ಆತಂಕದಲ್ಲಿದ್ದ ಕಾವೇರಿ ಹೋರಾಟಗಾರರಿಗೆ ಸರ್ಕಾರದಿಂದ ರಿಲೀಫ್
ಬೆಂಗಳೂರು, ಫೆಬ್ರವರಿ 23: ಕಾವೇರಿ ಹೋರಾಟಗಾರರ ಮೇಲೆ ಹೂಡಲಾಗಿದ್ದ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಡಿ.ಸಿ.ತಮ್ಮಣ್ಣ, ಕಾವೇರಿ ಹೋರಾಟಗಾರರ ಮೇಲೆ ಹಾಕಲಾಗಿದ್ದ ಶೇ 95% ಕೇಸುಗಳನ್ನು ಸರ್ಕಾರ ವಾಪಸ್ ಪಡೆಯುತ್ತಿದೆ ಎಂದಿದ್ದಾರೆ.
ಕ್ಯಾಬಿನೆಟ್ ಉಪಸಮಿತಿಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದ್ದು, ಪ್ರಕರಣ ದಾಖಲಾದವರ ತಾಲ್ಲೂಕುವಾರು ವಿವರಗಳನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸರ್ಕಾರದ ಆಸ್ತಿ-ಪಾಸ್ತಿ ಹಾಳು ಮಾಡಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನೂ ಸಹ ವಾಪಸ್ ಪಡೆಯಲಾಗುತ್ತಿದೆ. ಆದರೆ ಖಾಸಗಿ ಆಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಕ್ಯಾಮೆರಾ, ಕಾರುಗಳ ಜಖಂ, ಅಂಗಡಿ, ಮುಗ್ಗಟ್ಟು ಮೇಲೆ ಕಲ್ಲು ತೂರಾಟ, ಪಾಂಡವಪುರ ಜಡ್ಜ್ ಮನೆ ಮೇಲೆ ದಾಳಿ ಸೇರಿದಂತೆ ಖಾಸಗಿಯಾಗಿ ನೀಡಿರುವ ಕೇಸುಗಳು ಕೋರ್ಟ್ ನಲ್ಲೇ ಇತ್ಯರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಮಂಡ್ಯಕ್ಕೆ ಐದು ಸಾವಿರ ಕೋಟಿ ಬೃಹತ್ ಯೋಜನಾ ಅನುದಾನ ಘೋಷಿಸಿದ ಬೆನ್ನಲ್ಲೆ ಈಗ ಕಾವೇರಿ ಹೋರಾಟಗಾರರ ಮೇಲಿನ ಪ್ರಕರಣವನ್ನೂ ವಾಪಸ್ ಪಡೆಯಲಾಗುತ್ತಿದೆ. ಹೆಚ್ಚಿನ ಪ್ರಕರಣಗಳು ಮಂಡ್ಯ ರೈತರ ಮೇಲೆ ದಾಖಲಾಗಿದ್ದವು.
ಫೆಬ್ರವರಿ 27ರಂದು ಕುಮಾರಸ್ವಾಮಿ ಅವರು ಮಂಡ್ಯಕ್ಕೆ ಆಗಮಿಸಲಿದ್ದು, ಐದು ಸಾವಿರ ಕೋಟಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಅಂದೇ ಕಾವೇರಿ ಹೋರಾಟಗಾರರ ಮೇಲಿನ ಕೇಸು ವಾಪಸ್ ಪಡೆದಿರುವ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ.












Click it and Unblock the Notifications