Government Employee: ಸರ್ಕಾರಿ ನೌಕರರ ವಿರುದ್ಧ ದೂರು, ನೌಕರರಿಗೆ ಎರಡು ಅವಕಾಶಗಳು
ಬೆಂಗಳೂರು, ಅಕ್ಟೋಬರ್ 12: ಕರ್ನಾಟಕದ ಸರ್ಕಾರಿ ನೌಕರರ ವಿರುದ್ಧ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಸಲ್ಲಿಕೆಯಾಗುವ ದೂರುಗಳನ್ನು ಇತ್ಯರ್ಥಪಡಿಸಲು ಕಾಲಮಿತಿ ನಿಗದಿಗೊಳಿಸಲಾಗಿದೆ. ಅಲ್ಲದೇ ಸರ್ಕಾರಿ ಅಧಿಕಾರಿ/ ನೌಕರರಿಗೆ ಕಾರಣ ಕೇಳುವ ನೋಟಿಸ್ ನೀಡಿದಾಗ ಅದಕ್ಕೆ ಹೇಗೆ ಉತ್ತರ ನೀಡಬೇಕು?, ಉತ್ತರ ನೀಡಲು ಎರಡನೇ ಅವಕಾಶ ನೀಡಬೇಕೆ? ಎಂಬ ಕುರಿತು ಸಹ ನಿಯಮವಿದೆ, ಅವುಗಳ ಮಾಹಿತಿ ಇಲ್ಲಿದೆ.
ಕಾರಣ ಕೇಳುವ ನೋಟಿಸ್ ಜಾರಿ ಮಾಡುವುದು. ಸರ್ಕಾರಿ ನೌಕರನ ವಿರುದ್ಧ ದೂರು ಸಲ್ಲಿಕೆಯಾದಲ್ಲಿ ಅದನ್ನು ಇತ್ಯರ್ಥಪಡಿಸುವ 4ನೇ ಹಂತ ನೋಟಿಸ್ ನೀಡುವುದು. ಯಾವುದೇ ದೂರು ಬಂದಾಗ ಸಕ್ಷಮ ಪ್ರಾಧಿಕಾರಿಗಳು ಮಾನದಂಡಗಳನ್ವಯ ಕಾರಣ ಕೇಳುವ ನೋಟಿಸ್ ನೀಡುವಾಗ ಕೆಲವು ಅಂಶಗಳನ್ನು ಪಾಲಿಸಬೇಕು.

* ದೂರು ಯಾವ ಮೂಲದಿಂದ (ಲಿಖಿತ/ ಪತ್ರಿಕಾ ಪ್ರಕಟಣೆ/ ವಾಟ್ಸಪ್/ ಇ-ಮೇಲ್/ ದೃಶ್ಯ ಮಾಧ್ಯಮ) ಬಂದಿದೆ? ಎಂಬುದನ್ನು ಕಾರಣ ಕೇಳುವ ನೋಟಿಸ್‌ನಲ್ಲಿ ನಮೂದಿಸುವುದು.
* ಕಾರಣ ಕೇಳುವ ನೋಟಿಸ್‌ನಲ್ಲಿ ಉತ್ತರಿಸಲು ಕಡ್ಡಾಯವಾಗಿ ಎರಡು ವಾರ ಕಾಲಾವಕಾಶ ನೀಡತಕ್ಕದ್ದು, ತುರ್ತು ಅಥವಾ ಸೂಕ್ಷ್ಮ ವಿಷಯಗಳ ಕುರಿತು ದೂರುಗಳಿದ್ದಲ್ಲಿ, ವಿಷಯದ ಸೂಕ್ಷ್ಮತೆಯ ಅನುಗುಣವಾಗಿ ಶಿಸ್ತು ಪ್ರಾಧಿಕಾರಿಗಳ, ವಿವೇಚನೆಯಂತೆ ಎರಡು ವಾರಗಳಿಗಿಂತ ಕಡಿಮೆ ಕಾಲಾವಕಾಶ ನೀಡತಕ್ಕದ್ದು.
* ದೂರು ಒಬ್ಬರಿಗಿಂತ ಹೆಚ್ಚು ಅಧಿಕಾರಿ/ ನೌಕರರ ಮೇಲೆ ಇದ್ದಲ್ಲಿ ಪ್ರತ್ಯೇಕವಾದ ಕಾರಣ ಕೇಳುವ ನೋಟಿಸ್ ನೀಡತಕ್ಕದ್ದು, ಯಾವುದೇ ಕಾರಣಕ್ಕಾಗಿಯೂ ಎಲ್ಲರನ್ನು ಸೇರಿಸಿ ಒಂದೇ ಕಾರಣ ಕೇಳುವ ನೋಟಿಸ್ ನೀಡತಕ್ಕದ್ದಲ್ಲ. ಈ ಕಾರಣ ಕೇಳುವ ನೋಟಿಸ್ ಅನ್ನು ವಾಟ್ಸಪ್ ಗ್ರೂಪ್‌ಗಳಲ್ಲಿ ಹಂಚಿಕೊಳ್ಳತಕ್ಕದ್ದಲ್ಲ.
* ಸಂಬಂಧಿಸಿದವರಿಗೆ ವೈಯುಕ್ತಿಕವಾಗಿ ವಾಟ್ಸಪ್/ ಇ-ಮೇಲ್/ ದೂರವಾಣಿ ಕರೆ ಮಾಡುವುದರ ಮೂಲಕ ಕಾರಣ ಕೇಳುವ ನೋಟಿಸ್ ಅನ್ನು ಜಾರಿ ಮಾಡಬಹುದಾಗಿದೆ.
* ಸಕ್ಷಮ ಪ್ರಾಧಿಕಾರಿಗಳು ಸ್ವಯಂ ಗಮನಿಸಿದ ತುರ್ತು ಅಥವಾ ಸೂಕ್ಷ್ಮ ವಿಷಯಗಳಿದ್ದಲ್ಲಿ ಲೋಪವೆಸಗಿರುವ ಅಧಿಕಾರಿ/ ನೌಕರನಿಗೆ ಕಾರಣ ಕೇಳುವ ನೋಟಿಸ್ ನೀಡಿ, ಉತ್ತರ ಪಡೆಯುವವರೆಗೆ ಶಿಸ್ತುಕ್ರಮ ಜರುಗಿಸಲು ಕಾಯಬೇಕಿಲ್ಲ.
* ಸಾರ್ವಜನಿಕ ಅಥವಾ ಖಾಸಗಿ ವ್ಯಕ್ತಿಗಳು ದೂರು ನೀಡಿದ ಪ್ರಕರಣಗಳಲ್ಲಿ, ಸಂಬಂಧಿಸಿದವರಿಗೆ ನೀಡಿದ ಕಾರಣ ಕೇಳುವ ನೋಟಿಸ್ ಅಥವಾ ದೂರುದಾರರಿಗೆ ಯಾವುದೇ ಹಂತದ ವಿಚಾರಣೆ ನಡೆಸುತ್ತಿರುವ ಪತ್ರ ವ್ಯವಹಾರದ ಪತ್ರದ ಪ್ರತಿಯೋರ್ವರಿಗೂ ಒಂದು ಪ್ರತಿಯನ್ನು ನೀಡತಕ್ಕದ್ದು.
* ಮೇಲಾಧಿಕಾರಿಗಳು ವಾಟ್ಸಪ್ ಅಥವಾ ಲಿಖಿತ ರೂಪದಲ್ಲಿ ದೂರಿನ ಬಗ್ಗೆ ಸಕ್ಷಮ ಪ್ರಾಧಿಕಾರಿಗಳಿಗೆ ಕಳುಹಿಸಿದಾಗ, ಸಕ್ಷಮ ಪ್ರಾಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಒಂದು ಪ್ರತಿಯನ್ನು ಯಾವ ಮೇಲಾಧಿಕಾರಿಗಳು ಕಳುಹಿಸಿರುತ್ತಾರೆಯೋ, ಅವರಿಗೆ ಕಳುಹಿಸತಕ್ಕದ್ದು.
ದೂರುಗಳ ಇತ್ಯರ್ಥ ಹಂತ-5: ಉತ್ತರ ಸಿಗದೇ ಇದ್ದ ಪಕ್ಷದಲ್ಲಿ, ಎರಡನೇ ಅವಕಾಶ ನೀಡತಕ್ಕದ್ದು. ಕಾರಣ ಕೇಳುವ ನೋಟಿಸ್ ಪಡೆದಂತಹ ಅಧಿಕಾರಿ/ ನೌಕರರುಗಳಿಂದ ಮೊದಲನೇ ನೋಟಿಸ್‌ಗೆ ಲಿಖಿತ ಉತ್ತರ ಸಿಗದೇ ಇದ್ದ ಪಕ್ಷದಲ್ಲಿ, ಅಂತಹ ಅಧಿಕಾರಿ/ ನೌಕರರಿಗೆ ಎರಡನೇ ಅವಕಾಶ ನೀಡತಕ್ಕದ್ದು.
* ಕಾರಣ ಕೇಳುವ ನೋಟಿಸ್‌ಗೆ ಉತ್ತರಿಸಲು ಎರಡು ವಾರ ಕಾಲಾವಕಾಶ ನೀಡಿದ್ದಾಗಿಯೂ ಸಹ ನಿಗದಿತ ಅವಧಿಯಲ್ಲಿ ಲಿಖಿತ ಉತ್ತರ ಸಲ್ಲಿಸದಿರುವ ಅಧಿಕಾರಿ/ ನೌಕರರಿಗೆ ಎರಡನೇ ಕಾರಣ ಕೇಳುವ ನೋಟಿಸ್ ನೀಡತಕ್ಕದ್ದು.
* ಎರಡನೇ ಕಾರಣ ಕೇಳುವ ನೋಟಿಸಿಗೆ ಸಂಬಂಧಿಸಿದಂತೆ, ಲಿಖಿತ ಉತ್ತರ ನೀಡಲು ಸಂಬಂಧಿಸಿದ ಅಧಿಕಾರಿ/ ನೌಕರರಿಗೆ ಪುನಃ ಎರಡು ವಾರಗಳ ಕಾಲಾವಕಾಶ ನೀಡತಕ್ಕದ್ದು. ತುರ್ತು ಅಥವಾ ಸೂಕ್ಷ್ಮ ವಿಷಯಗಳ ಕುರಿತು ದೂರುಗಳಿದ್ದಲ್ಲಿ ವಿಷಯದ ಸೂಕ್ಷ್ಮತೆಯ ಅನುಗುಣವಾಗಿ ಶಿಸ್ತು ಪ್ರಾಧಿಕಾರಿಗಳ, ವಿವೇಚನೆಯಂತೆ ಎರಡು ವಾರಗಳಿಗಿಂತ ಕಡಿಮೆ ಕಾಲಾವಕಾಶ ನೀಡತಕ್ಕದ್ದು.












Click it and Unblock the Notifications