ಕಟ್ಟಡ ಮಾಲೀಕರ ಗಮನಕ್ಕೆ; ಆನ್‌ಲೈನ್‌ನಲ್ಲೇ ಎನ್‌ಒಸಿ ಲಭ್ಯ
ಬೆಂಗಳೂರು, ಅಕ್ಟೋಬರ್ 25 : ವಾಣಿಜ್ಯ ಮಳಿಗೆ, ಬಹುಮಹಡಿ ಕಟ್ಟಡ ಕಟ್ಟಲು ಎನ್‌ಒಸಿ ಪಡೆಯಲು ಜನರು ಅಲೆದಾಡ ಬೇಕಿತ್ತು. ಕರ್ನಾಟಕ ಸರ್ಕಾರ ಇದನ್ನು ಸರಳೀಕರಣಗೊಳಿಸಿದ್ದು, ಇನ್ನು ಮುಂದೆ ಆನ್‌ಲೈನ್‌ನಲ್ಲಿಯೇ ಎನ್‌ಒಸಿ ಸಿಗಲಿದೆ.
ಬಹುಮಹಡಿ ಕಟ್ಟಡ, ವಾಣಿಜ್ಯ ಸಂಕೀರ್ಣ ಕಟ್ಟಲು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನೀಡುವ ನಿರಾಕ್ಷೇಪಣಾ ಪತ್ರ ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ನೀಡುವ ಪ್ರಮಾಣ ಪತ್ರ ಇನ್ನು ಮುಂದೆ ಆನ್‌ಲೈನ್‌ನಲ್ಲಿಯೇ ಸಿಗಲಿದೆ.
ಕಟ್ಟಡ ನಿರ್ಮಾಣ ಮಾಡುವವರು ಸೇವಾ ಸಿಂಧು ಪೋರ್ಟಲ್ ಮೂಲಕ ಎನ್‌ಒಸಿ ಪಡೆಯಲು ಅರ್ಜಿಗಳನ್ನು ಸಲ್ಲಿಸಬೇಕು. ಕಟ್ಟಡದ ನೀಲನಕ್ಷೆ, ವಿವರಗಳು, ನಿರ್ಮಾಣದ ಉದ್ದೇಶವನ್ನು ನೀಡಬೇಕು.

ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಅನ್‌ಲೈನ್‌ನಲ್ಲಿಯೇ ಎನ್‌ಒಸಿ ನೀಡಲಿದ್ದಾರೆ. ಇದರಿಂದಾಗಿ ಕಟ್ಟಡ ಕಟ್ಟುವವರು ಎಲ್ಲಾ ದಾಖಲೆಗಳನ್ನು ಹಿಡಿದುಕೊಂಡು ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ತಿರುಗಾಡುವುದಕ್ಕೆ ತಡೆ ಬೀಳಲಿದೆ.
ಎನ್‌ಒಸಿ ಮತ್ತು ಸಿಸಿ ನೀಡಲು ಭೌತಿಕವಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೈಬಿಡಲಾಗಿದೆ. ಜನರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ಕುರಿತು ಶೀಘ್ರದಲ್ಲಿಯೇ ವಿವರವಾದ ಆದೇಶ ಪ್ರಕಟಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications