ಆಸಿಡ್ ದಾಳಿ ಸಂತ್ರಸ್ತೆಗೆ ಸರ್ಕಾರಿ ಕೆಲಸ: ಸಿಎಂ ಬೊಮ್ಮಾಯಿ ಭರವಸೆ
ಬೆಂಗಳೂರು, ನವೆಂಬರ್ 01: ಆಸಿಡ್ ದಾಳಿಗೆ ಒಳಗಾದ ಮಹಿಳೆಗೆ ಸರ್ಕಾರಿ ಕೆಲಸ ಹಾಗೂ ಒಂದು ಫ್ಲ್ಯಾಟ್ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಸರ್ಕಾರಿ ಕೆಲಸ ಹಾಗೂ ಮನೆ ಮಂಜೂರು ಮಾಡಿಕೊಡಬೇಕೆಂದು ಆಸಿಡ್ ದಾಳಿಗೆ ಒಳಗಾಗಿದ್ದ ಮಹಿಳೆಯು ರಾಜ್ಯ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು. ಅವರ ಮನವಿಗೆ ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿಗಳು ಸರ್ಕಾರಿ ಕೆಲಸ, ಮನೆ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆಸಿಡ್ ದಾಳಿಗೊಳಗಾದ ಮಹಿಳೆಗೆ ಕೂಡಲೇ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನು ಅವರಿಗೆ ಮನೆ ಮಂಜೂರು ಮಾಡಲು ವಸತಿ ಸಚಿವರ ಬಳಿ ಮಾತನಾಡುತ್ತೇನೆ. ಬಡವರಿಗೆ ನಿರ್ಮಿಸಲಾಗುತ್ತಿರುವ 40 ಸಾವಿರ ಫ್ಲ್ಯಾಟ್‌ಗಳಲ್ಲಿ ಒಂದು ಫ್ಲ್ಯಾ ಟ್ ನೀಡಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಆಸಿಡ್ ದಾಳಿಗೆ ತುತ್ತಾದ ಮಹಿಳೆಯರಿಗೆ ಮಾಸಾಶನವನ್ನು ಸರ್ಕಾರ 10 ಸಾವಿರ ರೂ.ಗಳಿಗೆ ಹೆಚ್ಚಿಸಿದೆ ಎಂದು ಅವರು ಹೇಳಿದರು.

ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ
'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವುದು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿನ ಮತ್ತೊಂದು ವಿಶೇಷವೇ ಆಗಿದೆ. ನವೆಂಬರ್ 1 ರಂದೇ ಪ್ರಶಸ್ತಿ ನೀಡಬೇಕೆನ್ನುವುದು ನನ್ನ ಇಚ್ಛೆಯಾಗಿತ್ತು. ಡಾ. ಪುನೀತ್ ರಾಜಕುಮಾರ್ ಅವರು ಕನ್ನಡಕ್ಕಾಗಿ ಸಂಪೂರ್ಣ ಬದುಕನ್ನೇ ಮೀಸಲಿಟ್ಟವರು. ಕನ್ನಡದ ಬಗ್ಗೆ, ಕನ್ನಡದ ಅಸ್ಮಿತೆಯ ಬಗ್ಗೆ ಜಾಗೃತಿ ಮೂಡಿಸಿದವರು. ಕನ್ನಡ ನಾಡಿನಲ್ಲಿ ಹಲವಾರು ಪರೋಪಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರಲ್ಲದೇ ತಮ್ಮ ಅಂಗಾಗಗಳನ್ನೇ ದಾನ ಮಾಡಿ ಇತರರಿಗೆ ಮಾದರಿಯಾದವರು ಎಂದು ಬೊಮ್ಮಾಯಿ ಶ್ಲಾಘಿಸಿದರು.
ಪುನೀತ್ ರಾಜ್‌ಕುಮಾರ್ ಅವರ ಅಂಗಾಂಗ ದಾನದ ಪ್ರೇರಣೆಯಿಂದ ನಾಡಿನ ಲಕ್ಷಾಂತರ ಜನರು ಅಂಗಾಂಗ ದಾನ ಮಾಡಲು ಮುಂದಾದರು. ಅಪ್ಪು ಅವರು ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಇಂದು ಮಂಗಳವಾರ ಸಂಜೆ ವಿಧಾನಸೌಧದ ಮುಂದೆ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಇದೊಂದು ಅತ್ಯಂತ ಮಹತ್ವದ ಕಾರ್ಯಕ್ರಮ. ಪಠ್ಯ ಪುಸ್ತಕದಲ್ಲಿ ಪುನೀತ ಅವರ ಬಗ್ಗೆ ಪಾಠ ಸೇರ್ಪಡೆ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಏನೆಲ್ಲಾ ಮಾಡಬಹುದೋ ಅದೆಲ್ಲವನ್ನು ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

ಕನ್ನಡ ಡಿಂಡಿಮ ಬಾರಿಸಬೇಕು
ಇದೇ ವೇಳೆ ಸಮಸ್ತ ಕನ್ನಡ ನಾಡಿನ ಜನತೆಗೆ 67ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಮುಖ್ಯಮಂತ್ರಿಗಳು ತಿಳಿಸಿದರು. ಅತ್ಯಂತ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಇದು ಕೇವಲ ಆಚರಣೆಯಾಗಿ ಉಳಿಯದೆ ಪ್ರತಿಯೊಬ್ಬ ಕನ್ನಡಿಗರ ಹೃದಯಗಳಲ್ಲಿ ಕನ್ನಡ ಡಿಂಡಿಮ ಬಾರಿಸುವಂತಾಗಬೇಕು. ಕನ್ನಡಿಗರು ಶಿಕ್ಷಣ, ಉದ್ಯೋಗ ಮತ್ತು ಎಲ್ಲಾ ರಂಗಗಳಲ್ಲಿ ಮುಂದೆ ಬರಲು ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಅದರ ಲಾಭವನ್ನು ಕನ್ನಡಿಗರು ಪಡೆಯಬೇಕು. ವಿಶೇಷವಾಗಿ ಯುವಕರು ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳಬೇಕು. ಪ್ರತಿ ಕನ್ನಡಿಗನೂ ಕನ್ನಡದ ಅಸ್ಮಿತೆ, ಸ್ವಾಭಿಮಾನದ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಎಲ್ಲಿದ್ದರೂ ಕನ್ನಡಿಗರಾಗಿಯೇ ಇರಬೇಕು ಎಂದು ಆಶಯ ವ್ಯಕ್ತಪಡಿಸಿದರು.












Click it and Unblock the Notifications