Government Employee: ಮುಂದಿನ ವಾರ ಸರ್ಕಾರಿ ನೌಕರರಿಗೆ ವಿಶೇಷ ರಜೆ
ಬೆಂಗಳೂರು, ಆಗಸ್ಟ್ 10: ಕರ್ನಾಟಕದ ಸರ್ಕಾರಿ ನೌಕರರಿಗೆ ಮುಂದಿನ ವಾರ (ಆಗಸ್ಟ್ 7ರಂದು) ಷರತ್ತಿಗೊಳಪಟ್ಟು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗುತ್ತದೆ. ಈ ಕುರಿತು ಅಧಿಕೃತ ಆದೇಶ ಇನ್ನೂ ಪ್ರಕಟವಾಗಬೇಕಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸುತ್ತೋಲೆಯಲ್ಲಿ ಮಾಹಿತಿ ನೀಡಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘ ಆಯೋಜನೆ ಮಾಡಿರುವ 'ನಮ್ಮಭಿಮಾನದ ಅಭಿನಂದನಾ ಸಮಾರಂಭ'ದ ಕುರಿತು ಮಾಹಿತಿ ನೀಡಲಾಗಿದೆ. ಬೆಂಗಳೂರು ನಗರದ ಮೇಕ್ರಿ ಸರ್ಕಲ್ ಸಮೀಪದ ಅರಮನೆ ಮೈದಾನದಲ್ಲಿ ಆಗಸ್ಟ್ 17ರ ಶನಿವಾರ ಸಮಾರಂಭ ನಡೆಯಲಿದೆ.

ಈ ಸಮಾರಂಭದ ಕುರಿತು ಜಿಲ್ಲೆ/ ತಾಲ್ಲೂಕು ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ನಿರ್ದೇಶಕರುಗಳಿಗೆ ಮಾಹಿತಿ ನೀಡಲಾಗಿದೆ. ಆಗಸ್ಟ್ 17ರ ಶನಿವಾರ ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿರುವ 'ನಮ್ಮಭಿಮಾನದ ಅಭಿನಂದನೆ ಮತ್ತು ಕಾರ್ಯಾಗಾರವನ್ನು ಯಶಸ್ವಿಗೊಳಿಸಬೇಕಾಗಿದ್ದು, ಜಿಲ್ಲೆ/ ತಾಲ್ಲೂಕು/ ಯೋಜನಾ ಶಾಖೆಗಳ ಅಧ್ಯಕ್ಷರು ಸಭೆಗಳನ್ನು ನಡೆಸಿ, ಈ ಕೆಳಕಂಡಂತೆ ಕ್ರಮವಹಿಸಲು ತಿಳಿಸಿದೆ ಎಂದು ಸೂಚಿಸಿದೆ.
ಸರ್ಕಾರಿ ನೌಕರರಿಗೆ ರಜೆ: 'ನಮ್ಮಭಿಮಾನದ ಅಭಿನಂದನೆ' ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುತ್ತಿದ್ದು, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಸಹ ಅಭಿನಂದನೆ ಸಲ್ಲಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕಾರ್ಯಗಾರವನ್ನೂ ಸಹ ಆಯೋಜಿಸಿದ್ದು, ಬಿ. ಪಿ. ರಾವತ್, ರಾಷ್ಟ್ರೀಯ ಅಧ್ಯಕ್ಷರು, (NOPRUF) ನವದೆಹಲಿ ಹಾಗೂ ರಮೇಶ್ ಸಂಗಾ 'ಒ.ಪಿ.ಎಸ್. ಯೋಜನೆಯ ಜಾರಿಯ ಬಗ್ಗೆ' ಹಾಗೂ ದೇವರಾಜು, ಸರ್ಕಾರದ ಉ.ಕಾ.(ನಿ) ವಿಧಾನಸೌಧ ಇವರು 'ಪಿ. ಎಸ್. ಟಿ ಶಿಕ್ಷಕರ C&R ನಿಯಮಗಳ ತಿದ್ದುಪಡಿ' ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸುವ ಅಧಿಕಾರಿ/ ನೌಕರರಿಗೆ ದಿನಾಂಕ 17-08-2024 ರಂದು ಒಂದು ದಿನದ ವಿಶೇಷ ಸಾಂದರ್ಭಿಕ ರಜೆಯನ್ನು ಸರ್ಕಾರ ಮಂಜೂರು ಮಾಡಿ ಆದೇಶ ಹೊರಡಿಸಲಿದೆ. ಹಾಜರಾತಿ ಪ್ರಮಾಣ ಪತ್ರವನ್ನು ಕಾರ್ಯಕ್ರಮ ಸ್ಥಳದಲ್ಲೇ ಭಾಗವಹಿಸಿದ ನೌಕರರಿಗೆ ಮಾತ್ರ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ರಾಜ್ಯ ಸಂಘದಿಂದ ನೀಡಿರುವ ಪೋಸ್ಟರ್‌ಗಳನ್ನು ಎಲ್ಲಾ ಸರ್ಕಾರಿ ಕಛೇರಿ/ ಸಂಸ್ಥೆಗಳಲ್ಲಿ ಅಂಟಿಸುವ ಮೂಲಕ ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ನೀಡುವುದು. ಕಾರ್ಯಕ್ರಮದ ಬಗ್ಗೆ ಜಿಲ್ಲೆ, ತಾಲ್ಲೂಕು ಮತ್ತು ಯೋಜನಾ ಶಾಖೆಗಳು ಪತ್ರಿಕಾ ಗೋಷ್ಠಿಯನ್ನು ಏರ್ಪಡಿಸಿ ಪತ್ರಿಕಾ ಹೇಳಿಕೆಯನ್ನು ನೀಡಿ ಜಿಲ್ಲಾ, ಸ್ಥಳೀಯ ಪತ್ರಿಕೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡುವುದು. ರಾಜ್ಯ ಸಂಘದಿಂದ ನೀಡಲಾಗಿರುವ ಇಮೇಜ್ ಅನ್ನು ಎಲ್ಲರೂ ತಮ್ಮ ಭಾವಚಿತ್ರ ಸಮೇತ ಮೊಬೈಲ್ ಡಿಪಿಯಲ್ಲಿ ಹಾಕಿಕೊಳ್ಳುವುದು ಎಂದು ಸೂಚಿಸಲಾಗಿದೆ.
ಶಾಖೆಗಳ ಅಧ್ಯಕ್ಷರು ಪ್ರತ್ಯೇಕವಾಗಿ ವಾಟ್ಸ್‌ಪ್ ಗ್ರೂಪ್ ರಚಿಸಿ ಸಮಾರಂಭದಲ್ಲಿ ಭಾಗವಹಿಸುವ ನೌಕರರ ಮಾಹಿತಿಯನ್ನು ಸಂಗ್ರಹಿಸಿ ತಮ್ಮ ಶಾಖೆಯಿಂದ ಭಾಗವಹಿಸಲಿರುವ ಒಟ್ಟು ನೌಕರರ ಸಂಖ್ಯೆಯನ್ನು ರಾಜ್ಯ ಸಂಘಕ್ಕೆ ಜಿಲ್ಲಾಧ್ಯಕ್ಷರ ಮೂಲಕ ದಿನಾಂಕ 15-08-2024ರೊಳಗೆ ತಿಳಿಸುವುದು. ಕಾರ್ಯಕ್ರಮಕ್ಕೆ ನೌಕರರನ್ನು ಕರೆತರಲು ತಾಲ್ಲೂಕು, ಜಿಲ್ಲಾ, ಶಾಖೆಗಳು ಸೂಕ್ತ ಸಾರಿಗೆ ವ್ಯವಸ್ಥೆ ಮಾಡುವುದು ಹಾಗೂ ಇದಕ್ಕೆ ತಗಲುವ ವೆಚ್ಚವನ್ನು ರಾಜ್ಯ ಸಂಘ ಭರಿಸಲಿದ್ದು, ಈ ಸಂಬಂಧ ಅಗತ್ಯ ಮಾಹಿತಿ, ದಾಖಲೆಗಳನ್ನು ರಾಜ್ಯ ಸಂಘಕ್ಕೆ ಸಲ್ಲಿಸುವುದು.
ಕಾರ್ಯಕ್ರಮಕ್ಕೆ ಬರುವ ಎಲ್ಲಾ ವಾಹನಗಳ ಮೇಲೆ ಕಾರ್ಯಕ್ರಮದ ಬ್ಯಾನರ್ ಅಳವಡಿಸುವುದು. ದಿನಾಂಕ 17-08-2024ರ ಬೆಳಗ್ಗೆ 10 ಗಂಟೆಯೊಳಗೆ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಿರುವುದು. ಅಂದು ಬೆಳಗ್ಗೆ ಲಘು-ಉಪಾಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ತ್ರಿಪುರವಾಸಿನಿ ಆವರಣದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ತಿಳಿಸಿದೆ.
ಏಕೆ ಈ ಸಮಾವೇಶ?: ಕರ್ನಾಟಕದ ಸರ್ಕಾರಿ ನೌಕರರು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸುವಂತೆ. ಸರ್ಕಾರವನ್ನು ಒತ್ತಾಯಿಸುತ್ತಿದ್ದರು. ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಿತ್ತು. ವೇತನ ಆಯೋಗದ ವರದಿ ಜಾರಿ ಬಳಿಕ ಆಗಸ್ಟ್‌ನಿಂದಲೇ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿಯಲ್ಲಿ ಏರಿಕೆಯಾಗಿದೆ.
ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ 'ನಮ್ಮಭಿಮಾನದ ಅಭಿನಂದನಾ ಸಮಾರಂಭ' ಆಯೋಜನೆ ಮಾಡಿದೆ.
ಸರ್ಕಾರಿ ನೌಕರರು ಈ ಸಮಾವೇಶದಲ್ಲಿ ಹಾಜರಾಗಲು ಅನುಕೂಲವಾಗುಂತೆ ಸರ್ಕಾರ ಷರತ್ತು ಬದ್ಧ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುತ್ತದೆ. ರಜೆ ಪಡೆದ ನೌಕರರು ಹಾಜರಾತಿ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು ಎಂದು ಷರತ್ತು ವಿಧಿಸುವ ಸಾಧ್ಯತೆ ಇದೆ. ರಜೆ ಬಗ್ಗೆ ಅಧಿಕೃತ ಆದೇಶ ಇನ್ನೂ ಪ್ರಕಟವಾಗಬೇಕಿದೆ.












Click it and Unblock the Notifications