ಇಲಾಖೆಗಳ ಸಿವಿಲ್ ಕಾಮಗಾರಿಗಳ ಮೇಲೆ ಸಮಿತಿಯ ಕಣ್ಣು!
ಬೆಂಗಳೂರು, ಅಕ್ಟೋಬರ್ 27: ಕರ್ನಾಟಕ ಸರ್ಕಾರ ಎಲ್ಲಾ ಇಲಾಖೆಗಳ ಸಿವಿಲ್ ಕಾಮಗಾರಿಗಳ ಹೆಚ್ಚುವರಿ ವೆಚ್ಚದ ಮೇಲೆ ನಿಗಾವಹಿಸಲಿದೆ. ಇದಕ್ಕಾಗಿ ಕಾಮಗಾರಿ ಅಂದಾಜುಗಳ ತಯಾರಿಕಾ ಅಧ್ಯಯನ ಸಮಿತಿ ರಚಿಸುವ ಬಗ್ಗೆ ಆದೇಶವನ್ನು ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಅಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ವೈ. ಬಿ. ಹೊನ್ನಲಿಂಗಪ್ಪ ವಿಶೇಷಾಧಿಕಾರಿ ಮತ್ತು ಪದನಿಮಿತ್ತ, ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಲೋಕೋಪಯೋಗಿ ಆರ್ಥಿಕ ಕೋಶ) ಆದೇಶ ಹೊರಡಿಸಿದ್ದಾರೆ. ಈ ಆದೇಶ ಸರ್ಕಾರದ ಎಲ್ಲಾ ಇಲಾಖೆಗಳ ಸಿವಿಲ್ ಕಾಮಗಾರಿಗಳ ಹಲವಾರು ಅಂದಾಜುಗಳು ಅಧಿಕ ಹೆಚ್ಚುವರಿಗಳಿಂದ ಪರಿಷ್ಕೃತಗೊಳ್ಳುತ್ತಿರುವುದನ್ನು ತಡೆಗಟ್ಟಲು/ ನಿಯಂತ್ರಿಸಲು ಕಾಮಗಾರಿ ಅಂದಾಜುಗಳ ತಯಾರಿಕಾ ಅಧ್ಯಯನ ಸಮಿತಿ ರಚಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಆದೇಶದ ವಿವರಗಳು; ಸರ್ಕಾರಕ್ಕೆ ವಿವಿಧ ಇಲಾಖೆಗಳಡಿ ಕೈಗೊಳ್ಳುತ್ತಿರುವ ಕಾಮಗಾರಿಗಳಲ್ಲಿ ಹಲವಾರು ಕಾಮಗಾರಿಗಳ ಅನುಷ್ಠಾನದಲ್ಲಿ ಇವುಗಳ ಯೋಜನೆ ಮತ್ತು ವಿನ್ಯಾಸ ತಯಾರಿಸುವಲ್ಲಿನ ನ್ಯೂನ್ಯತೆಗಳು, ಅವೈಜ್ಞಾನಿಕ ವಿಸ್ತ್ರತ ಯೋಜನಾ ವರದಿ ತಯಾರಿಕೆ, ಅಗತ್ಯವಿರುವ ಎಲ್ಲಾ ಐಟಂಗಳನ್ನೊಳಗೊಂಡ ಸಮಗ್ರವಾದ ಅಂದಾಜು ತಯಾರಿಸದೇ ಇರುವುದು, ಭೂಸ್ವಾಧೀನ ಪ್ರಕ್ರಿಯೆ, ಪರಿಸರ ಸಂಬಂಧಿತ ತೀರುವಳಿ ಮುಂತಾದ ಅಗತ್ಯವಿರುವ ಶಾಸನಬದ್ಧ ತೀರುವಳಿ ಸಕಾಲದಲ್ಲಿ ಪಡೆಯದೇ ಕಾಮಗಾರಿಗಳನ್ನು ಆರಂಭಿಸುವುದು, ಗುತ್ತಿಗೆ ಒಪ್ಪಂದದಲ್ಲಿ ನಿಖರವಾದ ನಿಬಂಧನೆ/ ಷರತ್ತುಗಳ ವಿಧಿಸುವ ಕೊರತೆಯಿಂದ ಉಂಟಾಗುವ ಆರ್ಬಿಟ್ರೇಷನ್/ ನ್ಯಾಯಾಲಯಗಳ ದಾವೆಗಳಿಂದ ಉಂಟಾಗುವ ವಿಳಂಬ ಹಾಗೂ ಇತರೆ ಕಾರಣಾಂತರಗಳಿಂದ ಕಾಮಗಾರಿಗಳ ಮೂಲ ಅಂದಾಜು ಮೊತ್ತವು ಪರಿಷ್ಕೃತಗೊಂಡು ಸರ್ಕಾರಕ್ಕೆ ಆರ್ಥಿಕ ಹೊರೆ ಉಂಟಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ.
ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾಗುತ್ತಿರುವುದರಿಂದ ಈ ಕಾಮಗಾರಿಗಳ ಸೌಲಭ್ಯಗಳು ಸಾರ್ವಜನಿಕರಿಗೆ ಸಕಾಲದಲ್ಲಿ ತಲುಪುವಲ್ಲಿ ವಿಳಂಬವಾಗುತ್ತಿರುವುದನ್ನೂ ಸಹ ಸರ್ಕಾರವು ಗಮನಿಸಿರುತ್ತದೆ. ಮೂಲ ಅಂದಾಜುಗಳು ಪರಿಷ್ಕರಣೆಗೊಳ್ಳುವ ಮೂಲಕ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿರುವುದನ್ನು ತಡೆಗಟ್ಟಲು ಹಾಗೂ ಸರ್ಕಾರದ ಕಾಮಗಾರಿಗಳ ಸೌಲಭ್ಯಗಳು ಸಾರ್ವಜನಿಕರಿಗೆ ಸಕಾಲದಲ್ಲಿ ಪೂರೈಸುವ ಉದ್ದೇಶದಿಂದ ಕಾಮಗಾರಿಗಳ ಅಂದಾಜುಗಳು ಪರಿಷ್ಕರಣೆಯಾಗಲು ಕಾರಣವಾಗುವ ಎಲ್ಲಾ ಅಂಶಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ನ್ಯೂನ್ಯತೆಗಳನ್ನು ಗುರುತಿಸಿ ಸೂಕ್ತ ಸಲಹೆ/ ಸೂಚನೆಗಳುಳ್ಳ ವರದಿಯನ್ನು ನೀಡಲು ಪರಿಣಿತರನ್ನೊಳಗೊಂಡ ಸಮಿತಿಯನ್ನು ರಚಿಸಲು ಸರ್ಕಾರವು ತೀರ್ಮಾನಿಸಿದೆ ಎಂದು ಪ್ರಸ್ತಾವನೆ ಹೇಳಿತ್ತು.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಅಂದಾಜುಗಳು ಪರಿಷ್ಕೃತಗೊಳ್ಳುತ್ತಿರುವುದರ ಬಗ್ಗೆ ಸಮಗ್ರವಾಗಿ ಪರಾಮರ್ಶಿಸಿ ಹಾಗೂ ಅಧ್ಯಯನ ನಡೆಸಿ ಕಾಮಗಾರಿಗಳ ಅಂದಾಜುಗಳು ಅನಗತ್ಯವಾಗಿ ಪರಿಷ್ಕೃತಗೊಳ್ಳುವುದನ್ನು ತಡೆಗಟ್ಟಲು/ ನಿಯಂತ್ರಿಸಲು ಸೂಕ್ತ ಸಲಹೆ/ ಸೂಚನೆಗಳನ್ನು ಒಳಗೊಂಡ ವರದಿಯನ್ನು ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸಲು 'ಕಾಮಗಾರಿ ಅಂದಾಜುಗಳ ತಯಾರಿಕಾ ಅಧ್ಯಯನ ಸಮಿತಿ'ಯನ್ನು ರಚಿಸಿ ಆದೇಶಿಸಿದೆ.
ಈ ಸಮಿತಿಗೆ ಬಿ. ಗುರುಪ್ರಸಾದ್ ಸರ್ಕಾರದ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆ ಹಾಗೂ ಪ್ರಧಾನ ಅಭಿಯಂತರರು (ನಿವೃತ್ತ) ಅಧ್ಯಕ್ಷರಾಗಿದ್ದಾರೆ. ಕೆ. ಎಸ್. ಹರೀಶ್ ಸರ್ಕಾರದ ಅಧೀನ ಕಾರ್ಯದರ್ಶಿ (ನಬಾರ್ಡ್), ಲೋಕೋಪಯೋಗಿ ಇಲಾಖೆ, ವಿಕಾಸಸೌಧ ಸದಸ್ಯರು. ಎಂ. ಎಸ್. ಪದ್ಮನಿ ಜಂಟಿ ನಿಯಂತ್ರಕರು, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಕೆ. ಆರ್. ವೃತ್ತ ಬೆಂಗಳೂರು ಸದಸ್ಯರಾಗಿದ್ದಾರೆ.
ಈ ಸಮಿತಿಯು ಕಾಮಗಾರಿಗಳ ಪರಿಷ್ಕೃತ ಅಂದಾಜುಗಳಿಗೆ ಸಂಬಂಧಿಸಿದಂತೆ ಅಧಿನಿಯಮ, ನಿಯಮಗಳು, ಸುತ್ತೋಲೆಗಳು, ಸರ್ಕಾರಿ ಆದೇಶಗಳು, ಇಲಾಖಾ ಸಂಹಿತೆಗಳನ್ನೂ ಸಹ ಪರಾಮರ್ಶಿಸಿ ಅಧ್ಯಯನ ನಡೆಸಿ ಅಗತ್ಯವಿರುವ ಸಲಹೆ/ ಸೂಚನೆಗಳನ್ನೊಳಗೊಂಡ ವರದಿಯನ್ನು ಒಂದು ತಿಂಗಳೊಳಗಾಗಿ ನೀಡಲು ಆದೇಶಿಸಲಾಗಿದೆ.
ಸಮಿತಿಗೆ ಸೂಚನೆಗಳು
* ಕಾಮಗಾರಿಗಳ ಯೋಜನೆ ಮತ್ತು ವಿನ್ಯಾಸ ತಯಾರಿಕೆಯಲ್ಲಿ ಸುಧಾರಣೆ ಕುರಿತು
* ಕಾಮಗಾರಿಗಳ ಸ್ವರೂಪ, ಭೂ ಒಡೆತನ ಹಾಗೂ ಕಾಮಗಾರಿಗೆ ಅಗತ್ಯವಿರುವ ಭೂಮಿಯ ಪರಿಮಾಣ ಆಧರಿಸಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕಾಲಮಿತಿ ನಿಗದಿಪಡಿಸುವ ಕುರಿತು
* ರೂ.10 ಕೋಟಿವರೆಗಿನ ಅಂದಾಜು ಮೊತ್ತದ ಕಾಮಗಾರಿಗಳ ಯೋಜನೆ ಮತ್ತು ವಿನ್ಯಾಸವನ್ನು ಪರಿಣಾಮಕಾರಿಯಾಗಿ ರೂಪಿಸಿ ಸಕಾಲದಲ್ಲಿ ಪೂರ್ಣಗೊಳಿಸಲು ಸಾಧ್ಯವಿರುವುದರಿಂದ ಇವುಗಳ ಅನುಮೋದಿತ ಅಂದಾಜುಗಳು, ಮೂಲ ಅಂದಾಜು ಮೊತ್ತವನ್ನು ಮೀರಿ ಪರಿಷ್ಕೃತಗೊಳ್ಳುವುದನ್ನು ನಿರ್ಬಂಧಗೊಳಿಸುವ ಕುರಿತು
* ಗುತ್ತಿಗೆದಾರರು ಆರ್ಬಿಟ್ರೇಷನ್/ ನ್ಯಾಯಾಲಯಗಳಲ್ಲಿ ದಾವೆ ಹೂಡವುದನ್ನು ತಡೆಯುವ ನಿಟ್ಟಿನಲ್ಲಿ ಗುತ್ತಿಗೆ ಕರಾರುಗಳಲ್ಲಿ ಸೂಕ್ತ ರೀತಿಯ ಷರತ್ತು/ ನಿಬಂಧನೆಗಳ ಅಳವಡಿಕೆ ಹಾಗೂ ಇವುಗಳನ್ನು ಜಾರಿಗೊಳಿಸುವಲ್ಲಿ ಇಲಾಖೆಗಳಿಗೆ ಹೊಣೆಗಾರಿಕೆ ನಿಗದಿಪಡಿಸುವ ಕುರಿತು
* ಪರಿಷ್ಕೃತ ಅಂದಾಜನ್ನು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯನ್ನು ಪಡೆಯುವ ಕುರಿತಂತೆ ಕಾಲಮಿತಿ ನಿಗದಿಪಡಿಸುವ ಕುರಿತು ಸಮಿತಿ ಪರಿಶೀಲನೆ ನಡೆಸಲಿದೆ.












Click it and Unblock the Notifications