Government employees; ನಿಯೋಜನೆ ಕುರಿತು ಹೊಸ ಸುತ್ತೋಲೆ
ಬೆಂಗಳೂರು, ಸೆಪ್ಟೆಂಬರ್ 13; ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ನಿಯೋಜನೆಗೆ ಸಂಬಂಧಿಸಿದಂತೆ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಈ ಸೂಚನೆಗಳನ್ನು ಉಲ್ಲಂಘನೆ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ವೀರಭದ್ರ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1) ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರಿ ನೌಕರರ ನಿಯೋಜನೆಗೆ ಸಾಮಾನ್ಯ ಸೂಚನೆಗಳು ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.

ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 16(a)(ii)ರಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿ ಸಮಾನಾಂತರ ಹುದ್ದೆಗೆ ನಿಯೋಜನೆ ಮೇಲೆ ತರಳುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 50(3)ರಲ್ಲಿ ಸರ್ಕಾರದ ವಿಶೇಷ ಆದೇಶಗಳಿರದ ಹೊರತು ಸಾಮಾನ್ಯವಾಗಿ ನಿಯೋಜನೆಯ ಅವಧಿಯನ್ನು 5 ವರ್ಷಗಳಿಗಿಂತ ಹೆಚ್ಚಿಗೆ ವಿಸ್ತರಿಸದಿರುವಂತೆ ಸೂಚಿಸಲಾಗಿದೆ ಎಂದು ಹೇಳಿದೆ.
ಸರ್ಕಾರಿ ನೌಕರರ ವರ್ಗಾವಣೆಗಳ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾದ ಸರ್ಕಾರಿ ಆದೇಶ ದಿನಾಂಕ 7/06/2013ರ ಕಂಡಿಕೆ 6(ಆ) ರಲ್ಲಿ ಯಾವುದೇ ಒಂದು ಹುದ್ದೆಗೆ ಒಂದು ಸಂದರ್ಭದಲ್ಲಿ ಮಾಡುವ ನಿಯೋಜನೆಯ ಗರಿಷ್ಠ ಅವಧಿಯು 5 ವರ್ಷ ಎಂದು ಸ್ಪಷ್ಟಪಡಿಸಲಾಗಿರುತ್ತದೆ.
ಹಿಂದಿನ ನಿಯೋಜನೆಯ ನಂತರ ಮಾತೃ ಇಲಾಖೆಯಲ್ಲಿ ಎರಡು ವರ್ಷಗಳ ಚಾತುರ್ಮಾಸ್ಯ ಅವಧಿಯನ್ನು (cooling-off period) ಮುಗಿಸಬೇಕಾಗುತ್ತದೆ ಎಂಬ ಬಗ್ಗೆಯೂ ಸಹ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಯೋಜನೆಗೆ ಸಂಬಂಧಿಸಿದಂತೆ ಈ ಸೂಚನೆಗಳನ್ನು ನೀಡಲಾಗಿದೆ ಎಂದು ವಿವರಿಸಲಾಗಿದೆ.
ಸೂಚನೆಗಳು
* ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಬೇರೆ ಇಲಾಖೆಯಿಂದ ನಿಯೋಜನಗೆ ಅವಕಾಶ ಕಲ್ಪಿಸದೇ ಇರುವ ಹುದ್ದೆಗಳಿಗೆ ನಿಯೋಜನೆ ಮಾಡುವುದನ್ನು ನಿರ್ಬಂಧಿಸಿದೆ.
* ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯೊಂದಿಗೆ ನಿಯೋಜನೆಯ ಮೇಲೆ ಮುಂದುವರೆದಿರುವ ಅಧಿಕಾರಿ/ ನೌಕರರು ಒಂದು ವೇಳೆ ಗರಿಷ್ಠ 5 ವರ್ಷಗಳ ನಿಯೋಜನಾ ಅವಧಿಯನ್ನು ಪೂರ್ಣಗೊಳಿಸಿದ್ದಲ್ಲಿ ಹಾಗೂ ಸರ್ಕಾರದ ವಿಶೇಷ ಆದೇಶಗಳಿರದ ಸದರಿ ನಿಯೋಜನೆಯಲ್ಲಿ ಮುಂದುವರೆದಿದ್ದಲ್ಲಿ ಅಂತಹವರನ್ನು ಮಾತ್ರ ಇಲಾಖೆಗೆ ಹಿಂತಿರುಗಿಸಲು ಕೂಡಲೇ ಕ್ರಮವಹಿಸುವುದು.
* ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಯೋಜನೆಗೆ ಅವಕಾಶವಿರುವ ಹುದ್ದೆಗಳಿಗೆ ಮಾತ್ರ ಆ ಹುದ್ದೆಗೆ ಸಮಾನ ದರ್ಜೆ/ ಹುದ್ದೆ ಹೊಂದಿರುವ ಅಧಿಕಾರಿ/ ನೌಕರರನ್ನು ಅನಿವಾರ್ಯ ಪ್ರಸಂಗಗಳಲ್ಲಿ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ನಿಯಮಾನುಸಾರ ನಿಯೋಜನೆಗೊಳಿಸುವುದು.
* ಯಾವುದೇ ಇಲಾಖೆಯಲ್ಲಿಯಾದರೂ ಕೆಳದರ್ಜೆಯ ಅಧಿಕಾರಿಗಳನ್ನು ಮೇಲ್ದರ್ಜೆಯ ಹುದ್ದೆಗೆ (higher rank post) ಸ್ವಂತ ವೇತನ ಶ್ರೇಣಿಯ ಆಧಾರದ ಮೇಲೆ ನೇಮಕ ಮಾಡುವುದನ್ನು/ ನಿಯೋಜನೆಗೊಳಿಸುವುದನ್ನು ನಿರ್ಬಂಧಿಸಿದೆ.
ಈ ಮೇಲಿನ ಸೂಚನೆಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ಎಚ್ಚರಿಕೆ ನೀಡಲಾಗಿದೆ.












Click it and Unblock the Notifications