Government Employee: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ, ಸ್ಪರ್ಧಿಸಲು ಅರ್ಹತೆಗಳು
ಬೆಂಗಳೂರು, ಸೆಪ್ಟೆಂಬರ್ 16: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ಚುನಾವಣೆ ದಿನಾಂಕ ಘೋಷಣೆಯಾಗಿದೆ. ತಾಲೂಕು, ಜಿಲ್ಲೆ, ಬೆಂಗಳೂರು ನಗರ ಮತ್ತು ರಾಜ್ಯ ಸಂಘದ ಅಧ್ಯಕ್ಷರ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ಹೊಂದಿರಬೇಕಾದ ಅರ್ಹತೆಯ ಕುರಿತು ರಾಜ್ಯ ಸರ್ಕಾರಿ ನೌಕರರಿಗೆ ಮಾಹಿತಿಯನ್ನು ನೀಡಲಾಗಿದೆ.
ಎ. ಹನುಮನರಸಯ್ಯ, ರಾಜ್ಯ ಚುನಾವಣಾಧಿಕಾರಿ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ಅಧೀನ ಶಾಖೆಗಳ ಚುನಾವಣಾ ಪ್ರಕ್ರಿಯೆಗಳನ್ನು ಕೈಗೊಳ್ಳುವ ಬಗ್ಗೆ ಎಂದು ಅಧಿಸೂಚನೆ ಪ್ರಕಟಿಸಿದ್ದಾರೆ. ವಿವಿಧ ಶಾಖೆಗಳ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ಎಲ್ಲಾ ಹಂತದ ಚುನಾವಣೆ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದು, ಅಧಿಸೂಚನೆ ಹಾಗೂ ವೇಳಾಪಟ್ಟಿಯಂತೆ ತಮ್ಮ ಶಾಖೆಗಳ ಎಲ್ಲಾ ಹಂತದ ಚುನಾವಣೆ ಪ್ರಕ್ರಿಯೆಗಳು ಕೈಗೊಳ್ಳಲು ತಿಳಿಸಿದೆ. ಹಾಗೂ ಚುನಾವಣೆಯ ಸಂಬಂಧ ಅಗತ್ಯ ಮಾಹಿತಿಯನ್ನು ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಸಹ ತಮಗೆ ತಿಳಿಸಿದೆ ಎಂದು ಜಿಲ್ಲಾ/ ತಾಲೂಕು/ ಯೋಜನಾ ಶಾಖೆಗಳ ಚುನಾವಣಾಧಿಕಾರಿಗಳಿಗೆ ಮತ್ತು ಜಿಲ್ಲಾ/ ತಾಲೂಕು/ ಯೋಜನಾ ಶಾಖೆಗಳ ಅಧ್ಯಕ್ಷರು/ ಕಾರ್ಯದರ್ಶಿಗಳಿಗೆ ಪತ್ರದಲ್ಲಿ ತಿಳಿಸಲಾಗಿದೆ.
ಚುನಾವಣಾ ದಿನಾಂಕಗಳು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಚುನಾವಣಾಧಿಕಾರಿಯಾದ ಎ. ಹನುಮನರಸಯ್ಯ, ಉಪಕಾರ್ಯದರ್ಶಿ (ನಿ) ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ತಾಲ್ಲೂಕು ಶಾಖೆ, ಯೋಜನಾ ಶಾಖೆ, ಜಿಲ್ಲಾ ಶಾಖೆಗಳ ನಿರ್ದೇಶಕರು & ಪದಾಧಿಕಾರಿಗಳ ಚುನಾವಣೆ ಹಾಗೂ ಬೆಂಗಳೂರು ನಗರ ಜಿಲ್ಲೆಯ ರಾಜ್ಯಪರಿಷತ್ ಸದಸ್ಯರ & ರಾಜ್ಯ ಸಂಘದ ಪದಾಧಿಕಾರಿಗಳ ಚುನಾವಣೆಗಳನ್ನು ಸಂಘದ ಶಾಖೆಗಳು ನಿಗದಿಪಡಿಸುವ ಸ್ಥಳದಲ್ಲಿ ಈ ದಿನಾಂಕಗಳಂತೆ ಚುನಾವಣೆಗಳನ್ನು ನಡೆಸಲು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿರುತ್ತೇನೆ ಎಂದು ಹೇಳಿದ್ದಾರೆ.
* ತಾಲ್ಲೂಕು ಶಾಖೆ ಹಾಗೂ ಯೋಜನಾ ಶಾಖೆಗಳ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನದ ಚುನಾವಣೆಗಳು. ದಿನಾಂಕ 09-10-2024 ರಿಂದ ದಿನಾಂಕ 28-10-2024ರವರೆಗೆ.
* ತಾಲ್ಲೂಕು ಶಾಖೆಗಳ ತಾಲ್ಲೂಕು ಅಧ್ಯಕ್ಷರು, ಯೋಜನಾ ಶಾಖೆಗಳ ಅಧ್ಯಕ್ಷರು ಹಾಗೂ ತಾಲ್ಲೂಕು-ಯೋಜನಾ ಶಾಖೆಗಳ ಖಜಾಂಚಿ ಹಾಗೂ ರಾಜ್ಯಪರಿಷತ್ ಸದಸ್ಯರ ಚುನಾವಣೆಗಳು. ದಿನಾಂಕ 30-10-2024 ರಿಂದ ದಿನಾಂಕ 16-11-2024ರವರೆಗೆ.
* ಜಿಲ್ಲಾ ಶಾಖೆಗಳ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಚುನಾವಣೆಗಳು. ದಿನಾಂಕ 28-10-2024 ರಿಂದ ದಿನಾಂಕ 16-11-2024ರವರೆಗೆ.
* ಜಿಲ್ಲಾ ಶಾಖೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ ಮತ್ತು ರಾಜ್ಯಪರಿಷತ್ ಸದಸ್ಯರ ಚುನಾವಣೆಗಳು. ದಿನಾಂಕ 19-11-2024 ರಿಂದ ದಿನಾಂಕ 04-12-2024ರವರೆಗೆ.
* ಬೆಂಗಳೂರು ನಗರ ಜಿಲ್ಲೆಯ ರಾಜ್ಯಪರಿಷತ್ ಸದಸ್ಯರ ಮತಕ್ಷೇತ್ರವಾರು ಚುನಾವಣೆಗಳು. ದಿನಾಂಕ 17-09-2024 ರಿಂದ ದಿನಾಂಕ 04-12-2024 ರವರೆಗೆ.
* ರಾಜ್ಯ ಸಂಘದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಖಜಾಂಚಿ ಸ್ಥಾನದ ಚುನಾವಣೆಗಳು. ದಿನಾಂಕ 09-12-2024 ರಿಂದ ದಿನಾಂಕ 27-12-2024ರವರೆಗೆ ನಡೆಯಬೇಕು ಎಂದು ದಿನಾಂಕ ನಿಗದಿ ಮಾಡಲಾಗಿದೆ.
ಸರ್ಕಾರಿ ನೌಕರರಿಗೆ ಸೂಚನೆಗಳು
* ರಾಜ್ಯ ಚುನಾವಣಾಧಿಕಾರಿಗಳು ಹೊರಡಿಸಿರುವ ಚುನಾವಣಾ ಅಧಿಸೂಚನೆ ಹಾಗೂ ನಿಗದಿಪಡಿಸಿರುವ ದಿನಾಂಕಗಳಂದು ಆಯಾ ಜಿಲ್ಲಾ/ ತಾಲ್ಲೂಕು/ ಯೋಜನಾ ಶಾಖೆಗಳ ಚುನಾವಣಾಧಿಕಾರಿಗಳು ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸುವುದು ಹಾಗೂ ಈ ಬಗ್ಗೆ ರಾಜ್ಯ ಚುನಾವಣಾಧಿಕಾರಿಗಳ ಕಛೇರಿಗೆ ಮಾಹಿತಿಯನ್ನು ಸಲ್ಲಿಸುವುದು.
* ಸಂಘದ ಬೈಲಾ ನಿಯಮದಂತೆ 5 ವರ್ಷಗಳ ಸದಸ್ಯತ್ವವನ್ನು ಹೊಂದಿರುವ ಎಲ್ಲಾ ರಾಜ್ಯ ಸರ್ಕಾರಿ ನೌಕರರು 2024-29ರ ಸಂಘದ ಚುನಾವಣೆಗಳಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ.
* ನಾಮಪತ್ರಗಳನ್ನು ಆಯಾ ಶಾಖೆಗಳ ಚುನಾವಣಾ ಕಚೇರಿಯಲ್ಲಿ ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಪಡೆಯಬಹುದಾಗಿದೆ.
* ಚುನಾವಣಾಧಿಕಾರಿಗಳ ಕಛೇರಿಯು ನಾಮಪತ್ರ ಸಲ್ಲಿಸುವ ಹಾಗೂ ನಾಮಪತ್ರ ಹಿಂಪಡೆಯುವ ಅವಧಿಯಲ್ಲಿನ ಸಾರ್ವತ್ರಿಕ ರಜಾ ದಿನಗಳಂದು ಕಾರ್ಯನಿರ್ವಹಿಸಲಿದೆ.
* ಅಭ್ಯರ್ಥಿಗಳು ಪ್ರತಿ ನಾಮಪತ್ರವನ್ನು ಪಡೆಯಲು ಅರ್ಜಿ ಶುಲ್ಕ ರೂ 100ಗಳನ್ನು ಚುನಾವಣಾಧಿಕಾರಿಗಳ ಕಛೇರಿಗೆ ಪಾವತಿಸುವುದು.
* ರಾಜ್ಯ-ಜಿಲ್ಲೆ-ತಾಲ್ಲೂಕು-ಯೋಜನಾ ಶಾಖೆಗಳ ಎಲ್ಲ ಹಂತದ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಚುನಾವಣಾ ಠೇವಣಿ ಮೊತ್ತ ರೂ 2000 ಗಳನ್ನು ಚುನಾವಣಾಧಿಕಾರಿಗಳ ಕಛೇರಿಗೆ ಪಾವತಿಸಿ ರಶೀದಿ ಪಡೆದು, ರಶೀದಿ ಸಂಖ್ಯೆಯನ್ನು ನಾಮಪತ್ರದಲ್ಲಿ ನಮೂದಿಸಿ ಅಭ್ಯರ್ಥಿಗಳು ನಾಮಪತ್ರವನ್ನು ಖುದ್ದು ಹಾಜರಾಗಿ ಸಲ್ಲಿಸುವುದು.
* ಅಭ್ಯರ್ಥಿಯು ನಾಮಪತ್ರದೊಂದಿಗೆ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಕಳೆದ 5 ವರ್ಷಗಳ ಸದಸ್ಯತ್ವ ಶುಲ್ಕ ಪಾವತಿಸಿರುವ ಬಗ್ಗೆ ದಾಖಲೆಯ ಪ್ರತಿ ಅಥವಾ pay slip ಹಾಗೂ ಇಲಾಖಾ ಗುರುತಿನ ಚೀಟಿಯ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸುವುದು.
* ನಾಮಪತ್ರವನ್ನು ಪರಿಶೀಲಿಸುವ ಸಂಧರ್ಭದಲ್ಲಿ ಅಭ್ಯರ್ಥಿಗಳಿಗೆ ಮಾತ್ರ ಹಾಜರಿರಲು ಅವಕಾಶವಿರುತ್ತದೆ. ಅಭ್ಯರ್ಥಿಗಳ ನಾಮಪತ್ರದಲ್ಲಿ ಒಮ್ಮೆ ಸೂಚಕರು ಮತ್ತು ಅನುಮೋದಕರಾಗಿ ಸಹಿ ಮಾಡಿದವರು ಬೇರೆ ಅಭ್ಯರ್ಥಿಗಳಿಗೆ ಸೂಚಕರಾಗಿ ಮತ್ತು ಅನುಮೋದಕರಾಗಿ ಸಹಿ ಮಾಡುವಂತಿಲ್ಲ.
* ನಾಮಪತ್ರಗಳಿಗೆ ಸಹಿ ಮಾಡಿದ ಸೂಚಕರು ಮತ್ತು ಅನುಮೋದಕರು ಘೋಷಿತ ಸ್ಥಾನಗಳಿಗೆ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡುವಂತಿಲ್ಲ. ಮತದಾರರ ಪಟ್ಟಿಯಲ್ಲಿರುವ ಮತದಾರರು ಚುನಾವಣೆಯ ಮತದಾನದ ವೇಳೆ ಕಡ್ಡಾಯವಾಗಿ ಇಲಾಖಾ ಗುರುತಿನ ಚೀಟಿಯನ್ನು ಹಾಜರುಪಡಿಸುವುದು.












Click it and Unblock the Notifications