Siddaramaiah: ಸಂವಿಧಾನ ಬದಲಾವಣೆ ಕುರಿತು ಪೇಜಾವರ ಶ್ರೀ ಹೇಳಿಕೆ: ಸಿದ್ದರಾಮಯ್ಯ ಏನಂದ್ರು?
ಬೆಂಗಳೂರು, ನವೆಂಬರ್ 26: ಸಂವಿಧಾನಕ್ಕೆ ವಿರೋಧವಾಗಿರುವವರು ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಇತ್ತೀಚೆಗೆ ಉಡುಪಿಯ ಪೇಜಾವರ ಶ್ರೀಗಳೂ ಸಹ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ. ಸಂವಿಧಾನವನ್ನು ರಕ್ಷಿಸುವ ಕಾರ್ಯ ನಮ್ಮ ಸರ್ಕಾರ ಮಾಡುತ್ತಿದೆ. ಸಂವಿಧಾನದಲ್ಲಿ ಈಗಾಗಲೇ 106 ತಿದ್ದುಪಡಿಗಳಾಗಿದ್ದು, ವಿಶ್ವದಲ್ಲಿ ದೀರ್ಘಕಾಲದಿಂದ ಅಸ್ತಿತ್ವದಲ್ಲಿರುವುದು ಭಾರತದ ಸಂವಿಧಾನ ಎಂಬ ಹೆಮ್ಮೆ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ವಿಧಾನಸೌಧ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂವಿಧಾನ ನೀಡಿರುವ ಹಕ್ಕುಗಳನ್ನು ಚಲಾಯಿಸುವ ಜೊತೆಗೆ , ಭಾದ್ಯತೆಗಳನ್ನು ತಪ್ಪದೇ ಪಾಲಿಸುವುದೂ ಆವಶ್ಯಕ. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಭಾರತದ ಸಂವಿಧಾನ ಅಂಗೀಕರಣಗೊಂಡ 75 ನೇ ವಾರ್ಷಿಕೋತ್ಸವವನ್ನು ಸಂವಿಧಾನ ದಿನ ಎಂದು ಆಚರಿಸುತ್ತೇವೆ. ಕೇಂದ್ರ , ರಾಜ್ಯ ಸರ್ಕಾರಗಳು ಹಾಗೂ ಎಲ್ಲ ಸ್ಥಳೀಯ ಸಂಸ್ಥೆಗಳು ಸಂವಿಧಾನದಂತೆ ನಡೆದು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವಂತೆ ಕೆಲಸ ಮಾಡಬೇಕು. ಆದ್ದರಿಂದ ರಾಜ್ಯದ ೆಲ್ಲ ಶಾಲಾಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆಯನ್ನು ಕಡ್ಡಾಯವಾಗಿ ಓದಿ, ಅದರ ಆಶಯಗಳನ್ನು ವಿದ್ಯಾರ್ಥಿಗಳು ಮನನ ಮಾಡಿಕೊಳ್ಳಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ನಮ್ಮ ರಾಜಕೀಯದ ಮತ್ತು ಸರ್ಕಾರದ ಸಿದ್ಧಾಂತವೂ ಹೌದು. ಈ ಆಶಯಗಳೊಂದಿಗೆ ಸಾಗುತ್ತಿರುವ ನಮ್ಮ ಸರ್ಕಾರ ಎದುರಾಗುವ ಎಲ್ಲ ಪ್ರತಿರೋಧಗಳನ್ನು ಬಾಬಾಸಾಹೇಬ್ ಅಂಬೇಡ್ಕರರು ನಮ್ಮ ಕೈಯಲ್ಲಿಟ್ಟು ಹೋಗಿರುವ ಸಂವಿಧಾನದ ಅಸ್ತ್ರದ ಮೂಲಕವೇ ಎದುರಿಸಿ ಮುನ್ನಡೆಯಲಿದೆ.
ಇದೇ ಸಂದರ್ಭದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಸಂವಿಧಾನದ ಪ್ರಸ್ತಾವಣೆಯಲ್ಲಿರುವ ಸಮಾಜವಾದಿ ಮತ್ತು ಜಾತ್ಯತೀತ ಆಶಯಗಳನ್ನು ಎತ್ತಿಹಿಡಿಯುತ್ತಿರುವುದು ಅತೀವ ಸಂತೋಷ ಮತ್ತು ಭವಿಷ್ಯದಲ್ಲಿ ಭರವಸೆಯನ್ನು ಮೂಡಿಸಿದೆ. ಭಾರತೀಯ ಸಂವಿಧಾನವು ಅಂಗೀಕಾರಗೊಂಡ ಈ ದಿನದಂದು ಸಂವಿಧಾನಶಿಲ್ಪಿ ಅಂಬೇಡ್ಕರರನ್ನು ಗೌರವದಿಂದ ನೆನೆಯುತ್ತೇನೆ. ನಾಡಬಾಂಧವರಿಗೆಲ್ಲರಿಗೂ ಸಂವಿಧಾನ ದಿನಾಚರಣೆಯ ಶುಭಾಶಯಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಕೋರಿದ್ದಾರೆ.












Click it and Unblock the Notifications