ಗೋಪ್ರಾಣಭಿಕ್ಷೆಗೆ ಭಕ್ತರ ಸಹಕಾರ ಕೋರಿದ ರಾಮಚಂದ್ರಾಪುರ ಮಠ
ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಮೇವಿಲ್ಲದೇ ಸಾವಿನ ಅಂಚಿನಲ್ಲಿರುವ ಲಕ್ಷ ಗೋವುಗಳಿಗೆ ಪ್ರಾಣಭಿಕ್ಷೆ ನೀಡುವ ಬೃಹತ್ ಆಂದೋಲನಕ್ಕೆ, ಭಕ್ತರಿಂದ ಇನ್ನೂ ಹೆಚ್ಚಿನ ಸಹಕಾರವನ್ನು ರಾಮಚಂದ್ರಾಪುರ ಮಠ ಕೋರಿದೆ.
ಬೆಂಗಳೂರು, ಮೇ 2: ಮಲೆಮಹದೇಶ್ವರ ಬೆಟ್ಟದ ತಪ್ಪಲಲ್ಲಿ ಮೇವಿಲ್ಲದೇ ಸಾವಿನ ಅಂಚಿನಲ್ಲಿರುವ ಲಕ್ಷ ಗೋವುಗಳಿಗೆ ಪ್ರಾಣಭಿಕ್ಷೆ ನೀಡುವ ಬೃಹತ್ ಆಂದೋಲನಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದ್ದು, ಭಕ್ತರಿಂದ ಇನ್ನೂ ಹೆಚ್ಚಿನ ಸಹಕಾರವನ್ನು ರಾಮಚಂದ್ರಾಪುರ ಮಠ ಕೋರಿದೆ.
ಕಾರ್ಮಿಕರ ದಿನದ (ಮೇ 1) ಬಿಡುವಿನ ಹಿನ್ನೆಲೆಯಲ್ಲಿ ಸೋಮವಾರ ನಗರದ ಎಸ್‍ಬಿಎಂ ಲೇಔಟ್, ಕತ್ರಿಗುಪ್ಪೆ ಬಿಗ್‍ಬಜಾರ್, ಶ್ರೀನಿವಾಸನಗರ ಮತ್ತಿತರ ಕಡೆಗಳಲ್ಲಿ ಸಾಫ್ಟ್ ವೇರ್ ಕಂಪೆನಿಗಳ ವ್ಯವಸ್ಥಾಪಕರು, ಲೆಕ್ಕಪರಿಶೋಧಕರು, ವೈದ್ಯರು ಸೇರಿದಂತೆ ಸಮಾಜದ ವಿವಿಧ ವರ್ಗದವರು ಗೋವಿಗಾಗಿ ಭಿಕ್ಷಾಟನೆ ನಡೆಸಿದರು. [ಕಾಮಧೇನುಗಳ ಸೇವೆಯಲ್ಲಿ ರಾಮಚಂದ್ರಾಪುರ ಮಠ]

ಮಠದಿಂದ ಸಾರ್ವಜನಿಕರ ನೆರವಿನೊಂದಿಗೆ ಈಗಾಗಲೇ 1200 ಟನ್ನಿಗೂ ಅಧಿಕ ಜೋಳ, ಕಬ್ಬು, ಅಡಿಕೆ ಹಾಳೆ ಮತ್ತಿತರ ಮೇವನ್ನು ಪೂರೈಸಲಾಗುತ್ತಿದ್ದು, ಹಸಿವಿನಿಂದ ಒಂದು ಗೋವೂ ಸಾಯಬಾರದು ಎಂಬ ಬದ್ಧತೆಯಿಂದ ಮಠದ ನೂರಾರು ಕಾರ್ಯಕರ್ತರು ಈ ಮಾನವೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ದಾನಿಗಳು ಕೂಡಾ ಮಠದ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
ದಿನೇ ದಿನೇ ಮೇವು ಅಭಾವ ಪರಿಸ್ಥಿತಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಕೇಂದ್ರಗಳಲ್ಲಿ ಮೇವು ವಿತರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ 15 ಕೇಂದ್ರಗಳಲ್ಲಿ ಮಠದ ವತಿಯಿಂದ ಮೇವು ವಿತರಿಸಲಾಗುತ್ತಿದೆ.
ಗೋಪ್ರಾಣಭಿಕ್ಷೆ ಆಂದೋಲನಕ್ಕೆ ಬೆಂಗಳೂರು, ಕರಾವಳಿ, ಮಲೆನಾಡು, ಹುಬ್ಬಳ್ಳಿ, ಬೆಳಗಾವಿ ಮತ್ತಿತರ ಕಡೆಗಳ ಜನರು ಕೂಡಾ ಧನ, ಧಾನ್ಯ ಹಾಗೂ ಮೇವಿನ ರೂಪದಲ್ಲಿ ಸಹಕಾರ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಷ್ಟೊಂದು ಬೃಹತ್ ಆಂದೋಲನಕ್ಕೆ ಸಹಾಯ ಕೋರಿ ಮಠದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ರಾಜ್ಯದ ವಿವಿಧೆಡೆಗಳಲ್ಲಿ ಭಿಕ್ಷಾಟನೆ ನಡೆಸಲು ನಿರ್ಧರಿಸಿದ್ದಾರೆ.
ಈಗಾಗಲೇ ಮಠದ ಶಿಷ್ಯರು ಹಾಗೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ವಾರದಲ್ಲಿ ಎರಡು ಅಥವಾ ಮೂರು ದಿನಗಳ ಕಾಲ ಒಂದು ಹೊತ್ತು ಉಪವಾಸ ನಡೆಸಿ, ಅದರಿಂದ ಉಳಿಯುವ ಹಣವನ್ನು ಗೋವಿನ ಮೇವಿಗೆ ದೇಣಿಗೆ ರೂಪದಲ್ಲಿನೀಡುತ್ತಿದ್ದಾರೆ.
ಲಕ್ಷಾಂತರ ಗೋವುಗಳು ಮೇವಿಲ್ಲದೇ ತತ್ತರಿಸಿರುವುದರಿಂದ, ಇನ್ನೂ ಹೆಚ್ಚಿನ ಸಾರ್ವಜನಿಕರ ಸಹಕಾರದ ಅವಶ್ಯಕತೆ ಇದ್ದು, ಗೋಪ್ರೇಮಿಗಳು ಯಥಾಶಕ್ತಿ ದೇಣಿಗೆ ನೀಡುವ ಮೂಲಕ ಸಹಕರಿಸಬಹುದಾಗಿದೆ.
ಮೇವಿಗಾಗಿ ದೇಣಿಗೆ ನೀಡಿದವರು ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿ ಸ್ವಹಸ್ತದಿಂದ ಮೇವು ನೀಡಲು ಅವಕಾಶ ಕಲ್ಪಿಸಲಾಗಿದ್ದು, ಗೋಪ್ರೇಮಿಗಳು ಧನ - ಧಾನ್ಯಗಳ ರೂಪದಲ್ಲಿ ಸಹಕಾರ ನೀಡಬಹುದಾಗಿದೆಂದು ರಾಮಚಂದ್ರಾಪುರ ಮಠದ ಅಧಿಕಾರಿಗಳು ತಿಳಿಸಿದ್ದಾರೆ.
ಮಠದ ಬ್ಯಾಂಕ್ ಖಾತೆಯ ಮಾಹಿತಿ ಇಂತಿದೆ (80G ವಿನಾಯಿತಿ ಇದೆ):
ಅಕೌಂಟ್ ನಂಬರ್: 0992500101611901
ಬ್ಯಾಂಕ್: ಕರ್ನಾಟಕ ಬ್ಯಾಂಕ್
ಬ್ರಾಂಚ್ : ಶ್ರೀನಗರ, ಬೆಂಗಳೂರು
IFSC ಕೋಡ್: KARB0000099











Click it and Unblock the Notifications