Government employee; ಆರೋಗ್ಯ ಸಂಜೀವಿನಿ ಯೋಜನೆಗೆ ಯಾರು ಅರ್ಹರು?
ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗಾಗಿ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ'ಯನ್ನು ಜಾರಿಗೊಳಿಸಲಿದೆ. ಈ ಯೋಜನೆಗೆ ಯಾರು ಅರ್ಹರು ಎಂಬ ಕುರಿತು ಪರಿಷ್ಕೃತ ಆದೇಶವನ್ನು ಪ್ರಕಟಿಸಲಾಗಿದೆ.
ಬೆಂಗಳೂರು, ಮಾರ್ಚ್ 13; ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ, ಅವರ ಕುಟುಂಬದ ಸದಸ್ಯರಿಗೆ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ'ಯನ್ನು ಜಾರಿಗೊಳಿಸಲಿದೆ. ಈ ಕುರಿತು ರಾಜ್ಯಪತ್ರದಲ್ಲಿ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಯೋಜನೆ ಜಾರಿ ಕುರಿತು ಕಾರ್ಯ ನೀತಿ ಬಗ್ಗೆ ಪರಿಷ್ಕೃತ ಸೂಚನೆಗಳನ್ನು ನೀಡಲಾಗಿದೆ. ಈ ಯೋಜನೆಗೆ ಯಾವ ನೌಕರರು ಒಳಪಡಲಿದ್ದಾರೆ ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ಪರಿಷ್ಕೃತ ಆದೇಶದಲ್ಲಿ ನೀಡಲಾಗಿದೆ.
ರಾಜ್ಯಪತ್ರದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನೂತನ 'ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ'ಯನ್ನು (THE KARNATAKA AROGYA SANJEEVINI SCHEME -KASS) ಜಾರಿಗೊಳಿಸುವ ಕಾರ್ಯನೀತಿ ಬಗ್ಗೆ ಪರಿಷ್ಕೃತ ಸೂಚನೆಗಳನ್ನು ನೀಡುವ ಬಗ್ಗೆ ಎಂದು ಸೂಚನೆಗಳನ್ನು ನೀಡಲಾಗಿದೆ. ರಾಜ್ಯ ಸರ್ಕಾರವು 2020-21ನೇ ಹಾಗೂ 2021-22ನೇ ಸಾಲಿನ ಅಯ್ಯವ್ಯಯದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ಶಸ್ತ್ರ ಚಿಕಿತ್ಸಾ ವಿಧಾನಗಳಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ಒಂದು ನೂತನ ಯೋಜನೆಯನ್ನು ಘೋಷಿಸಿದ್ದು, ಅದರಂತೆ ಯೋಜನೆಯ ರೂಪುರೇಷೆಗಳೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆರ್ಥಿಕ ಇಲಾಖೆಗಳೊಂದಿಗೆ ಸಮಾಲೋಚಿಸಲಾಗಿದೆ ಎಂದು ಹೇಳಿದೆ.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಎಂಬ ಮಹತ್ವಾಕಾಂಕ್ಷಿ ನೂತನ ಯೋಜನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮುಖಾಂತರ (SAST) ಅನುಷ್ಠಾನಗೊಳಿಸಲು ಸರ್ಕಾರವು ನಿರ್ಧರಿಸಿದೆ. ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತಂತೆ ಕೆಲವು ಆರಂಭಿಕ ಕಾರ್ಯನೀತಿ (POLICY FRAME WORK) ಬಗ್ಗೆ ಸೂಚನೆಗಳನ್ನು ನೀಡಲಾಗಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಯೋಜನೆಯಲ್ಲಿ ಒಳಗೊಂಡ ವೈದ್ಯಕೀಯ ಚಿಕಿತ್ಸಾ ವಿಧಾನಗಳು ಹಾಗೂ ದರಗಳು, ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಯೋಜನೆಗೆ ಒಳಪಡಲು ಅರ್ಹತೆ ಹಾಗೂ ಅರ್ಜಿ ನಮೂನೆಗಳು, ಡಿಡಿಓಗಳಿಗೆ ನೋಂದಾವಣೆ ಸಂಬಂಧ ಸೂಚನೆಗಳನ್ನು ನೀಡಲಾಗಿದೆ.
ಸಕ್ಷಮ ಪ್ರಾಧಿಕಾರಿಗಳಿಗೆ ಸೂಚನೆಗಳು, ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ, ಹಾಗೂ ಇತರೆ ಅವಶ್ಯವಿರುವ ಕೆಲವು ನಿರ್ದೇಶನಗಳನ್ನು ಹೊರಡಿಸಬೇಕಾಗಿದೆ. SAST ಇವರು ಸರ್ಕಾರಕ್ಕೆ ಸಲ್ಲಿಸಿರುವ ಪುಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ, ಅದರಂತೆ ಈ ಆದೇಶ ಹೊರಡಿಸಲಾಗಿದೆ. ಪ್ರಸ್ತಾವನೆಯಲ್ಲಿ ವಿವರಿಸಿದಂತೆ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಒದಗಿಸಲು ನೂತನ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಸರ್ಕಾರವು ಈ ಕೆಳಕಂಡ ಸೂಚನೆಗಳನ್ನು ನೀಡಿ ಆದೇಶಿಸಿದೆ.
'ಕುಟುಂಬ' ಪದವನ್ನು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ನಿಯಮ 2ರಲ್ಲಿನ ಸರ್ಕಾರಿ ನೌಕರನ ಪತಿ ಅಥವಾ ಪತ್ನಿ, ತಂದೆ ಮತ್ತು ತಾಯಿ (ಮಲ ತಾಯಿಯನ್ನೊಳಗೊಂಡಂತೆ) ಅವರು ಸರ್ಕಾರಿ ನೌಕರನೊಂದಿಗೆ ಸಾಮಾನ್ಯವಾಗಿ ವಾಸವಾಗಿದ್ದಲ್ಲಿ ಮತ್ತು ಅವರ ಒಟ್ಟು ಮಾಸಿಕ ಆದಾಯ ಕನಿಷ್ಠ ಕುಟುಂಬ ಪಿಂಚಣಿ (ರೂ. 8500) ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರದಿದ್ದಲ್ಲಿ. ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲಮಕ್ಕಳನ್ನೊಳಗೊಂಡಂತೆ) ಕುಟುಂಬದ ಸದಸ್ಯರನ್ನು ನೋಂದಾಯಿಸಿಕೊಳ್ಳತಕ್ಕದ್ದು.

ಯಾವ ನೌಕರರು ಅರ್ಹರು; ಯೋಜನೆಯಡಿ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ರಡಿ ವೈದ್ಯಕೀಯ ಹಾಜರಾತಿಗೆ ಅರ್ಹರಿರುವ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರು. ಈ ಯೋಜನೆಗೆ ಒಳಪಡದ ನೌಕರ ವರ್ಗ ರಾಜ್ಯ ಉಚ್ಚ ನ್ಯಾಯಾಲಯದ ನೌಕರರು, ರಾಜ್ಯ ವಿಧಾನ ಮಂಡಲದ ನೌಕರರು, ಆರೋಗ್ಯ ಭಾಗ್ಯ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿ, ಕರ್ನಾಟಕ ನ್ಯಾಯಾಂಗ ಅಧಿಕಾರಿಗಳ ವೈದ್ಯಕೀಯ ಹಾಜರಾತಿ ನಿಯಮಗಳು, 2009 ರಡಿ ವೈದ್ಯಕೀಯ ಸೌಲಭ್ಯ ಪಡೆಯುತ್ತಿರುವ ನ್ಯಾಯಾಂಗ ಅಧಿಕಾರಿಗಳು, ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು, ಸಾರ್ವಜನಿಕ ಸ್ಥಾಪನೆಗಳು ಅಂದರೆ ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ನಿಗಮ/ ಮಂಡಳಿಗಳು, ಸಹಕಾರ ಸಂಸ್ಥೆಗಳ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಇತರೆ ಸಂಸ್ಥೆಗಳು.
ಯೋಜನೆಗೆ ನೋಂದಾಯಿಸಿಕೊಳ್ಳುವುದು (Enrolment). ಸರ್ಕಾರಿ ನೌಕರರು KASS ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವ ಸಂಬಂಧ ಅರ್ಜಿ ನಮೂನೆ ಹಾಗೂ ಸರ್ಕಾರಿ ನೌಕರರಿಗೆ, ಕಚೇರಿ ಮುಖ್ಯಸ್ಥರು ಹಾಗೂ ಡಿಡಿಓ ಗಳಿಗೆ ಇನ್ನಿತರೆ ಕೆಲವು ಸೂಚನೆಗಳನ್ನು ಮತ್ತು ಘೋಷಣಾ ಪತ್ರಗಳ ನಮೂನೆಗಳನ್ನು ನೀಡಲಾಗಿದೆ. ಯೋಜನೆಯ ಫಲಾನುಭವಿಗಳನ್ನು ಗುರುತಿಸಲು ಹಾಗೂ ನೋಂದಾಯಿಸಲು ಮತ್ತು ಯಾವುದೇ ಬದಲಾವಣೆಗಳನ್ನು ಕೈಗೊಳ್ಳಲು ಪಸ್ತುತ HRMS ವ್ಯವಸ್ಥೆಯಲ್ಲಿ ಲಭ್ಯವಿರುವ ದತ್ತಾಂಶವನ್ನು ಅಳವಡಿಸಿಕೊಳ್ಳಲು ಹಾಗೂ ಈ ಸಂಬಂಧ ಅಗತ್ಯ ಮಾರ್ಪಾಡುಗಳನ್ನು ಕೈಗೊಳ್ಳಲು ಮತ್ತು ಈ ದತ್ತಾಂಶವನ್ನು ಬಳಸಲು ಎಲ್ಲಾ ಡಿಡಿಓಗಳಿಗೆ ತಾತ್ಕಾಲಿಕವಾಗಿ ಅನುಮತಿಸಲಾಗಿದೆ.
ನೀಡಲಾದ ಸೂಚನೆಗಳನ್ನು ಮತ್ತು ನಿಗದಿಪಡಿಸಲಾದ ನಮೂನೆಗಳು ಮತ್ತು ಘೋಷಣಾ ಪತ್ರಗಳನ್ನು ಆಧರಿಸಿ ಡಿಡಿಓ ಗಳು HRMSನಲ್ಲಿ ಅಗತ್ಯ ನಮೂದುಗಳನ್ನು ಕೈಗೊಳ್ಳತಕ್ಕದ್ದು. ಈ ಸಂಬಂಧ HRMS ಸಂಸ್ಥೆಗೆ ಪ್ರತ್ಯೇಕ ಸೂಚನೆಗಳನ್ನು ನೀಡಲಾಗುವುದು. HRMS ಸಂಸ್ಥೆಯು ಯೋಜನೆಯ ನೋಂದಾವಣೆಗೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ಎಲ್ಲಾ ಸರ್ಕಾರಿ ನೌಕರರು ಹಾಗೂ ಡಿಡಿಓ ಗಳು ಕಟ್ಟುನಿಟ್ಟಾಗಿ ಅನುಸರಿಸತಕ್ಕದ್ದು.
ಖಾಸಗಿ ಆಸ್ಪತ್ರೆಗಳೊಂದಿಗೆ ಭಾವಿತ ನೋಂದಾವಣೆ. ಯೋಜನೆಗೆ ಕ್ಷಿಪ್ರಗತಿಯಲ್ಲಿ ಚಾಲನೆ ನೀಡುವ ಉದ್ದೇಶದಿಂದ, ಈಗಾಗಲೇ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಡಿಯಲ್ಲಿ ವಿವಿಧ ಯೋಜನೆಗಳಡಿಯಲ್ಲಿ ಮತ್ತು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ರಡಿ ನೋಂದಾಯಿತವಾಗಿರುವ (ಜ್ಯೋತಿ ಸಂಜೀವಿನಿ ಯೋಜನೆ ಸೇರಿದಂತೆ) ಖಾಸಗಿ ಆಸ್ಪತ್ರೆಗಳನ್ನು KASS ಯೋಜನೆಯಡಿ ಭಾವಿತ ನೋಂದಾವಣೆಗೆ ಒಳಪಡಿಸಲು ಅನುಮತಿಸಲಾಗಿದೆ. ಆದರೆ ಅಂತಹ ಆಸ್ಪತ್ರೆಗಳು ಯೋಜನೆಯಡಿ ನಿಗದಿಪಡಿಸಿರುವ ಒಡಂಬಡಿಕೆಗೆ ಒಪ್ಪಿಗೆಯನ್ನು ಸೂಚಿಸತಕ್ಕದ್ದು ಮತ್ತು ಆರು ತಿಂಗಳಲ್ಲಿ ಯೋಜನೆಗೆ ನಿಗದಿಪಡಿಸಿರುವ ಪೂರ್ಣ ಪ್ರಮಾಣದ ಮಾನದಂಡಗಳನ್ನು ಪೂರೈಸತಕ್ಕದ್ದು.
ವಿವಿಧ ತಜ್ಞತೆಗಳ ಆಸ್ಪತ್ರೆಗಳು ಹೊಂದಿರಬೇಕಾದ (ಉದಾ: ತಜ್ಞತೆಗನುಸಾರ ಆಸ್ಪತ್ರೆ ಹಾಸಿಗೆಗಳ ಸಂಖ್ಯೆ, ವಿಸ್ತೀರ್ಣ, ತಜ್ಞ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ, ಯಂತ್ರೋಪಕರಣಗಳು, ಪ್ರಮಾಣ ಪತ್ರಗಳು ಇತ್ಯಾದಿ) ಮಾನದಂಡಗಳನ್ನು ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರು ರಚಿಸಿ ಪ್ರಕಟಿಸಲು ಕ್ರಮವಹಿಸತಕ್ಕದ್ದು. KASS ಯೋಜನೆಯಲ್ಲಿ ಒಳಗೊಂಡಿರುವ ವೈದ್ಯಕೀಯ ಚಿಕಿತ್ಸಾ ವಿಧಾನಗಳು ಹಾಗೂ ಚಿಕಿತ್ಸಾ ದರಗಳು (Medical Procedures and Rates)ಯೋಜನೆಯಲ್ಲಿ ಒಳಗೊಂಡಿರುವ ವೈದ್ಯಕೀಯ ಚಿಕಿತ್ಸಾ ವಿಧಾನಗಳು ಹಾಗೂ ಚಿಕಿತ್ಸಾ ದರಗಳ ಪಟ್ಟಿಯನ್ನು ನೀಡಲಾಗಿದೆ.
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ರ ನಿಯಮ 3(h) ಮತ್ತು 8ರಲ್ಲಿ ನಿಗದಿಪಡಿಸಿರುವ ವಾರ್ಡ್ ದರಗಳು ರಾಜ್ಯದ 6ನೇ ವೇತನ ಆಯೋಗದ ಅನ್ವಯವಾಗತಕ್ಕದ್ದು. ಈ ಸೂಚನೆಯಂತೆ KASS ಯೋಜನೆಯನ್ನು ಕಾರ್ಯಾರಂಭಗೊಳಿಸಲು ಕಾರ್ಯಕಾರಿ ನಿರ್ದೇಶಕರು, SAST ಬೆಂಗಳೂರು ಇವರು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಲಾಗಿದೆ.












Click it and Unblock the Notifications