Karnataka 7th Pay Commission; ಮೇ 26ರಂದು ಮಹತ್ವದ ಸಭೆ
ಬೆಂಗಳೂರು, ಮೇ 23; ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು ರಾಜ್ಯ 7ನೇ ವೇತನ ಆಯೋಗ ರಚನೆ ಮಾಡಿದೆ. ಆಯೋಗ ಮೇ 26ರಂದು ಮಹತ್ವದ ಸಭೆಯನ್ನು ಕರೆದಿದೆ.
7ನೇ ರಾಜ್ಯ ವೇತನ ಆಯೋಗದ ಕಾರ್ಯದರ್ಶಿಯಾದ ಹೆಪ್ಸಿಬಾ ರಾಣಿ ಕೊರ್ಲಪಾಟಿ ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಪತ್ರವನ್ನು ಬರೆದಿದ್ದಾರೆ. ಇಲಾಖಾ ಮುಖ್ಯಸ್ಥರೊಂದಿಗೆ ಇಲಾಖೆಗಳ ಪ್ರತಿಕ್ರಿಯೆ/ ಬೇಡಿಕೆಗಳ ಕುರಿತು ಸಭೆ ಎಂಬ ವಿಷಯವನ್ನು ಪತ್ರ ಒಳಗೊಂಡಿದೆ.

ರಾಜ್ಯ 7ನೇ ವೇತನ ಆಯೋಗ ರಚನೆಯ ಆದೇಶ 19/11/2022, ಅಧಿಕೃತ ಜ್ಞಾಪನಾ ಸಂಖ್ಯೆ 17/1/2023 ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಪತ್ರ 10/2/2023 ಉಲ್ಲೇಖ ಮಾಡಿ ಈ ಪತ್ರವನ್ನು ಬರೆಯಲಾಗಿದೆ.
ಮೇ 26ರಂದು ಮಹತ್ವದ ಸಭೆ; ಪತ್ರದಲ್ಲಿ 7ನೇ ರಾಜ್ಯ ವೇತನ ಆಯೋಗದ ಕಾರ್ಯದರ್ಶಿಗಳು, ರಾಜ್ಯ ಸರ್ಕಾರವು ಸರ್ಕಾರಿ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡಲು 19/11/2022 ರಲ್ಲಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿರುವ ಬಗ್ಗೆ ನೆನಪಿಸಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.

ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾರ್ಹ ಅಂಶಗಳ ಕುರಿತು ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು, ಸಂಘ ಸಂಸ್ಥೆಗಳಿಂದ ಮುಕ್ತ ಸಲಹೆ, ಅನಿಸಿಕೆ ಅಲ್ಲದೇ ಇಲಾಖೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆ ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಜ್ಞಾಪನದಲ್ಲಿ ವಿವಿಧ ಪ್ರಶ್ನಾವಳಿಗಳನ್ನು ರಚಿಸಿ ಕರ್ನಾಟಕ ರಾಜ್ಯಪತ್ರವನ್ನು ದಿನಾಂಕ 17/01/2023 ರಂದು ಪ್ರಕಟಿಸಿರುತ್ತದೆ ಎಂದು ವಿವರಿಸಿದ್ದಾರೆ.
ಸದರಿ ಪ್ರಶ್ನಾವಳಿಗಳಿಗೆ ತಮ್ಮ ಸಂಘದ ವತಿಯಿಂದ ಪ್ರತಿಕ್ರಿಯೆಗಳು/ ಉತ್ತರಗಳು/ ಬೇಡಿಕೆಗಳು ಆಯೋಗದಲ್ಲಿ ಸ್ವೀಕೃತಗೊಂಡಿರುತ್ತದೆ. ಈ ಹಿನ್ನಲೆಯಲ್ಲಿ, ಆಯೋಗವು ತಮ್ಮ ಸಂಘದ ಬೇಡಿಕೆಗಳು/ ವಿನಂತಿಗಳು/ ಅಭಿಪ್ರಾಯಗಳ ಕುರಿತು ಚರ್ಚಿಸಲು ಇಚ್ಚಿಸುತ್ತದೆ. ಈ ಹಿನ್ನಲೆಯಲ್ಲಿ ದಿನಾಂಕ 26/05/2023 ರಂದು ಸಭೆಯನ್ನು ಕರೆಯಲಾಗಿದೆ.
ಈ ಸಭೆ ಸಭಾ ಕೊಠಡಿ, 7ನೇ ರಾಜ್ಯ ವೇತನ ಆಯೋಗ, 3ನೇ ಮಹಡಿ, ಹಳೆಯ ಕಲ್ಲು ಕಟ್ಟಡ, ಔಷಧ ನಿಯಂತ್ರಣ ಸಂಕೀರ್ಣ, ಅರಮನೆ ರಸ್ತೆ, ಬೆಂಗಳೂರು ಇಲ್ಲಿ ಮಧ್ಯಾಹ್ನ 12ಗಂಟೆಗೆ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ.
ಸದರಿ ಸಭೆಗೆ ತಮ್ಮ ಸಂಘದ ವತಿಯಿಂದ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುವ ಪ್ರಾತ್ಯಕ್ಷಿಕೆಯನ್ನು (PPT) ಪ್ರಸ್ತುತ ಪಡಿಸಬಹುದು ಎಂದು ತಿಳಿಸಲಾಗಿದೆ. ಪ್ರಶ್ನಾವಳಿಯ ಉತ್ತರಗಳು, ಬೇಡಿಕೆಗಳು ಮತ್ತು ಇತರೆ ವಿಷಯಗಳ ಸಂಕ್ಷಿಪ್ತ ಮಾಹಿತಿ. ಮಾಹಿತಿಯು ವಸ್ತುನಿಷ್ಟ ಹಾಗೂ ನಿರ್ದಿಷ್ಟವಾಗಿರಲಿ ಪ್ರಾತ್ಯಕ್ಷಿಕೆಯು 10 ಸೈಡ್‌ಗಳಿಗೆ ಸೀಮಿತಗೊಳಿಸುವುದು. ಮಾಹಿತಿಯು/ ಸ್ಲೈಡ್‌ಗಳು ಪುನರಾವರ್ತನೆಯಾಗದಿರಲಿ ಎಂದು ತಿಳಿಸಲಾಗಿದೆ.
ವೇತನ ಆಯೋಗದ ಅವಧಿ ವಿಸ್ತರಣೆ; ಕರ್ನಾಟಕ ಸರ್ಕಾರದ ಕಳೆದ ವಾರ ಹೊರಡಿಸಿದ್ದ ಆದೇಶದ ಅನ್ವಯ ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು ದಿನಾಂಕ 19/5/2023ರಿಂದ ಜಾರಿಗೆ ಬರುವಂತೆ 6 ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ. ಆದ್ದರಿಂದ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತಷ್ಟು ವಿಳಂಬವಾಗಲಿದೆ.
7ನೇ ವೇತನ ಆಯೋಗ ರಚನೆಗೊಂಡಾಗ ರಾಜ್ಯದ ಸರ್ಕಾರಿ ನೌಕರರು ಮಧ್ಯಂತರ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಮಾರ್ಚ್ 29ರಂದು ಕರ್ನಾಟಕ ವಿಧಾನಸಭೆ ಚುನಾವಣೆ 2023ರ ವೇಳಾಪಟ್ಟಿ ಘೋಷಣೆಯಾಯಿತು, ತಕ್ಷಣದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿತು. ಆದ್ದರಿಂದ ವರದಿ ತಯಾರು ಆಗಲಿಲ್ಲ.
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಮೇ 13ರಂದು ಪ್ರಕಟಗೊಂಡ ಬಳಿಕ ನೀತಿ ಸಂಹಿತೆ ವಾಪಸ್ ಪಡೆಯಲಾಯಿತು. 15ನೇ ಮೇ 2023ರ ಆದೇಶದಂತೆ ಕರ್ನಾಟಕ 7ನೇ ರಾಜ್ಯ ವೇತನ ಆಯೋಗವು ತನ್ನ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲು ಅನುಕೂಲವಾಗುವಂತೆ ಆಯೋಗದ ಕಾಲಾವಧಿಯನ್ನು ದಿನಾಂಕ 19/5/2023 ರಿಂದ 6 ತಿಂಗಳವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.












Click it and Unblock the Notifications