H3N2: ಸೋಮವಾರ ತಜ್ಞರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದ ಕೆ. ಸುಧಾಕರ್
ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಎಚ್3ಎನ್2 (H3N2) ಬಗ್ಗೆ ಗಮನ ಹರಿಸಲು ಆದೇಶ ನೀಡಿದೆ.
ಬೆಂಗಳೂರು, ಮಾರ್ಚ್ 05: ರಾಜ್ಯದಲ್ಲಿ ಇನ್‌ಫ್ಲುಯೆಂಜಾ ಎ ಸಬ್‌ಟೈಪ್ 'ಎಚ್3ಎನ್2' ಹರಡುವಿಕೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ತಡೆಗಟ್ಟುವ ಕ್ರಮಗಳ ಕುರಿತು ಚರ್ಚಿಸಲು ಮಾರ್ಚ್ 6 ರಂದು (ಸೋಮವಾರ) ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಭೆ ಕರೆಯಲಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.
"ಶನಿವಾರ, ಕೇಂದ್ರ ಆರೋಗ್ಯ ಸಚಿವಾಲಯವು ನಮಗೆ ಎಚ್3ಎನ್2 (H3N2) ಬಗ್ಗೆ ಗಮನ ಹರಿಸಲು ಆದೇಶ ನೀಡಿದೆ. ನಮ್ಮ ಆರೋಗ್ಯ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲು ನಾಳೆ ಸಭೆ ಕರೆಯಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು" ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸದ್ಯಕ್ಕೆ ಅಂತಹ ಪ್ರಕರಣಗಳು ವರದಿಯಾಗಿಲ್ಲ, ಆದರೆ ಪ್ರಾಥಮಿಕ ವರದಿಗಳ ಪ್ರಕಾರ ನಿರಂತರ ಕೆಮ್ಮು ರೋಗಲಕ್ಷಣಗಳಲ್ಲಿ ಒಂದಾಗಿದೆ. ಇಂತಹ ಪ್ರಕರಣಗಳು ಬಂದಾಗ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಯಾವ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ತಜ್ಞರೊಂದಿಗೆ ನಾಳಿನ ಸಭೆಯಲ್ಲಿ ಚರ್ಚಿಸಲಾಗುವುದು. ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು" ಎಂದಿದ್ದಾರೆ.
ದೇಶದ ಹಲವು ಪ್ರದೇಶಗಳಲ್ಲಿ ಕಳೆದ ಎರಡು ತಿಂಗಳಿಂದ ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಇದರಲ್ಲಿ ಬಹುತೇಕ ಮಂದಿ ಕೆಮ್ಮು, ಶೀತಜ್ವರ (ಇನ್‌ಫ್ಲುಯೆಂಜಾ)ದಿಂದ ಬಳಲುತ್ತಿರುವುದು ಕಂಡು ಬಂದಿವೆ. 2 ವರ್ಷಗಳ ಕೋವಿಡ್ ಕಾಲದ ಬಳಿಕ ಜ್ವರ, ಕೆಮ್ಮಿನಂತಹ ಅನಾರೋಗ್ಯಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ನಿರಂತರ ಕೆಮ್ಮು ಮತ್ತು ಶೀತಜ್ವರಕ್ಕೆ ಇನ್‌ಫ್ಲುಯೆಂಜಾ ಎ ಉಪವಿಧದ ಎಚ್3ಎನ್2 ಕಾರಣ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ತಜ್ಞರು ಹೇಳಿದ್ದಾರೆ.
ಮತ್ತೊಂದೆಡೆ, ದೇಶಾದ್ಯಂತ ಹೆಚ್ಚುತ್ತಿರುವ ಕೆಮ್ಮು, ಶೀತ ಮತ್ತು ವಾಕರಿಕೆ ಪ್ರಕರಣಗಳ ಮಧ್ಯೆ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಆಂಟಿಬಯೋಟಿಕ್‌ಗಳ ವಿವೇಚನೆಯಿಲ್ಲದ ಬಳಕೆಯ ಬಗ್ಗೆ ಸಲಹೆ ನೀಡಿದೆ. ಹೇಗೆ ಬೇಕೋ ಹಾಗೆ ಆಂಟಿಬಯೋಟಿಕ್‌ಗಳನ್ನು ಬಳಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಈ ಶೀತ ಜ್ವರವು ಐದರಿಂದ ಏಳು ದಿನಗಳವರೆಗೆ ಇರುತ್ತದೆ. ಜ್ವರವು ಮೂರು ದಿನಗಳ ನಂತ ಹೋಗುತ್ತದೆ. ಆದರೆ ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ ಎಂದು ಐಎಂಎಯ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಸ್ಥಾಯಿ ಸಮಿತಿ ಹೇಳಿದೆ.












Click it and Unblock the Notifications