾಡಿದ ಬಳಿಕ 80 ವರ್ಷ ವಯಸ್ಸಿನ ಮಲ್ಲಿಕಾರ್ಜುನ ಖರ್ಗೆ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ಇದೆ. ಚುನಾವಣೆಗೆ ಪೂರಕವಾಗಿಯೇ ಸ್ವಾಗತ ಕಾರ್ಯಕ್ರಮ, ಅಭಿನಂದನಾ ಸಮಾವೇಶವನ್ನು ಪಕ್ಷ ಆಯೋಜನೆ ಮಾಡಿದೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಅಕ್ಟೋಬರ್ 17ರಂದು ನಡೆದಿತ್ತು. ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಕಣದಲ್ಲಿದ್ದರು. ಅಕ್ಟೋಬರ್ 19ರಂದು ಚುನಾವಣಾ ಫಲಿತಾಂಶ ಪ್ರಕಟವಾಯಿತು. ಮಲ್ಲಿಕಾರ್ಜುನ ಖರ್ಗೆ 7,897 ಮತಗಳನ್ನು ಪಡೆದು ಅಧ್ಯಕೀಯ ಚುನಾವಣೆಯಲ್ಲಿ ಜಯಗಳಿಸಿದರು. ಶಶಿ ತರೂರ್ 1072 ಮತಗಳನ್ನು ಪಡೆದರು.
ಕರ್ನಾಟಕದ ಕಲಬುರಗಿ ಮೂಲದ ಮಲ್ಲಿಕಾರ್ಜುನ ಖರ್ಗೆ ಅಕ್ಟೋಬರ್ 26ರಂದು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡರು. ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಧಿಕಾರ ಹಸ್ತಾಂತರ ಮಾಡಿದರು. ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಖರ್ಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ.












Click it and Unblock the Notifications