Government Employee: ಸರ್ಕಾರಿ ನೌಕರರಿಗೆ ಮಾಹಿತಿ, ESR ಅನುಷ್ಠಾನ
ಬೆಂಗಳೂರು, ಜೂನ್ 20: ಕರ್ನಾಟಕದ ಸರ್ಕಾರಿ ನೌಕರರಿಗೆ 'ವಿದ್ಯುನ್ಮಾನ ಸೇವಾ ವಹಿ' ಅನುಷ್ಠಾನದ ಕುರಿತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಜ್ಞಾಪನಾ ಪತ್ರದ ಮೂಲಕ ಮಾಹಿತಿ ನೀಡಿದೆ.
ಈ ಕುರಿತು ಡಿ. ಎಸ್. ಇ. ಆರ್. ಟಿ. ಬೆಂಗಳೂರು ನಿರ್ದೇಶಕರು ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಈ ಪತ್ರ ನೌಕರರ ಸೇವಾ ವಹಿಯನ್ನು Electronic Service Register (ESR)ನಲ್ಲಿ ಅನುಷ್ಠಾನಗೊಳಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ಯೋಜನಾ ನಿರ್ದೇಶಕರು, HRMS - 2.0 ಅವರ ಪತ್ರ ಸೇರಿದಂತೆ ಹಲವು ಆದೇಶಗಳನ್ನು ಉಲ್ಲೇಖ ಮಾಡಲಾಗಿದೆ.

ಜ್ಞಾಪನಾ ಪತ್ರದ ವಿವರ: ವಿಷಯ ಮತ್ತು ಉಲ್ಲೇಖಗಳಿಗೆ ಸಂಬಂಧಿಸಿದಂತೆ 2021-22ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಳ್ಳುವ ಎಲ್ಲಾ ನೌಕರರುಗಳ ಸೇವಾ ವಹಿಯನ್ನು ವಿದ್ಯುನ್ಮಾನ ಸೇವಾ ವಹಿ (Electronic Service Register (ESR) ನಲ್ಲಿಯೇ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಎಲ್ಲಾ ಸಕ್ಷಮ ಪ್ರಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿರುತ್ತದೆ ಎಂದು ಹೇಳಿದೆ.
ಎಲ್ಲಾ ಸಿಬ್ಬಂದಿಗಳ ಸೇವಾ ವಹಿಗಳನ್ನು ESRಗೆ ಬದಲಾಯಿಸಿ ಮುಂದಿನ ದಿನಗಳಲ್ಲಿ ESRನಲ್ಲಿಯೇ ಮುಂದುವರೆಸುವಂತೆ ತಿಳಿಸಲಾಗಿದೆ ಹಾಗೂ HRMS - 1. 0 ತಂತ್ರಾಂಶದ ಸೇವಾವಹಿ ಭಾಗದಲ್ಲಿ ನೌಕರರ ಮಾಹಿತಿಯೂ ಲಭ್ಯವಿದ್ದು ಸದರಿ ಮಾಹಿತಿಯನ್ನು HRMS - 2.0 ಭಾಗವಾಗಿರುವ ವಿದ್ಯುನ್ಮಾನ ಸೇವಾ ವಹಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಸದರಿ ಮಾಹಿತಿಯನ್ನು ವರ್ಗಾಯಿಸಿದ ನಂತರ ESR ನಲ್ಲಿ ಯಾವುದೇ ತಿದ್ದುಪಡಿ ಮಾಡುವ ಅವಕಾಶವಿಲ್ಲದಿರುವ ಕಾರಣ HRMS - 1. 0 ತಂತ್ರಾಂಶದಲ್ಲಿ ಲಭ್ಯವಿರುವ ಸರ್ಕಾರಿ ನೌಕರರುಗಳ ಸೇವಾ ವಹಿಯ ಪೂರ್ಣ ಮಾಹಿತಿಯನ್ನು ಪರಿಶೀಲಿಸಿ ಅವಶ್ಯಕವಿದ್ದಲ್ಲಿ ಸರಿಪಡಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದೆ.
ಈ ಕಛೇರಿಯ ಅಧೀನದಲ್ಲಿ ಬರುವ ಸಿ.ಟಿ.ಇ, ಡಯಟ್ ಮತ್ತು ಜಿ.ಟಿ.ಟಿ.ಐಗಳ ಪ್ರಾಂಶುಪಾಲರು, ಲೆಕ್ಕ ಅಧೀಕ್ಷಕರು ಹಾಗೂ HRMS ನಿರ್ವಹಿಸುವ ಕಾರ್ಯ ನಿರ್ವಾಹಕರಿಗೆ ತಮ್ಮ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 'ಸಿ' ಮತ್ತು 'ಡಿ' ವೃಂದದ ಸಿಬ್ಬಂದಿಗಳ ಸೇವಾ ಪುಸ್ತಕಗಳನ್ನು ESR ಗೆ ಪರಿವರ್ತನೆ ಮಾಡುವ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಜೂಮ್ ಮೂಲಕ ನಡೆದ ಸಭೆಯಲ್ಲಿ ದಿನಾಂಕ 13/05/2024 ರಂದು ಪೂರ್ಣ ಪ್ರಮಾಣದ ತರಬೇತಿಯನ್ನು ನೀಡಲಾಗಿರುತ್ತದೆ. ಆದಾಗ್ಯೂ ಸಹ ಭೌತಿಕ ಸೇವಾ ಪುಸ್ತಕಗಳನ್ನು ESR ಗೆ ಪರಿವರ್ತಿಸುವ ಕಾರ್ಯದಲ್ಲಿ ಯಾವುದೇ ಪ್ರಗತಿ ಕಂಡುಬಂದಿರುವುದಿಲ್ಲ ಎಂದು ಹೇಳಿದೆ.
ಮಾನ್ಯ ಯೋಜನಾ ನಿರ್ದೇಶಕರು, HRMS 2.0 ಅವರು ಪಗತಿ ಪರಿಶೀಲನಾ ಸಭೆಯಲ್ಲಿ 'ಸಿ' ಮತ್ತು 'ಡಿ' ದರ್ಜೆಯ ಎಲ್ಲ ನೌಕರರ ಭೌತಿಕ ಸೇವಾ ಪುಸ್ತಕಗಳನ್ನು ESR ತಂತ್ರಾಂಶಕ್ಕೆ ಪರಿವರ್ತನೆ ಕಾರ್ಯವನ್ನು ತುರ್ತಾಗಿ ಪೂರ್ಣಗೊಳಿಸಲು ಸೂಚನೆ ನೀಡಿರುತ್ತಾರೆ.
ಈ ಹಿನ್ನೆಲೆಯಲ್ಲಿ ತಮ್ಮ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 'ಸಿ' ಮತ್ತು 'ಡಿ' ಗುಂಪಿನ ನೌಕರರ ಭೌತಿಕ ಸೇವಾ ಪುಸ್ತಕಗಳನ್ನು ESR ಆಗಿ ಪರಿವರ್ತಿಸುವ ಕಾರ್ಯವನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ತಿಳಿಸಿದೆ.
ಈ ಬಗ್ಗೆ ಯಾವುದೇ ರೀತಿಯ ಸಮಸ್ಯೆಗಳುಂಟಾದಲ್ಲಿ ನೋಡಲ್ ಅಧಿಕಾರಿ, HRMS ವಿಭಾಗ, [email protected], tech2,[email protected] ಡಿ.ಎಸ್.ಇ.ಆರ್.ಟಿ. ವರಿಗೆ ಕಳುಹಿಸಿಕೊಡಲು ತಿಳಿಸಿದೆ. ಸಮಸ್ಯೆಗಳು ಕಂಡುಬಂದಲ್ಲಿ ಮಾಹಿತಿ ನೀಡಲು ಲಿಂಕ್ ಅನ್ನು ವಾಟ್ಸಪ್ ಮೂಲಕ ಈಗಾಗಲೇ ಕಳಿಸಲಾಗಿದೆ ಎಂದು ಹೇಳಿದೆ.












Click it and Unblock the Notifications