ರಾಜ್ಯದಲ್ಲಿ ಭರ್ಜರಿ ಮಳೆ; ಮನೆ ಕಳಕೊಂಡವರಿಗೆ 5 ಲಕ್ಷ ಪರಿಹಾರ ಕೊಡಿ: ವಿಜಯೇಂದ್ರ
ಬೆಂಗಳೂರು, ಜುಲೈ 22: ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಬಡವರಿಗೆ 5 ಲಕ್ಷ ರೂ. ನೆರವು ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ರಾಜ್ಯ ವಿಧಾನಸಭೆಯಲ್ಲಿ ಮನವಿ ಮಾಡಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಮುಂಗಾರು ಮಳೆ ಆರ್ಭಟಿಸುತ್ತಿದೆ. ನಾನು ಈಗಾಗಲೇ ಶಿಕಾರಿಪುರ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಮಳೆ ಜಾಸ್ತಿಯಾದ ಪರಿಣಾಮ ಮನೆಗಳು, ಮನೆ ಗೋಡೆಗಳು ಕುಸಿದು ಬೀಳುತ್ತಿವೆ. ಅಂಕೋಲಾ ತಾಲ್ಲೂಕಿನಲ್ಲಿ ಭೂಕುಸಿತದಿಂದ ಆದ ಅನಾಹುತ ಸ್ಥಳಕ್ಕೆ ಭೇಟಿ ನೀಡಿದ್ದೇನೆ ಎಂದರು.

ಹಿಂದೆ ಎನ್‍ಡಿಆರ್‍ಎಫ್ ನಿಯಮದ ಪ್ರಕಾರ ಮನೆ ಕಳೆದುಕೊಂಡ ಬಡವರಿಗೆ ಸುಮಾರು 1 ಲಕ್ಷ ಕೊಡಬೇಕಿತ್ತು. ಅದು ಸಾಕಾಗುವುದಿಲ್ಲ, ಬಡವರಿಗೆ ನೆರವಾಗುವ ದೃಷ್ಟಿಯಿಂದ ಸಹಾನುಭೂತಿ ತೋರಿಸಿ 5 ಲಕ್ಷ ನೀಡುವ ನಿರ್ಧಾರವನ್ನು ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ರಾಜ್ಯ ಸರಕಾರವು ಕೈಗೊಂಡಿತ್ತು ಎಂದು ವಿವರಿಸಿದರು.
ಗೋಡೆ ಕುಸಿದ ಮನೆಗೆ ಎನ್‍ಡಿಆರ್‍ಎಫ್ ನಿಯಮದ ಪ್ರಕಾರ 40 ಸಾವಿರ ಕೊಡುತ್ತಿದ್ದರು. ಅದನ್ನು ಒಂದು ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಮನೆಗಳಿಗೆ ನೀರು ನುಗ್ಗಿತ್ತೋ ಅಲ್ಲಿ 10 ಸಾವಿರ ರೂ. ಕೊಡುತ್ತಿದ್ದರು. ಶಿರೂರು ಗುಡ್ಡ ಕುಸಿತದಲ್ಲಿ ಲಕ್ಷ್ಮಣ ನಾಯ್ಕರ ಕುಟುಂಬದ ಹಲವರು ಮೃತರಾಗಿದ್ದು, ಹೋಟೆಲ್ ಕೆಲಸದಲ್ಲಿದ್ದ ಜಗನ್ನಾಥ ನಾಯ್ಕ ಅವರು ನಾಪತ್ತೆಯಾಗಿದ್ದಾರೆ. ಕುಟುಂಬದ ಮೂವರು ಮಹಿಳೆಯರು ನಿರ್ಗತಿಕರಾಗಿದ್ದಾರೆ. ಆದರೆ, ಅವರ ಮನೆಗೆ ಶಾಸಕರು, ಸಚಿವರು ಭೇಟಿ ಕೊಟ್ಟಿಲ್ಲ ಎಂದು ತಿಳಿಸಿದರು. ಆ ಕುಟುಂಬಕ್ಕೂ ಪರಿಹಾರ ಕೊಡಿ. ಅಲ್ಲದೆ, ಮನೆಗಳ ಸ್ಥಳಾಂತರ ಮಾಡಬೇಕಿದೆ ಎಂದು ಅವರು ಒತ್ತಾಯಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತ ಬಿಜೆಪಿ ಹೋರಾಟ ಮುಂದುವರೆಯಲಿದೆ. ಆರಂಭದಲ್ಲಿ ಹಗರಣ ನಡೆದೇ ಇಲ್ಲ ಎಂದಿದ್ದ ಮುಖ್ಯಮಂತ್ರಿಗಳು ಬಳಿಕ ಸಚಿವ ನಾಗೇಂದ್ರರ ರಾಜೀನಾಮೆ ಪಡೆದು ಹಗರಣ ನಡೆದುದನ್ನು ಒಪ್ಪಿಕೊಂಡಿದ್ದಾರೆ. ಪರಿಶಿಷ್ಟ ಪಂಗಡಗಳಿಗೆ ಕಾಂಗ್ರೆಸ್ ಸರಕಾರ ದ್ರೋಹ ಬಗೆದಿದೆ ಎಂದು ಟೀಕಿಸಿದರು.
ಸದನದಲ್ಲಿ ಸರಿಯಾಗಿ ಉತ್ತರ ಕೊಡದೆ ಜಾಹೀರಾತು ಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದ ಅವರು, 187 ಕೋಟಿ ಹಗರಣದಲ್ಲಿ 45 ಕೋಟಿ ವಾಪಸ್ ಬಂದಿದೆ ಎಂದು ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕದ್ದ ಮಾಲನ್ನು, ಲೂಟಿ ಮಾಡಿದ ಹಣವನ್ನು ಹೊರರಾಜ್ಯಕ್ಕೆ ಒಯ್ದು ಹೊರರಾಜ್ಯದಲ್ಲಿ ಚುನಾವಣೆಗೆ ಬಳಸಿದ್ದಾರೆ. ಹಣ ವಾಪಸ್ ಬಂದಿದೆ ಎಂದು ಜನರ ಕಿವಿಗೆ ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ. ಹಗರಣ ನಡೆದಿದೆ. ಕಳ್ಳತನ ಆಗಿದೆ ಇದನ್ನು ಒಪ್ಪಲಾಗದು ಎಂದು ಎಚ್ಚರಿಸಿದರು.
ನೆರೆ ಹಾನಿ ಸಂಬಂಧ, ಮನೆ ಕುಸಿತಕ್ಕೆ ಸಂಬಂಧಿಸಿ ಬಿಜೆಪಿ ಸರಕಾರ ಕೊಟ್ಟ ಮಾದರಿಯಲ್ಲಿ ಒಂದು ಲಕ್ಷದ ಬದಲು 5 ಲಕ್ಷ ರೂ. ಕೊಡಬೇಕು. ಗೋಡೆ ಕುಸಿತಕ್ಕೆ ಎನ್‍ಡಿಆರ್‍ಎಫ್ ನಿಯಮದ 40 ಸಾವಿರ ಬದಲಾಗಿ 1 ಲಕ್ಷ ಕೊಡಿ ಎಂದು ಆಗ್ರಹಿಸಿದರು. ಡೆಂಗ್ಯೂ, ಇತರ ಜ್ವಲಂತ ಸಮಸ್ಯೆಗಳ ಕುರಿತು ಸದನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ವಿವರಿಸಿದರು. ವಾಲ್ಮೀಕಿ ನಿಗಮದ ಹೋರಾಟ ಕೈಬಿಟ್ಟಿಲ್ಲ; ಈ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ತಿಳಿಸಿದರು.
ವಾಲ್ಮೀಕಿ ನಿಗಮದಲ್ಲಿ ದಲಿತರ ಹಣ ನುಂಗಿದ ಸರಕಾರದ ಹಗರಣ ಸಂಬಂಧ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇವೆ. ನಮ್ಮ ಹೋರಾಟದ ಬಳಿಕ ನಾಗೇಂದ್ರರು ರಾಜೀನಾಮೆ ಕೊಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದರು.
ಸರಕಾರ, ಮುಖ್ಯಮಂತ್ರಿಗಳ ಪಾತ್ರ ಕುರಿತು ಸದನದಲ್ಲಿ ದಾಖಲೆಗಳೊಂದಿಗೆ ಬಿಚ್ಚಿಟ್ಟಿದ್ದು, ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದೇವೆ. ಹಗರಣದ ಹಣ ಚುನಾವಣೆಯಲ್ಲಿ ಬಳಕೆಯಾದ ಕುರಿತು ಇ.ಡಿ. ತಿಳಿಸಿದೆ. ಮುಖ್ಯಮಂತ್ರಿಗಳು ಸರಿಯಾಗಿ ಉತ್ತರ ನೀಡಿಲ್ಲ. ವಿಪಕ್ಷವನ್ನು ಬೆದರಿಸುವುದು, ಹಿಂದಿನ ಬಿಜೆಪಿ ಆಡಳಿತಾವಧಿಯ ಹಗರಣಗಳ ಕುರಿತು ಮಾತನಾಡಿದ್ದಾರೆ ಎಂದು ಟೀಕಿಸಿದರು.
ಅಧಿಕಾರಿಗಳು 187 ಕೋಟಿ ತಿಂದಿದ್ದಾರೆ ಎಂದಿದ್ದಾರೆ. ಅವರೇನೋ ಒಂದೈವತ್ತು ಲಕ್ಷ ತಿಂದಿರಬಹುದು. ಹೆಚ್ಚು ಹಣ ತಿಂದವರು ನೀವು ಎಂದು ಆಕ್ಷೇಪಿಸಿದರು. ಈಗ ಮೂಡ ಹಗರಣ, ಮಳೆ ಹಾನಿ, ಪ್ರವಾಹದ ಭಯ, ಪರಿಹಾರದ ಕುರಿತು, ಡೆಂಗ್ಯೂ ಮರಣಮೃದಂಗದ ವಿಚಾರವಾಗಿ ಚರ್ಚಿಸುತ್ತೇವೆ. ದಲಿತರ 25 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗಾಗಿ ಬಳಕೆ ವಿಚಾರವಾಗಿ ಕೂಡ ನಿಲುವಳಿ ಮೂಲಕ ಪ್ರಸ್ತಾಪಿಸುತ್ತೇವೆ ಎಂದರು.ಸಿಎಂ ರಾಜೀನಾಮೆ ಕುರಿತ ಹೋರಾಟ ನಿಲ್ಲಿಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.












Click it and Unblock the Notifications