ಗೌರಿ ಹತ್ಯೆ ಆರೋಪಿಯಿಂದ ಮತ್ತೊಂದು ಸ್ಫೋಟಕ ಮಾಹಿತಿ ಹೊರಕ್ಕೆ
ಬೆಂಗಳೂರು, ಜೂನ್ 22: ಗೌರಿ ಹತ್ಯೆ ಆರೋಪಿ ಪರಶುರಾಮ ವಾಘ್ಮೋರೆ ಇಂದ ದಿನೇ ದಿನೇ ಹೊಸ ಹೊಸ ಮಾಹಿತಿಯನ್ನು ಎಸ್‌ಐಟಿ ಪೊಲೀಸರು ಬಾಯಿ ಬಿಡಿಸುತ್ತಿದ್ದಾರೆ.
ಪರಶುರಾಮ್‌ಗೆ ಗೌರಿ ಹತ್ಯೆ ಮಾಡುವ ಮುನ್ನಾ ಬಂದೂಕು ಚಲಾಯಿಸಲು ಹೇಳಿಕೊಟ್ಟಿದ್ದು ಈಗಾಗಲೇ ಎಸ್‌ಐಟಿ ವಶದಲ್ಲಿರುವ ಅಮೋಲ್ ಕಾಳೆ ಎಂಬಾತನೇ ಎಂಬ ಮಾಹಿತಿಯನ್ನು ಪರಶುರಾಮ್ ವಾಘ್ಮೋರೆ ಹೊರಹಾಕಿದ್ದಾನೆ. ಆ ಮೂಲಕ ಅಮೋಲ್ ಕಾಳೆಯೇ ಹತ್ಯೆಯ ಹಿಂದಿದ್ದ ಮಾಸ್ಟರ್ ಮೈಂಡ್ ಆಗಿರಬಹುದೇ ಎಂಬ ಅನುಮಾನವೂ ಮೂಡಿದೆ.
ಮಹಾರಾಷ್ಟ್ರದ ಅಮೋಲ್ ಕಾಳೆಯೇ ತನಗೆ ಬೆಳಗಾವಿಯ ಹೊರ ವಲಯದ ಕಾಡೊಂದರಲ್ಲಿ ಏರ್‌ಗನ್ ಚಲಾಯಿಸುವುದು ಹೇಳಿಕೊಟ್ಟಿದ್ದಾಗಿ ಪರಶುರಾಮ್ ಎಸ್‌ಐಟಿ ಬಳಿ ಹೇಳಿದ್ದಾನೆ. ಆ ಸಮಯದಲ್ಲಿ ಅಮೋಲ್ ಕಾಳೆ ಜೊತೆಗೆ ಶಿಕಾರಿಪುರದ ಸುಜಿತ್ ಅಲಿಯಾಸ್ ಪ್ರವೀಣ್ ಕೂಡ ಇದ್ದನೆಂದು ಪರಶುರಾಮ್ ಹೇಳಿದ್ದಾನೆ.

ಅಮೋಲ್ ಕಾಳೆ ಪರಿಚಯ ಹೇಗೆ
ವಿಜಯಪುರದಲ್ಲಿ ಹಿಂದುತ್ವಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ಮಾಡಿದ್ದ ಪರಶುರಾಮ್‌ಗೆ ಶಿಕಾರಿಪುರದ ಸುಜಿತ್ ಅಲಿಯಾಸ್ ಪ್ರವೀಣ್ ಅದೇ ಕಾರ್ಯಕ್ರಮದ ಮೂಲಕ ಪರಿಚಯವಾಗಿದ್ದಾನೆ. ಆ ನಂತರ ಆತನೇ ಮಹಾರಾಷ್ಟ್ರದ ಅಲೋಲ್ ಕಾಳೆಗೆ ಪರಶುರಾಮ್‌ನನ್ನು ಪರಿಚಯ ಮಾಡಿಸಿದ್ದಾನೆ.

'ಹಿಂದೂ ಧರ್ಮ ಉಳಿಸುವ ಕಾರ್ಯಕ್ಕೆ ಸಹಾಯ'
ವಿಜಯಪುರದಲ್ಲಿ ಪರಶುರಾಮ್‌ನನ್ನು ಭೇಟಿ ಮಾಡಿದ್ದ ಅಮೋಲ್ ಕಾಳೆ ಹಿಂದೂ ಧರ್ಮ ಉಳಿಸಲು ಸಹಾಯ ಮಾಡುವಂತೆ ಕೋರಿದ್ದ. ಅದರ ಭಾಗವಾಗಿ ಗೌರಿ ಲಂಕೇಶ್ ಹತ್ಯೆ ಮಾಡುವಂತೆ ಹೇಳಿದ್ದಾನೆ. ಈ ಬಗ್ಗೆ ಯೊಚಿಸಿ ನಿರ್ಣಯ ತೆಗೆದುಕೊ ಎಂದೂ ಹೇಳಿದ್ದ ಜೊತೆಗೆ ಗೌರಿ ಲಂಕೇಶ್ ಅವರ ಭಾಷಣದ ತುಣುಕುಗಳನ್ನೂ ವೀಕ್ಷಿಸಲು ಕೊಟ್ಟಿದ್ದ.

ಬೆಳಗಾವಿಯಲ್ಲಿ ಬಂದೂಕು ತರಬೇತಿ
ಮರಾಠಿಯಲ್ಲಿ ಮಾತನಾಡುತ್ತಿದ್ದ ಅಮೋಲ್ ಕಾಳೆ ಬೆಳಗಾವಿಯ ಕಾಡೊಂದರಲ್ಲಿ ಏರ್‌ಗನ್‌ನಲ್ಲಿ ಬಂದೂಕು ಚಲಾಯಿಸುವ ಬಗ್ಗೆ ಪರಶುರಾಮ್‌ಗೆ ತರಬೇತಿ ನೀಡಿದ್ದ. ಆ ಸಮಯದಲ್ಲಿ ನಮ್ಮ ಜೊತೆಗೆ ಮನೋಹರ್ ಯಡವೆ ಮತ್ತು ಸುಜಿತ್ ಅಲಿಯಾಸ್ ಪ್ರವೀಣ್ ಇದ್ದರು ಅವರು ಅಮೋಲ್ ಕಾಳೆಯನ್ನು ಬಾಯ್‌ಸಾಬ್ ಎಂದು ಕರೆಯುತ್ತಿದ್ದರು ಎಂದು ಪರಶುರಾಮ್ ಎಸ್‌ಐಟಿ ಬಳಿ ಹೇಳಿದ್ದಾನೆಂಬ ಮಾಹಿತಿ ಮೂಲಗಳಿಂದ ಸಿಕ್ಕಿದೆ.

ಹಣ ಕೊಟ್ಟವನ ಹೆಸರು ಗೊತ್ತಿಲ್ಲ
ಗೌರಿ ಲಂಕೇಶ್ ಹತ್ಯೆ ಆದ ನಂತರ ಯಾರೋ ಒಬ್ಬ ವ್ಯಕ್ತಿ ಬಂದು 10000 ಹಣ ನೀಡಿ ಹೋದರು ಎಂದಿರುವ ಪರಶುರಾಮ್ ಆತ ಯಾರೆಂದು ಗೊತ್ತಿಲ್ಲ ಆದರೆ ಆತ ವಕೀಲನೆಂದು ತೋರುತ್ತದೆ ಎಂದಿದ್ದಾನೆ. ಅಲ್ಲದೆ ಕೊಲೆಯ ದಿನ ತನ್ನನ್ನು ಬೈಕ್ ನಲ್ಲಿ ಕರೆದುಕೊಂಡು ಹೋದವನು ಯಾರೂ ಎಂಬುದೂ ಆತನಿಗೆ ಗೊತ್ತಿಲ್ಲವಂತೆ. ಆದರೆ ಆತನ ಜೊತೆಗಿದ್ದವ ಅವನನ್ನು ದಾದಾ ಎಂದು ಕರೆಯುತ್ತಿದ್ದ ಎಂದು ಪರಶುರಾಮ್ ಎಸ್‌ಐಟಿ ಬಳಿ ಮಾಹಿತಿ ಹಂಚಿಕೊಂಡಿದ್ದಾನೆ ಎನ್ನಲಾಗಿದೆ.

ಬೈಕ್ ಸವಾರ, ಹಣ ನೀಡಿದಾದನಿಗಾಗಿ ಬಲೆ
ತಾನು ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿರುವುದು ಗೊತ್ತಾಗಿಬಿಟ್ಟಿರುವ ಪರಶುರಾಮ್ ಯಾವುದೇ ಹಿಂಜರಿಕೆ ಇಲ್ಲದೆ ಎಸ್‌ಐಟಿಗೆ ಮಾಹಿತಿ ನೀಡುತ್ತಿದ್ದಾನೆ. ಆದರೆ ಆತನಿಗೆ ತನ್ನನ್ನು ಕೊಲೆ ಸ್ಥಳಕ್ಕೆ ಬೈಕ್‌ನಲ್ಲಿ ಕರೆದುಕೊಂಡು ಹೊದ ವ್ಯಕ್ತಿ ಹಾಗೂ ಹಣ ನೀಡಿದ ವ್ಯಕ್ತಿಯ ಪರಿಚಯ ಇಲ್ಲ ಎನ್ನಲಾಗಿದೆ.

ಕಲಬುರಗಿ ಕೊಲೆ ಬಗ್ಗೆ ವಿಚಾರಣೆ
ತನಗೆ ಗೊತ್ತಿರುವ ಎಲ್ಲ ಮಾಹಿತಿಯನ್ನೂ ಹಂಚಿಕೊಳ್ಳುತ್ತಿರುವ ಪರಶುರಾಮ್ ನ ಬಳಿ ಚಿಂತಕ ಕಲಬುರಗಿ ಕೊಲೆ ಬಗ್ಗೆಯೂ ಮಾಹಿತಿ ಕೇಳಲಾಗಿದೆ ಆದರೆ ಆ ಬಗ್ಗೆ ತನಗೆ ಗೊತ್ತಿಲ್ಲವೆಂದು ಹೇಳಿದ್ದಾನೆ ಎಂದು ಎಸ್ಐಟಿ ಅಧಿಕಾರಿಗಳಿಂದ ತಿಳಿದುಬಂದಿದೆ.

ನವೀನ್ ಕುಮಾರ್ ಯಾರೋ ಗೊತ್ತಿಲ್ಲ
ಅಮೋಲ್ ಕಾಳೆ, ಸುಜಿತ್, ಮನೋಹರ್ ಯಡವೆಯನ್ನು ಗುರುತಿಸಿರುವ ಪರಶುರಾಮ್ ವಾಘ್ಮೋರೆ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಯಾರೆಂದು ಗೊತ್ತಿಲ್ಲ ಎಂದು ಹೇಳಿದ್ದಾನೆ. ಈ ಮುಂಚೆ ನವೀನ್ ಕುಮಾರ್ ಬಂಧನವಾದಾಗ ತಾನು ಬೇರೆ ಯಾರನ್ನೋ ಬಂಧಿಸಿದ್ದಾರೆ ಎಂದು ಸಂತೋಶ ಪಟ್ಟಿದ್ದೆ ಎಂದೂ ಆತ ಹೇಳಿದ್ದಾನೆ.












Click it and Unblock the Notifications