ರೈತಪರ ಕಾಳಜಿಯಿಲ್ಲದ ಸರ್ಕಾರದ ಪಂಚೇಂದ್ರಿಯಗಳು ನಿಷ್ಕ್ರಿಯಗೊಂಡಿವೆ
ಬೆಳಗಾವಿ, ಡಿಸೆಂಬರ್ 07: ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡಲು ಮೀನಾ ಮೇಷ ಎಣಿಸುವ ರಾಜ್ಯ ಸರ್ಕಾರ ಮುಸ್ಲಿಮರ ಓಲೈಕೆಗೆ 10,000 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಹೇಳಿರುವುದು ತುಷ್ಟೀಕರಣದ ಪರಮಾವಧಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ರೈತರ ಪರ ಧ್ವನಿ ಎತ್ತಿದ್ದಾರೆ.
ವಿಧಾನಸಭೆ ಕಲಾಪದ ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲೇ ಇಂತಹ ರೈತ ವಿರೋಧಿ ಸರ್ಕಾರವನ್ನು ಕಂಡಿರಲಿಲ್ಲ. ನಿಡಸೋಶಿ ಗ್ರಾಮದ ಯುವ ರೈತ ಶಿವಪ್ಪ ಶಿವಲಿಂಗ ಎಂಬಾತ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ.

ಅಧಿವೇಶನ ಆರಂಭದ ದಿನ ದುರಂತ ನಡೆದಿದ್ದು ಇಡೀ ಸರಕಾರಿ ಆಡಳಿತ ಬೆಳಗಾವಿಯಲ್ಲಿ ಇದ್ದರೂ ಯಾರೊಬ್ಬರೂ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಮುಂಗಾರು ವೈಫಲ್ಯದ ಬೆನ್ನಲ್ಲೇ ಹಿಂಗಾರು ಕೈಕೊಟ್ಟಿದೆ. ಈ ಬಗ್ಗೆ ಯಾವುದೇ ಸಚಿವ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಮೌಲ್ವಿಗಳ ಕಾರ್ಯಕ್ರಮದಲ್ಲಿ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ ನೀಡುವ ಅನುದಾನವನ್ನು ಹತ್ತು ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸುವುದಾಗಿ ಹೇಳಿದ್ದಾರೆ. ಇವರಿಗೆ ಸಾಯುತ್ತಿರುವ ರೈತರು ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ನಿಷ್ಕ್ರಿಯ ಸರ್ಕಾರ
ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚೇಂದ್ರಿಯಗಳು ನಿಷ್ಕ್ರಿಯ ಗೊಂಡಂತಿದೆ. ರೈತರು, ಕೂಲಿ ಕಾರ್ಮಿಕರ ಸಂಕಷ್ಟದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಬರದಿಂದ ಅಸಹಾಯಕ ರಾಗಿ ನೆರವಿನತ್ತ ನೋಡುತ್ತಿರುವವರನ್ನು ನಡು ದಾರಿಯಲ್ಲಿ ಕೈ ಬಿಟ್ಟಿದೆ ಎಂದು ಕಲಾಪದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ವಿಪಕ್ಷ ನಾಯಕರು ಉತ್ತರಿಸಿದರು.

ಬರ ಪರಿಹಾರದ ವಿಷಯ ಬಂದರೂ ಕೇಂದ್ರದತ್ತ ಬೊಟ್ಟು ಮಾಡುತ್ತಾರೆ. ಕೊಬ್ಬರಿ ಬೆಳೆಗಾರರ ನೆರವಿಗೆ ಮುಂದಾಗಿ ಎಂದರೂ ನಫೆಡ್ ಖರೀದಿಸಲಿ ಎನ್ನುತ್ತಾರೆ. ಎಲ್ಲವನ್ನೂ ಕೇಂದ್ರವೇ ಮಾಡಬೇಕು ಎಂದಾದರೆ ಇವರ ಪಾತ್ರ ಏನು? ಸಂಕಷ್ಟದಲ್ಲಿರುವ ಜನತೆಗೆ ಕಿಂಚಿತ್ತೂ ಸಹಾಯ ಮಾಡಬೇಕು ಎಂಬ ಮಾನವಿಯತೆ ಇಲ್ಲದ ಕಟುಕ ಸರ್ಕಾರ ಎಂದು ದೂರಿದರು.
ಕೇಂದ್ರದಿಂದ ಹಣ ಬಿಡುಗಡೆ
ನಮ್ಮ ತಾಳ್ಮೆಗೂ ಒಂದು ಮಿತಿಯಿದೆ. ಬೆಳಗಾವಿ ಅಧಿವೇಶನದಲ್ಲಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಇಲ್ಲವಾದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೇಂದ್ರದ ನೆರವು ಯಾವುದೇ ಕಾರಣಕ್ಕೂ ಬರುವುದು ನಿಲ್ಲುವುದಿಲ್ಲ. ಸಂಬಂಧಿಸಿದ ಸಚಿವಾಲಯಗಳಲ್ಲಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಣ ಬಿಡುಗಡೆ ಆಗುತ್ತದೆ. ಅಲ್ಲಿಯವರೆಗೆ ಕಾಲಹರಣ ಮಾಡದೆ ರಾಜ್ಯ ಸರ್ಕಾರ ನಾವು ಹಿಂದೆ ನೀಡಿದ್ದಂತೆ ಮಾರ್ಗಸೂಚಿಗಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚಿನ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.












Click it and Unblock the Notifications