ಸೇಫ್ ಜೋನ್‌ನಲ್ಲಿ ಕೊರೊನಾ ಕಡ್ಡಾಯ ಪರೀಕ್ಷೆ; ತಳಮಳ ತಂದ ಸರ್ಕಾರದ ಸೂಚನೆ!
ಬೆಂಗಳೂರು, ಏ. 17: ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಇಡೀ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಸೋಂಕು ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಚಿಸಿವೆ. ಲಾಕ್‌ಡೌನ್ ಜಾರಿ ಆದಾಗಿನಿಂದ ಕೋವಿಡ್ ಸೋಂಕಿತ ಪ್ರಕರಣಗಳು ಹೊರಗೆ ಬರುತ್ತಿವೆ.
Recommended Video
ಇನ್ನು ಎರಡನೇ ಹಂತದ ಲಾಕ್‌ಡೌನ್ ಜಾರಿಗೆ ಬಂದರೂ ರಾಜ್ಯದ 10 ಜಿಲ್ಲೆಗಳಲ್ಲಿ ಈವರೆಗೆ ಕೊರೊನಾ ಸೋಂಕು ದೃಢಪಟ್ಟಿಲ್ಲ. ಹೀಗಾಗಿ ಆ ಹತ್ತೂ ಜಿಲ್ಲೆಗಳನ್ನು ಹಸಿರು ವಲಯದ ಪಟ್ಟಿಗೆ ಸೇರಿಸಲಾಗಿತ್ತು. ಅಲ್ಲಿನ ಜಿಲ್ಲಾಡಳಿತಗಳು ಕೊಂಚ ನಿರಾಳವಾಗಿದ್ದವು. ಜೊತೆಗೆ ಏಪ್ರಿಲ್ 20ರ ಬಳಿಕ ಸ್ವಲ್ಪ ಮಟ್ಟಿಗಿನ ರಿಯಾಯತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಆ ಜಿಲ್ಲೆಗಳ ಜನರಿದ್ದರು. ಇದೀಗ ಇವತ್ತು ರಾಜ್ಯ ಸರ್ಕಾರ ಹೊರಡಿಸಿರುವ ಸೂಚನೆ ಆ ಜಿಲ್ಲೆಗಳ ಜನರ ನಿದ್ದೆ ಗೆಡಿಸಿದೆ.

ಕಳೆದ 3 ದಿನಗಳಿಂದ ತೀವ್ರವಾಗಿ ಹೆಚ್ಚುತ್ತಿರುವ ಪ್ರಕರಗಳು
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹಿಡಿತದಲ್ಲಿದೆ ಎಂದು ಕೊಳ್ಳುತ್ತಿರುವಾಗಲೇ ಕಳೆದ ಮೂರು ದಿನಗಳಿಂದ ಸೋಂಕಿತ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿವೆ. ಆದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಿರಿಯ ಸಚಿವರು, ತಜ್ಞ ವೈದ್ಯರು ಹಾಗೂ ಅಧಿಕಾರಿಗಳು ತುರ್ತು ಸಭೆಯನ್ನು ನಡೆಸಿ ತಕ್ಷಣ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಒಂದೆ ದಿನ ರಾಜ್ಯದಲ್ಲಿ 44 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಕರಣಗಳು ದಿಢೀರ್ ಎಂದು ಹೆಚ್ಚಾಗಿರುವುದು ಸರ್ಕಾರ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುವಂತೆ ಮಾಡಿವೆ. ಜೊತೆಗೆ ಈ ವರೆಗೆ ಸೋಂಕು ಪತ್ತೆ ಆಗದಿದ್ದ ಜಿಲ್ಲೆಗಳಿಗೆ ಹೊಸ ಸೂಚನೆ ಕೊಡಲಾಗಿದೆ.

ಸೋಂಕು ಪತ್ತೆಯಾಗದ ಜಿಲ್ಲೆಗಳಲ್ಲಿಯೂ ಪರೀಕ್ಷೆಗೆ ಸೂಚನೆ
ರಾಜ್ಯದ 10 ಜಿಲ್ಲೆಗಳಲ್ಲಿ ಈ ವರೆಗೂ ಕೊರೊನಾ ವೈರಸ್ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಆ ಜಿಲ್ಲೆಗಳನ್ನು ಸೇಫ್ ಜೋನ್ ಎಂದು ಗುರುತಿಸಿ ಕೊರೊನಾ ಹಸಿರು ವಲಯದಲ್ಲಿ ಸೇರಿಸಲಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಹೆಚ್ಚುತ್ತಿರುವ ಸೋಂಕಿತ ಪ್ರಕರಣಗಳ ಹಿನ್ನೆಲೆಯಲ್ಲಿ ಅಲ್ಲಿಯೂ ಕೂಡ ಶಂಕಿತರ ಪರೀಕ್ಷೆ ನಡೆಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸೂಚನೆ ನೀಡಿದ್ದಾರೆ. ತಜ್ಞರ ಸಲಹೆಯಂತೆ ಈವರೆಗೆ ಸೋಂಕು ಪತ್ತೆಯಾಗದ ಜಿಲ್ಲೆಗಳಲ್ಲಿಯೂ ಪರೀಕ್ಷೆಗೆ ಸೂಚಿಸಲಾಗಿದೆ.

ಜಿಲ್ಲಾಧಿಕಾರಿಗಳಿಗೆ ಮುಖ್ಯಕಾರ್ಯದರ್ಶಿಗಳ ಪತ್ರ
ಸೋಂಕು ಪತ್ತೆಯಾಗದೇ ಇರುವುದಕ್ಕೆ ಹಾಸನ, ಶಿವಮೊಗ್ಗ, ಚಾಮರಾಜನಗರ, ಹಾವೇರಿ, ಕೋಲಾರ, ಚಿಕ್ಕಮಗಳೂರು, ಯಾದಗಿರಿ, ರಾಯಚೂರು, ರಾಮನಗರ ಹಾಗೂ ಕೊಪ್ಪಳ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ ಅವರು ಪತ್ರ ಬರೆದಿದ್ದಾರೆ. ತಮ್ಮ ಜಿಲ್ಲೆಗಳಲ್ಲಿ ಈವರೆಗೂ ಯಾವುದೇ ಕೋವಿಡ್ 19 ಪ್ರಕರಣ ಪತ್ತೆಯಾಗದೇ ಇರುವುದು ಸಮಾಧಾನಕರ ಸಂಗತಿಯಾಗಿದೆ.
ಆದರೆ ಕೆಲವೊಂದು ತಜ್ಞರು ಕೋವಿಡ್ 19 ಸೋಂಕಿನ ಲಕ್ಷಣಗಳು ಕಾಣಿಸದೇ ಇದ್ದರೂ ಸಹ, ಸೋಂಕು ಇರುವ ಸಾಧ್ಯತೆ ಇರುವುದೆಂದು ಅಭಿಪ್ರಾಯ ಪಟ್ಟಿರುತ್ತಾರೆ. ಹೀಗಾಗಿ ಪರೀಕ್ಷೆ ನಡೆಸಿ ಎಂದು ಸೂಚಿಸಿದ್ದಾರೆ.

ದಿನಕ್ಕೆ 100 ರಂತೆ ಪ್ರತಿದಿನ ಪರೀಕ್ಷೆ ನಡೆಸಿ
ಸೋಂಕಿನ ಲಕ್ಷಣಗಳು ಕಾಣಿಸದೆ ಇದ್ದರೂ ಸೋಂಕಿನ ಸಾಧ್ಯತೆ ಇರುವುದರಿಂದ ಇಂದಿನಿಂದಲೇ Influeenza Like Illness(ILI) ಹಾಗೂ ತೀವ್ರತರ ಉಸಿರಾಟದ ಸೋಂಕು (SARI) ರೋಗದ ಲಕ್ಷಣಗಳಿರುವ ಪ್ರತಿ ದಿನ ಕನಿಷ್ಟ 100 ವೈದ್ಯಕೀಯ ಮಾದರಿಗಳನ್ನು ಪಡೆದು, ಸರ್ಕಾರದಿಂದ ಮಾನ್ಯತೆ ಹೊಂದಿರುವ ಅಧಿಕೃತ ಕೋವಿಡ್ ತಪಾಸಣಾ ಪ್ರಯೋಗಾಲಯಗಳಿಗೆ ದಿನಾಂಕ 17.04.2020 ರಿಂದ 19.04.2020ರವರೆಗೆ ಮೂರು ದಿನಗಳ ಕಾಲ ಪರೀಕ್ಷೆಗೆ ಕಳಿಸಬೇಕು.
ನಂತರ ದಿನಕ್ಕೆ 50ರಂತೆ ಪ್ರತಿ ಪ್ರತಿದಿನ ಇಂತಹ ಮಾದರಿಗಳನ್ನು ಪರೀಕ್ಷೆಗೆ ಕಳಿಸಲು ರಾಜ್ಯ ಸರ್ಕಾರ ಜಿಲ್ಲಾಡಳಿತಗಳಿಗೆ ಸೂಚಿಸಿದೆ. ಹೀಗಾಗಿ ತಮ್ಮ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರು ಇಲ್ಲ ಎಂದು ನಿರಾಳವಾಗಿದ್ದ ಜನರಲ್ಲಿ ಇದೀಗ ತಳಮಳ ಶುರುವಾಗಿದೆ. ಆದರೂ ರೋಗ ಪತ್ತೆಗೆ ಮುಂದಾಗಿರುವ ಸರ್ಕಾರದ ನಿರ್ಧಾರ ಆಯಾ ಜಿಲ್ಲೆಗಳ ಜನರಲ್ಲಿ ಸಮಾಧಾನವನ್ನೂ ತಂದಿದೆ.












Click it and Unblock the Notifications