ಬೆಂಗಳೂರು: ವಾರ್ಷಿಕ 1.20 ಲಕ್ಷ EV ತಯಾರಿಸುವ ಕಂಪನಿಗೆ ಜಾಗ ಮಂಜೂರು
ಬೆಂಗಳೂರು, ಆಗಸ್ಟ್ 08: ಕರ್ನಾಟಕ ಮಾತ್ರವಲ್ಲದೇ ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಆದ್ಯತೆ ಸಿಗುತ್ತಿದೆ. ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಬೈಕ್‌ಗಳ ಸ್ಥಾನವನ್ನು ಎಲೆಕ್ಟ್ರಿಕ್ ವಾಹನಗಳು ತುಂಬುತ್ತಿವೆ. ಇದಕ್ಕೆ ಕರ್ನಾಟಕ ಹೊರತಾಗಿಲ್ಲ. ಇಲ್ಲಿ ಸಹ 'ಇವಿ'ಗಳ ಹಾವಳಿ ಹೆಚ್ಚಾಗಿಯೇ ಇದೆ. ಇದೀಗ ಇವಿ ಕಂಪನಿಗೆ ಜಾಗ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಹೌದು, ಕರ್ನಾಟಕ ರಾಜ್ಯ ಸರ್ಕಾರವು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ ಪ್ರಮಾಣವನ್ನು ಹೆಚ್ಚಿಸಲು ಬಯಸಿರುವ 'ರಿವರ್ ಮೊಬಿಲಿಟಿ ಕಂಪನಿ'ಗೆ ಅಗತ್ಯ ಭೂಮಿ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಗುರುವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ.

ಈ ಕುರಿತು ರಾಜಧಾನಿ ಬೆಂಗಳೂರಿನಲ್ಲಿ ಸಚಿವ ಎಂಬಿ ಪಾಟೀಲ್ ಅವರನ್ನು ರಿವರ್ ಮೊಬಿಲಿಟಿ ಕಂಪನಿಯ ಸಿಇಒ ಅರವಿಂದ್ ಮಣಿ ಮತ್ತು ಉಪಾಧ್ಯಕ್ಷೆ ಮಯೂರಿ ಮೋಹಿಡೇಕರ್ ಭೇಟಿ ಮಾಡಿದರು. ಈ ವೇಳೆ ಭವಿಷ್ಯದ ಸಂಪರ್ಕ ವ್ಯವಸ್ಥೆ ಕುರಿತು ಮಾತುಕತೆ ನಡೆಸಿದರು.
ವಾರ್ಷಿಕ 1.20 ಲಕ್ಷ EV ತಯಾರಿಸುವ ಕಂಪನಿ
ಸದ್ಯಕ್ಕೆ ರಿವರ್ ಮೊಬಿಲಿಟಿ ಕಂಪನಿಯು ಹೊಸಕೋಟೆ ಬಳಿ ಇರುವ ತನ್ನ ಉತ್ಪಾದನಾ ಘಟಕದಲ್ಲಿ ವರ್ಷಕ್ಕೆ 1.20 ಲಕ್ಷ ಇ.ವಿ. ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿದೆ. ಇದನ್ನು ವರ್ಷಕ್ಕೆ 5 ಲಕ್ಷಕ್ಕೆ ಕೊಂಡೊಯ್ಯಲು ಕಂಪನಿ ಬಯಸಿದೆ.
ಈ ಸಂಬಂಧ ಕಂಪನಿಯು ತನ್ನ ವಿಸ್ತರಣೆಗಾಗಿ ಅಗತ್ಯ ಜಮೀನಿಗೆ ಬೇಡಿಕೆ ಇಟ್ಟಿದೆ. ಗೌರಿಬಿದನೂರು, ಕೋಲಾರದ ನರಸಾಪುರ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಭೂಮಿ ತೋರಿಸಿದ್ದು, ಬಯಸಿದ ಪ್ರಕಾರ ಜಮೀನು ಹಂಚಿಕೆ ಮಾಡಲಾಗುವುದು ಎಂದು ಸಚಿವರು ಕಂಪನಿ ಮುಖ್ಯಸ್ಥರಿಗೆ ಭರವಸೆ ಕೊಟ್ಟಿದ್ದಾರೆ.

ಬ್ಯಾಟರಿ ತಯಾರಿಕೆಗಾಗಿ 400 ಕೋಟಿ ಹೂಡಿಕೆ
ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯನ್ನು ಕೂಡ ಇಲ್ಲೇ ತಯಾರಿಸುತ್ತಿದೆ. ಇದಕ್ಕಾಗಿ ಕಂಪನಿಯು ಒಟ್ಟು 400 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಒಂದು ಸಲ ಚಾರ್ಜ್ ಮಾಡಿದರೆ 120 ಕಿ.ಮೀ. ಓಡಲಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಹೂಡಿಕೆಗೆ ಯಥೇಚ್ಛ ಅವಕಾಶಗಳಿವೆ. ಜತೆಗೆ ರಾಜ್ಯ ಸರ್ಕಾರ ಕೂಡ ನಾನಾ ಬಗೆಯ ಉತ್ತೇಜನವನ್ನು ಕೈಗಾರಿಕಾ ನೀತಿಯಲ್ಲಿ ಅಳವಡಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಅಸಾಂಪ್ರದಾಯಿಕ ವಾಹನಗಳು ಜನಪ್ರಿಯವಾಗಲಿವೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಅವರು ಕಂಪನಿಯು ತಯಾರಿಸುವ ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು ಒಂದು ಸುತ್ತು ಚಲಾಯಿಸಿ, ಅದರ ಬಗ್ಗೆ ಮಾಹಿತಿ ಪಡೆದರು. ಕಂಪನಿ ಮುಖ್ಯಸ್ಥರ ಭೇಟಿ ಸಂದರ್ಭದಲ್ಲಿ ರಾಜ್ಯ ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications