ಗೌರಿ ಲಂಕೇಶ್ ಹತ್ಯೆ, ವಿಜಯಪುರದಲ್ಲಿ ಎಸ್‌ಐಟಿ ತಂಡ
ವಿಜಯಪುರ, ಅಕ್ಟೋಬರ್ 05 : ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ವಿಜಯಪುರದಲ್ಲಿ ತನಿಖೆ ನಡೆಸುತ್ತಿದೆ. ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಹತ್ಯೆ ನಡೆದಿತ್ತು.
ಬೆಂಗಳೂರು ಅಪರಾಧ ವಿಭಾಗದ ಡಿಸಿಪಿ, ಎಸ್‌ಐಟಿ ತಂಡದ ಅಧಿಕಾರಿ ಜಿನೇಂದ್ರ ಖನಗಾವಿ ವಿಜಯಪುರದಲ್ಲಿ ವಾಸ್ತವ್ಯ ಹೂಡಿದ್ದು, ತನಿಖೆ ನಡೆಸುತ್ತಿದ್ದಾರೆ. 'ತನಿಖಾ ತಂಡದ ಮುಖ್ಯಸ್ಥರ ಸೂಚನೆಯಂತೆ ಇಲ್ಲಿ ಬಂದು ತನಿಖೆ ನಡೆಸುತ್ತಿರುವೆ. ಎಷ್ಟು ದಿನ ತನಿಖೆ ನಡೆಯಲಿದೆ? ಎಂಬುದನ್ನು ಹೇಳಲಾಗುವುದಿಲ್ಲ' ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂಡಿ ಹಾಗೂ ಸಿಂಧಗಿ ತಾಲೂಕಿನ ಭೀಮಾ ತೀರಿದ ಕೆಲವು ರೌಡಿಗಳು ಮಧ್ಯಪ್ರದೇಶದ ಅಕ್ರಮ ಶಸ್ತ್ರಾಸ್ತ್ರ ಪೂರೈಕೆದಾರರ ಜೊತೆ ನಂಟು ಹೊಂದಿದ್ದಾರೆ. ಹಲವು ಸುಪಾರಿ ಕಿಲ್ಲರ್‌ಗಳು ಇದ್ದಾರೆ. ಆಗಾಗ ಕೊಲೆಗಳನ್ನು ಇವರು ಮಾಡುತ್ತಾರೆ. ಆದ್ದರಿಂದ, ತನಿಖೆ ನಡೆಸಲಾಗುತ್ತಿದೆ.
ಗೌರಿ ಲಂಕೇಶ್ ಹತ್ಯೆಗೆ ಬಳಿಸಿದ ಪಿಸ್ತೂಲ್, ಇಲ್ಲಿನ ವ್ಯಕ್ತಿಗಳು ಯಾರಾದರೂ ಹತ್ಯೆಯಲ್ಲಿ ಭಾಗಿಯಾಗಿರಬಹುದೇ? ಎಂದು ಮಾಹಿತಿ ಸಂಗ್ರಹ ಮಾಡಲು ವಿಜಯಪುರದಲ್ಲಿ ತನಿಖೆ ನಡೆಸಲಾಗುತ್ತಿದೆ. ಜಿನೇಂದ್ರ ಖನಗಾವಿ ಅವರು ಹಿಂದೆ ವಿಜಯಪುರದಲ್ಲಿ ಎಸ್ಪಿಯಾಗಿ ಕೆಲಸ ಮಾಡಿದ್ದರು. ಆದ್ದರಿಂದ, ಇಲ್ಲಿನ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿ ಇರುವುದರಿಂದ ಅವರನ್ನು ತನಿಖೆಗೆ ನಿಯೋಜನೆ ಮಾಡಲಾಗಿದೆ.
ಗೌರಿ ಹತ್ಯೆಗೆ ಒಂದು ತಿಂಗಳು : ಬೆಂಗಳೂರಿನ ಆರ್.ಆರ್.ನಗರದ ನಿವಾಸದ ಮುಂದೆ ಗೌರಿ ಲಂಕೇಶ್ ಹತ್ಯೆ ನಡೆದು ಒಂದು ತಿಂಗಳು ಕಳೆದಿದೆ. ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು, 'ಗೌರಿ ಹಂತಕರ ಸುಳಿವು ಸಿಕ್ಕಿದೆ. ಎಸ್‌ಐಟಿ ತಂಡ ಸಾಕ್ಷಿಗಳ ಸಂಗ್ರಹಣೆಯಲ್ಲಿ ತೊಡಗಿದೆ' ಎಂದು ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದಾರೆ.












Click it and Unblock the Notifications