Ayushmati Clinic :ಕರ್ನಾಟಕದ ಮಹಿಳೆಯರಿಗೆ ಸರ್ಕಾರದಿಂದ ಸಿಹಿ ಸುದ್ದಿ: ಜನವರಿಗೆ 'ಆಯುಷ್ಮತಿ' ಕ್ಲಿನಿಕ್ ಆರಂಭ: ಸುಧಾಕರ್
ಹುಬ್ಬಳ್ಳಿ, ಡಿಸೆಂಬರ್ 14, ಬುಧವಾರ: ಇದೇ ಮೊದಲ ಬಾರಿಗೆ 114 'ನಮ್ಮ ಕ್ಲಿನಿಕ್'ಗಳು ಜನಸೇವೆಗೆ ಮುಕ್ತವಾಗಿದೆ. ಹೊಸ ವರ್ಷಕ್ಕೆ ಮಹಿಳೆಯರಿಗೆ ವಿಶೇಷ ಕೊಡುಗೆ ನೀಡುತ್ತಿರುವ ರಾಜ್ಯ ಸರ್ಕಾರ ಅವರಿಗಾಗಿ 'ಆಯುಷ್ಮತಿ' ಕ್ಲಿನಿಕ್‌ಗಳನ್ನು ಜನವರಿಯಲ್ಲಿ ಉದ್ಘಾಟಿಸಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಹುಬ್ಬಳ್ಳಿಯಲ್ಲಿ ರಾಜ್ಯದ 114 'ನಮ್ಮ ಕ್ಲಿನಿಕ್'ಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ ನೂರಕ್ಕೂ ಅಧಿಕ ಕ್ಲಿನಿಕ್‌ಗಳನ್ನು ಉದ್ಘಾಟಿಸಿದ್ದು, ಜನವರಿ ಅಂತ್ಯಕ್ಕೆ ಎಲ್ಲ 438 'ನಮ್ಮ ಕ್ಲಿನಿಕ್ʼಗಳಲ್ಲಿ ಸಾರ್ವಜನಿಕರು ಉಚಿತವಾಗಿ ಸೇವೆ ಪಡೆಯಬಹುದಾಗಿದೆ. ಇದೇ ವೇಳೆ ರಾಜ್ಯ ಸರ್ಕಾರ ಮಹಿಳೆಯರ ಆರೋಗ್ಯ ಹಿತದೃಷ್ಟಿಯಿಂದ ಮೀಸಲಾದ 'ಆಯುಷ್ಮತಿ' ಕ್ಲಿನಿಕ್‌ಗಳಿಗೆ ಮುಂದಿನ ತಿಂಗಳಾಂತ್ಯಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಈ ಹೊಸ 'ನಮ್ಮ ಕ್ಲಿನಿಕ್'ಗಳಲ್ಲಿ ಲ್ಯಾಬ್ ಪರೀಕ್ಷೆ, ತಪಾಸಣೆ, ಔಷಧಿ ಸಂಪೂರ್ಣ ಉಚಿತವಾಗಿದೆ. ಇದು ಆರೋಗ್ಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರುವ ಹೆಜ್ಜೆಯಾಗಿದೆ. ಇತಿಹಾಸದಲ್ಲಿ ಯಾವ ಸರ್ಕಾರವೂ ಒಂದೇ ಬಾರಿಗೆ 114 ಕ್ಲಿನಿಕ್‌ಗಳನ್ನು ಉದ್ಘಾಟನೆ ಮಾಡಿಲ್ಲ. ಇಂದು ನಮ್ಮ ಸರ್ಕಾರದ ಮೂಲಕ ಸಾರ್ವಕಾಲಿಕ ದಾಖಲೆಯಾಗಿದೆ ಎಂದರು.

ಕೆಲವು ರೋಗಗಳ ತಡೆಗೆ ಮನೆ ಬಾಗಿಲಿಗೆ ಔಷಧಿ
ರಾಜ್ಯದಲ್ಲಿ 7,000 ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಈಗಾಗಲೇ ಆರಂಭಿಸಿದ್ದೇವೆ. 30 ವರ್ಷ ವಯಸ್ಸು ಮೇಲ್ಪಟ್ಟ ಎಲ್ಲರೂ ವರ್ಷಕ್ಕೆ ಒಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಭಾರತ ಈಗ ಮಧುಮೇಹದ ಕೇಂದ್ರವಾಗಿದೆ. ಇಂತಹ ಅಸಾಂಕ್ರಾಮಿಕ ರೋಗಗಳ ಪತ್ತೆ ಅಗತ್ಯವಿದೆ. ಇದಕ್ಕಾಗಿ ಕಳೆದ ಒಂದು ವರ್ಷದಲ್ಲಿ ಈ ಕೇಂದ್ರಗಳಲ್ಲಿ ಶೇ.60 ರಷ್ಟು ಜನರನ್ನು ತಪಾಸಣೆ ಮಾಡಿದ್ದು, ವಿವಿಧ ರೋಗಗಳಿಗೆ ಉಚಿತ ಔಷಧಿ ನೀಡಲಾಗುತ್ತಿದೆ. ಜನವರಿ ತಿಂಗಳಿಂದ ಮಧುಮೇಹ, ಬಿಪಿ, ಕ್ಷಯ ಮೊದಲಾದ ರೋಗಗಳಿಗೆ ಔಷಧಿಯನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಮಾಡಲಾಗುವುದು ಎಂದು ವಿವರಿಸಿದರು.

'ನಮ್ಮ ಕ್ಲಿನಿಕ್' ಸಿಬ್ಬಂದಿ ವಿವರ
ಒಂದು ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯ, ಲ್ಯಾಬ್ ತಂತ್ರಜ್ಞ, ನರ್ಸ್, ಡಿ ಗ್ರೂಪ್ ನೌಕರ ಇರುತ್ತಾರೆ. ಜ್ವರ, ಕೆಮ್ಮು, ನೆಗಡಿ ಮೊದಲಾದ ಸಣ್ಣ ಸಮಸ್ಯೆಗಳಿಗೆ ಹಿಂದೆ ಜಿಲ್ಲಾಸ್ಪತ್ರೆಗೆ ಹೋಗಬೇಕಿತ್ತು. ಆದರೆ ಈಗ ನಮ್ಮ ಕ್ಲಿನಿಕ್‌ಗೆ ಹೋಗಿ ಉಚಿತವಾಗಿ ಸೇವೆ ಪಡೆಯಬಹುದು. ಬೇರೆ ಆಸ್ಪತ್ರೆಗಳಲ್ಲಿ 10 ರೂ. ಶುಲ್ಕ ಪಡೆಯಲಾಗುತ್ತಿತ್ತು. ಆದರೆ ನಮ್ಮ ಕ್ಲಿನಿಕ್‌ನಲ್ಲಿ ಬಿಡಿಗಾಸನ್ನೂ ನೀಡಬೇಕಿಲ್ಲ ಎಂದು ವಿವರಿಸಿದರು.
ನಗರಗಳೆಂದರೆ ಶ್ರೀಮಂತರೇ ಇರುವ ಪ್ರದೇಶ ಎಂಬ ತಪ್ಪು ಕಲ್ಪನೆ ಇದೆ. ನಗರಗಳಲ್ಲಿರುವ ಬಡವರು, ಕೂಲಿ ಕಾರ್ಮಿಕರು, ವಲಸೆ ಬಂದವರು, ಕೊಳೆಗೇರಿ ನಿವಾಸಿಗಳ ಆರೋಗ್ಯ ರಕ್ಷಣೆಗಾಗಿ ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ. ನಮ್ಮ ಕ್ಲಿನಿಕ್ ಅನ್ನು ಮೊದಲು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉದ್ಘಾಟಿಸುತ್ತಿರುವುದು ವಿಶೇಷವಾಗಿದೆ. ಒಟ್ಟು 114 ಕ್ಲಿನಿಕ್‌ಗಳನ್ನು ವಿವಿಧ ಜಿಲ್ಲೆಗಳಲ್ಲಿ ಏಕ ಕಾಲಕ್ಕೆ ಉದ್ಘಾಟನೆಗೊಂಡಿವೆ.

ಪ್ರಧಾನಿಗಳಿಂದ ಆಯುಷ್ಮಾನ್ ಕಾರ್ಡ್ ವಿತರಣೆ
ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಇಲ್ಲದಿದ್ದರೆ ಸಂಪದ್ಭರಿತ ನಾಡನ್ನು ಸೃಷ್ಟಿಸಲು ಸಾಧ್ಯವಿಲ್ಲ. ಒಂದು ದೇಶ-ಒಂದು ಪಡಿತರ ಚೀಟಿ, ಒಂದು ದೇಶ-ಒಂದು ತೆರಿಗೆ ಎಂಬಂತೆ, ಒಂದು ದೇಶ-ಒಂದು ಹೆಲ್ತ್ ಕಾರ್ಡ್ ಎಂಬ ಘೋಷಣೆಯ ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. 1.20 ಕೋಟಿ ಕಾರ್ಡ್‌ಗಳ ನೋಂದಣಿ ಪೂರ್ಣಗೊಂಡಿದ್ದು, ಈ ಕಾರ್ಯಕ್ರಮಕ್ಕೂ ಚಾಲನೆ ನೀಡಬೇಕಿತ್ತು. ಆದರೆ ಕೇಂದ್ರದ ಆರೋಗ್ಯ ಸಚಿವರು ಕರೆ ಮಾಡಿ ಶ್ಲಾಘಿಸಿ, ಪ್ರಧಾನಿ ನರೇಂದ್ರ ಮೋದಿಯವರಿಂದಲೇ ಈ ಕಾರ್ಡ್ ವಿತರಣೆ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ. ಆದ್ದರಿಂದ ಪ್ರಧಾನಿಗಳ ಕೈಯಿಂದಲೇ ಕಾರ್ಡ್‌ಗಳನ್ನು ಜನರಿಗೆ ಕೊಡಿಸಲಾಗುವುದು ಎಂದು ತಿಳಿಸಿದರು.

42 ಲಕ್ಷ ಜನರಿಗೆ ಉಚಿತ ಚಿಕಿತ್ಸೆ
ಕೆಲವರು ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಟೀಕೆ ಮಾಡುತ್ತಾರೆ. ಆದರೆ ನಾಲ್ಕು ವರ್ಷಗಳಲ್ಲಿ 42 ಲಕ್ಷ ಜನರಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತ ಸೇವೆ ನೀಡಲಾಗುತ್ತಿದೆ. ಅದಕ್ಕಾಗಿ 5 ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಈ ಪೈಕಿ ಶೇ.70 ರಷ್ಟು ರೋಗಿಗಳು ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದಾರೆ. ಸರ್ಕಾರಿ ಆರೋಗ್ಯ ವ್ಯವಸ್ಥೆ ಸರಿ ಇಲ್ಲ ಎಂದು ದೂರುವುದು ಸುಲಭ. ಆದರೆ ಉಚಿತ ಸೇವೆಯ ಪರಂಪರೆಯನ್ನು ನೋಡಬೇಕು. ನಮ್ಮ ಅವಧಿಯಲ್ಲಿ ಆಸ್ಪತ್ರೆಗಳ ಮೂಲ ಸೌಕರ್ಯದಲ್ಲಿ 5ರಿಂದ 6 ಪಟ್ಟು ಪ್ರಗತಿಯಾಗಿದೆ ಎಂದು ಸುಧಾಕರ್ ವಿವರಿಸಿದರು.












Click it and Unblock the Notifications