ಕಬ್ಬು ಕ್ರಷಿಂಗ್‌ ಆರಂಭ: ಈ ಜಿಲ್ಲೆಯ ರೈತರಿಗೆ ಗುಡ್‌ ನ್ಯೂಸ್:‌ ಸಂಪೂರ್ಣ ವಿವರ ತಿಳಿಯಿರಿ

ಬೆಂಗಳೂರು, ಜೂನ್‌ 10: ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಇತರ ಜಿಲ್ಲೆಗಳಲ್ಲಿ ನವಂಬರ್‌ 1ರಿಂದ ಕಬ್ಬು ನುರಿಸುವಿಕೆ ಆರಂಭಿಸಲು ಮಂಗಳವಾರ ಕಬ್ಬು, ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ಮಾತ್ರ ಜೂನ್‌ 22ರಿಂದ ಕಬ್ಬು ನುರಿಸುವಿಕೆ ಆರಂಭಿಸಲು ಈಗಾಗಲೇ ಆದೇಶ ಹೊರಡಿಸಲಾಗಿದೆ. ಈ ಬಾರಿ ಮಳೆ ಉತ್ತಮವಾಗಿದ್ದು, ಕಬ್ಬು ಇಳುವರಿ ಕೂಡಾ ಚೆನ್ನಾಗಿದೆ. ಹೀಗಾಗಿ ಮುಂಚಿತವಾಗಿಯೇ ಕಬ್ಬು ನುರಿಸುವಿಕೆ ಆರಂಭಿಸುವ ಅಭಿಪ್ರಾಯಕ್ಕೆ ರೈತ ಮುಖಂಡರನ್ನೊಳಗೊಂಡ ಕಬ್ಬು ನಿಯಂತ್ರಣ ಮಂಡಳಿ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ತೂಕದಲ್ಲಿ ವಂಚನೆ ತಡೆ, ಕಬ್ಬು ಪೂರೈಕೆ ಮಾಡಿದ ರೈತರಿಗೆ ನಿಗದಿತ ಸಮಯದಲ್ಲಿ ಬಿಲ್‌ ಪಾವತಿ ಬಗ್ಗೆ ಚರ್ಚೆ ಸಭೆಯಲ್ಲಿ ಚರ್ಚೆ ನಡೆಯಿತು. ಕಳೆದ ಮೂರು ವರ್ಷದ ಹಂಗಾಮಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬಿಲ್‌ ಪಾವತಿಯಾಗಿದೆ. ಕಬ್ಬು ಪೂರೈಕೆ ಮಾಡಿದ 14 ದಿನಗಳೊಳಗೆ ಬಿಲ್‌ ಪಾವತಿ ಮಾಡಬೇಕು ಎಂಬ ನಿಯಮ ಇದೆ. ಕೆಲ ಕಾರ್ಖಾನೆಗಳು ವಿಳಂಬ ಮಾಡಿರಬಹುದು ಆದರೆ ಪೂರ್ಣ ಪ್ರಮಾಣದಲ್ಲಿ ಬಿಲ್‌ ಪಾವತಿ ಮಾಡಿವೆ. ಕಬ್ಬಿನ ಬಾಕಿ ಬಿಲ್‌ ಪಾವತಿ ವಿಚಾರದಲ್ಲಿ ಕರ್ನಾಟಕ ರಾಜ್ಯ ಇತರೆ ಕಬ್ಬು ಬೆಳೆಯುವ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

Good News for Farmers Sugarcane crushing started from November 1

ಕಬ್ಬು ಪೂರೈಕೆ ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಉತ್ತರ ಪ್ರದೇಶದಲ್ಲಿ ರೂ 594 ಕೋಟಿ, ಮಹಾರಾಷ್ಟ್ರ ರಾಜ್ಯದಲ್ಲಿ ರೂ 123 ಕೋಟಿ ಬಾಕಿ ಉಳಿಸಿಕೊಂಡಿವೆ. ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಕರ್ನಾಟಕ ಸರ್ಕಾರ ಸಕ್ಕರೆ ಕಾರ್ಖಾನೆಗಳ ಮೇಲೆ ಒತ್ತಡ ಹಾಕಿ ಬಿಲ್‌ ಪಾವತಿಗೆ ಕ್ರಮ ಕೈಗೊಂಡಿದೆ ಎಂದರು. 2025-26ನೇ ಸಾಲಿನ ಹಂಗಾಮಿಗೆ ಎಫ್‌ಆರ್‌ಪಿ ದರವನ್ನು ಪ್ರತಿಶತ 9.5ರಷ್ಟು ಸಕ್ಕರೆ ಇಳುವರಿಗೆ ಪ್ರತಿ ಮೆಟ್ರಿಕ್‌ ಟನ್‌ಗೆ ರೀ 4440 ಅಥವಾ ರೂ 4200 ನಿಗದಿಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕಳೆದ ಜನವರಿಯಲ್ಲೇ ರಾಜ್ಯ ಸರ್ಕಾರ ಮನವಿ ಮಾಡಿತ್ತು.

ಕೇಂದ್ರ ಸರ್ಕಾರ ಪ್ರತಿಶತ 10.25 ಸಕ್ಕರೆ ಇಳುವರಿಗೆ ಪ್ರತಿಟನ್‌ಗೆ ರೂ 3,550, ಪ್ರತಿಶತ 10.25ಕ್ಕೂ ಮೇಲ್ಪಟ್ಟ ಇಳುವರಿಗೆ ನಂತರದ ಶೇಕಡ 1ರಷ್ಟು ಇಳುವರಿಗೆ ಪ್ರತಿ ಮೆಟ್ರಿಕ್‌ ಟನ್‌ಗೆ ರೂ 346 ಹೆಚ್ಚುವರಿ ಬೆಲೆ ನಿಗದಿಪಡಿಸಿದೆ. ಪ್ರತಿಶತ 10.25ಕ್ಕಿಂತ ಕಡಿಮೆ ಹಾಗೂ ಪ್ರತಿಶತ 9.5ಕ್ಕೆ ಮೇಲ್ಪಟ್ಟ ಇಳುವರಿ ಹೊಂದಿರುವ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿ ಮೆಟ್ರಿಕ್‌ ಟನ್‌ಗೆ ರೂ 346 ಸರಾಸರಿಯಂತೆ ನ್ಯಾಯ ಮತ್ತು ಲಾಭದಾಯಕ ಬೆಲೆ ಕಡಿಮೆ ಮಾಡಬೇಕು. ಪ್ರತಿಶತ 9.5 ಅಥವಾ ಪ್ರತಿಶತ 9.50ಕ್ಕಿಂತ ಕಡಿಮೆ ಇಳುವರಿ ಹೊಂದಿರುವ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿ ಮೆಟ್ರಿಕ್‌ ಟನ್‌ಗೆ ರೂ 3290.5 ನ್ಯಾಯ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸಿದೆ ಎಂದು ವಿವರಿಸಿದರು.

2024-25ನೇ ಹಂಗಾಮಿನಲ್ಲಿ ಕಬ್ಬು ಬಿಲ್‌ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ವಸೂಲಾತಿ ಪ್ರಮಾಣ ಪತ್ರವನ್ನು ಜಾರಿಗೊಳಿಸಲಾಗಿದೆ. ಕೆಲವು ಕಾರ್ಖಾನೆಗಳು ಎಫ್‌ಆರ್‌ಪಿ ದರದಂತೆ ಸಂಪೂರ್ಣ ಹಣ ಪಾವತಿ ಮಾಡಿದ್ದರೂ ಕಬ್ಬು (ನಿಯಂತ್ರಣ) ಆದೇಶದ ಅನ್ವಯ ವಿಳಂಬದ ಅವಧಿಗೆ ರೈತರಿಗೆ ಪ್ರತಿಶತ 15ರಂತೆ ಬಡ್ಡಿ ವಿತರಿಸಿರುವ ಬಗ್ಗೆ ಮಾಹಿತಿ ನೀಡಿಲ್ಲ. ಕೆಲವು ಕಾರ್ಖಾನೆಗಳು ಅಸಲು ಮೊತ್ತವನ್ನೂ ಬಾಕಿ ಉಳಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಮೊತ್ತದ ವಿಚಾರವಾಗಿ ಕಬ್ಬು ಬೆಳೆಗಾರರ ಸಭೆ ಕರೆದು ಕಬ್ಬಿನ ಬಾಕಿ ಬಿಲ್‌ ಪಾವತಿ ಬಗ್ಗೆ ಖಚಿತಪಡಿಸಕೊಳ್ಳಲು ಹಾಗೂ ಈ ವಿಚಾರವಾಗಿ ಅನುಪಾಲನಾ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ತೂಕದಲ್ಲಿನ ವಂಚನೆ ತಡೆಗೆ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಅನಲಾಗ್‌ ತೂಕದ ಯಂತ್ರಗಳ ಬದಲಿಗೆ ಡಿಜಿಟಲ್‌ ತೂಕದ ಯಂತ್ರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಕೇವಲ ನಾಲ್ಕು ಕಾರ್ಖಾನೆಗಳಲ್ಲಿ ಮಾತ್ರ ಬಾಕಿ ಇದೆ. ಈ ಹಂಗಾಮು ಆರಂಭದೊಳಗೆ ಬಾಕಿ ಇರುವ ಸಕ್ಕರೆ ಕಾರ್ಖಾನೆಗಳಲ್ಲೂ ಡಿಜಿಟಲ್‌ ತೂಕದ ಯಂತ್ರ ಅಳವಡಿಸಬೇಕು ಎಂದು ಸಚಿವರು ಮಾಪನ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಡಿಜಿಟಲ್‌ ತೂಕದ ಯಂತ್ರಗಳನ್ನು ಅಳವಡಿಸಿದ ನಂತರ ವಂಚನೆ ದೂರುಗಳು ಕಡಿಮೆಯಾಗಿವೆ. ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಅನಿರೀಕ್ಷಿತವಾಗಿ ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ತಪಾಸಣೆ ಮಾಡಬೇಕು. ಡಿಜಿಟಲ್‌ ತೂಕದ ಯಂತ್ರಗಳಲ್ಲಿ ವಂಚನೆ ಮಾಡಲು ಅವಕಾಶ ಇರುವುದಿಲ್ಲ ಎನ್ನಲಾಗಿದೆ. ಆದರೂ ಅಧಿಕಾರಿಗಳು ಪರಿಶೀಲನೆ ಮಾಡುವುದು ಕಡ್ಡಾಯ. ಮಾಪನಶಾಸ್ತ್ರ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಹೀಗಾಗಿ ಸಬೂಬು ಹೇಳದೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ರಾಜ್ಯದ ಎಲ್ಲ ಎಪಿಎಂಸಿಗಳಲ್ಲೂ ತೂಕದ ಯಂತ್ರಗಳನ್ನು ಅಳವಡಿಸಿ ಉಚಿತವಾಗಿ ತೂಕ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ 2025ರ ಮೇ ಅಂತ್ಯಕ್ಕೆ ಸಕ್ಕರೆ ಕಾರ್ಖಾನೆಗಳು 521.38 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನುರಿಸಿ 41.81 ಲಕ್ಷ ಮೆಟ್ರಿಕ್‌ ಟನ್‌ ಸಕ್ಕರೆ ಉತ್ಪಾದನೆ ಮಾಡಿವೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್‌ಆರ್‌ಪಿ ದರದಂತೆ ಒಟ್ಟು ರೂ 18221.88 ಕೋಟಿ ಬಿಲ್‌ ಪಾವತಿ ಮಾಡಬೇಕಿದ್ದು, ರೂ 18872.47 ಕೋಟಿ ಪಾವತಿ ಮಾಡಿವೆ. 14 ಸಕ್ಕರೆ ಕಾರ್ಖಾನೆಗಳು ರೂ 245.62 ಕೋಟಿ ಬಾಕಿ ಉಳಿಸಿಕೊಂಡಿದ್ದು,, ಅಂತಹ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗಳಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ವಸೂಲಾತಿ ಪ್ರಮಾಣ ಪತ್ರ ಹೊರಡಿಸಿದ್ದಾರೆ. ಕೆಲವು ಕಾರ್ಖಾನೆಗಳು ಎಫ್‌ಆರ್‌ಪಿ ದರಕ್ಕಿಂತ ಹೆಚ್ಚಿನ ಬಿಲ್‌ ಪಾವತಿ ಮಾಡಿವೆ ಎಂದು ಸಕ್ಕರೆ ಆಯುಕ್ತ ರವಿಕುಮಾರ್‌ ಸಭೆಗೆ ಮಾಹಿತಿ ನೀಡಿದರು.

ರೂ 5 ಲಕ್ಷ ಬಹುಮಾನ

ತೂಕದಲ್ಲಿ ವಂಚನೆಯನ್ನು ದಾಖಲೆ ಸಹಿತ ದೂರು ನೀಡುವ ರೈತರಿಗೆ ಈಗಾಗಲೇ ರೂ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ಹಾಗೂ ಆ ರೈತರ ಕಬ್ಬು ನುರಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಇದುವರೆಗೆ ತೂಕದಲ್ಲಿ ವಂಚನೆಯ ದೂರುಗಳು ಬಂದಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ಅನಲಾಗ್‌ ತೂಕದ ಯಂತ್ರಗಳು ಇದ್ದ ಸಮಯದಲ್ಲಿ ಸುಮಾರು ನೂರು ದೂರುಗಳು ಬರುತ್ತಿದ್ದವು. ಆದರೆ ಡಿಜಿಟಲ್‌ ತೂಕದ ಯಂತ್ರ ಅಳವಡಿಸಿದ ನಂತರ ದೂರುಗಳ ಸಂಖ್ಯೆ ಹತ್ತಕ್ಕಿಂತ ಕಡಿಮೆ ಇದೆ ಎಂದು ಸಕ್ಕರೆ ಆಯುಕ್ತ ರವಿಕುಮಾರ್‌ ಸಭೆಯ ಗಮನಕ್ಕೆ ತಂದರು. ದೂರುಗಳು ಶೂನ್ಯಕ್ಕೆ ಇಳಿಯಬೇಕು. ಇದು ಸರ್ಕಾರದ ಆಶಯ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+