Garlic Price Hike: ರೀಲ್ಸ್ ವಿಡಿಯೋ ಬಳಿಕ 'ಬೆಲೆ ಏರಿಕೆ'ಯಲ್ಲೂ ಸ್ಥಾನ ಪಡೆದ 'ಬೆಳ್ಳುಳ್ಳಿ'
ಹುಬ್ಬಳ್ಳಿ, ಫೆಬ್ರವರಿ 13: ಬೆಳ್ಳುಳ್ಳಿಯಿಂದ ಮಾಡಿದ್ದ ಕಬಾಬ್ ಕುರಿತು ವಿಡಿಯೋ (Bellulli Video) ರೀಲ್ಸ್‌ನಲ್ಲಿ ಅಗ್ರಸ್ಥಾನ ಪಡೆದು ಎಲ್ಲೆಡೆ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಬೆಲೆ ಏರಿಕೆ ವಿಚಾರದಲ್ಲಿ ಇದೀಗ ಬೆಳ್ಳುಳ್ಳಿ (Garlic Price) ಅಗ್ರಸ್ಥಾನ ಪಡೆದುಕೊಂಡು ಗ್ರಾಹಕರ ನಿದ್ದೆಗೆಡಿಸಿದೆ.
ಹೌದು ಬೆಳ್ಳಿಯಂತೆ ಕಂಗೊಳಿಸುವ ಬೆಳ್ಳುಳ್ಳಿಗೆ ಇದೀಗ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದೆ. ಬೆಲೆ ಕೇಳಿಯೇ ಗ್ರಾಹಕರು ಸುಸ್ತಾಗುತ್ತಿದ್ದಾರೆ. ತರಕಾರಿ ಸೇರಿದಂತೆ ಇತರ ಪದಾರ್ಥಗಳು ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿವೆ ಎನ್ನುವಷ್ಟರಲ್ಲಿಯೇ ಬೆಳ್ಳುಳ್ಳಿ ದರ ಗಗನಕ್ಕೆರಿದೆ. ಇದಕ್ಕೆ ಕಡಿಮೆ ಉತ್ಪಾದನೆ, ಪೂರೈಕೆಯ ಕೊರತೆಯೇ ಕಾರಣವಾಗಿದೆ.

40,000 ರೂ. ಗಡಿ ತಲುಪಿದ ಬೆಳ್ಳುಳ್ಳಿ
ಪ್ರತಿಯೊಬ್ಬರ ಅಡುಗೆ ಮನೆ ಕಂಪನ್ನು ಹೆಚ್ಚಿಸುವುದು ಬೆಳ್ಳುಳ್ಳಿ. ಆದರೆ ಈಗ ಬೆಳ್ಳುಳ್ಳಿ ಬೆಲೆ ಕೇಳಿದ ಗ್ರಾಹಕರು ಬೆರಗಾಗುತ್ತಿದ್ದಾರೆ. ಬಂಗಾರ ಬಲು ಭಾರ ಎಂಬ ಮಾತನ್ನು ಈಗ ಬೆಳ್ಳುಳ್ಳಿ ಬಲು ಭಾರ ಎಂದು ಬದಲಿಸಬೇಕಿದೆ. ಏಕೆಂದರೆ ಬೆಳ್ಳುಳ್ಳಿ ಕ್ವಿಂಟಾಲ್‌ಗೆ 40 ಸಾವಿರ ರೂ. ಗಡಿ ತಲುಪಿದೆ. ಹೀಗಾಗಿ ಚಿಲ್ಲರೆ ಮಾರಾಟ ದರವು ಗಗನಕ್ಕೇರಿದೆ.
ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಕೆ.ಜಿಗೆ ಎಷ್ಟಿದೆ?
ಕಳೆದ ಡಿಸೆಂಬರ್ ಮತ್ತು ಜನವರಿಯ ಎರಡು ತಿಂಗಳಿಂದ ಬೆಳ್ಳುಳ್ಳಿ ಬೆಲೆ ಏರಿಕೆ ಆಗುತ್ತಲೇ ಸಾಗಿದೆ. ಬೆಳ್ಳುಳ್ಳಿ ಕ್ವಿಂಟಾಲ್‌ಗೆ 40 ಸಾವಿರ ರೂ. ಗಡಿ ತಲುಪಿದ್ದರೆ, ಬೆಳ್ಳುಳ್ಳಿಯ (ಜವಾರಿ) ಚಿಲ್ಲರೆ ಕೆ.ಜಿಗೆ 450 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಮೂಲಕ ಬೆಲೆ ಏರಿಕೆಯಲ್ಲೂ ಬೆಳ್ಳುಳ್ಳಿ ದಾಖಲೆ ಬರೆದಿದೆ.
ಇನ್ನೂ ಮಾರುಕಟ್ಟೆಯಲ್ಲಿ ಹೈಬ್ರಿಡ್ ಬೆಳ್ಳುಳ್ಳಿಯು ಮೂರು ತಿಂಗಳ ಹಿಂದೆ 100 ರೂಪಾಯಿಗೆ 2 ಕೆ.ಜಿಯಂತೆ ಮಾರಾಟವಾಗಿತ್ತು. ಆದರೆ, ಈಗ ಅದರ ಬೆಲೆಯೂ ಹೆಚ್ಚಳವಾಗಿದೆ. ಹೈಬ್ರಿಡ್ ಬೆಳ್ಳುಳ್ಳಿ ಪ್ರತಿ ಕೆ.ಜಿಗೆ 300 ರೂಪಾಯಿಯಂತೆ ಮಾರಾಟವಾಗಿದೆ.

ಬೆಲೆ ಏರಿಕೆಗೆ ಹವಾಮಾನವು ಕಾರಣ
ಹವಾಮಾನದಲ್ಲಿ ಉಂಟಾದ ಬದಲಾವಣೆ, ವೈಪರಿತ್ಯ ಮತ್ತು ಬರಗಾಲದಿಂದ ದಿನಬಳಕೆ ವಸ್ತುಗಳ ಬೆಲೆಯಲ್ಲಿ ದಿನದಿಂದ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಮಸಾಲೆ ಪದಾರ್ಥಗಳ ದರ ಕೇಳಿ ಗ್ರಾಹಕರು ಗಾಬರಿಯಾಗುತ್ತಿದ್ದಾರೆ. ಅಡುಗೆ ರುಚಿ ಹೆಚ್ಚಲು, ಒಗ್ಗರಣೆ ಹಾಕಲು ಬೇಕಾಗುವ ಬೆಳ್ಳುಳ್ಳಿಗೆ ಈಗ ಬಂಗಾರದ ಬೆಲೆ ಬಂದಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.
ಜನರ ಬಳಕೆಗೆ ತಕ್ಕಂತೆ ಬೆಳ್ಳುಳ್ಳಿ ಉತ್ಪಾದನೆ ಇಲ್ಲದ್ದರಿಂದ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಹೀಗಾಗಿ ಬೆಲೆ ಹೆಚ್ಚಳವಾಗಿದೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬೆಳ್ಳುಳ್ಳಿ ಉತ್ಪಾದನೆ ಸಂಪೂರ್ಣ ಕುಸಿದಿದೆ. ಕರ್ನಾಟಕಕ್ಕೆ ಹೆಚ್ಚಿನ ಬೆಳ್ಳುಳ್ಳಿ ತಮಿಳುನಾಡಿನಿಂದ ಆಮದಾಗುತ್ತಿದೆ. ಹವಾಮಾನ ವೈಪರೀತ್ಯವೂ ಈ ಬಾರಿ ಬೆಳ್ಳುಳ್ಳಿ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಉತ್ಪಾದನೆ-ಆಮದು ಕಡಿಮೆ, ಬೆಲೆ ಏರಿಕೆ
ಬೆಂಗಳೂರಿನ ಮಾರುಕಟ್ಟೆಗೆ ನಿತ್ಯವು ಬರುತ್ತಿದ್ದ ಬೆಳ್ಳುಳ್ಳಿ ಪ್ರಮಾಣ ಅರ್ಧಕ್ಕೆ ಕುಸಿದಿದೆ. 40 ಕೆ.ಜಿ.ತೂಕದ ಒಂದು ಚೀಲದಂತೆ ಒಟ್ಟು 3000 ಚೀಲಗಳು ಆಮದಾಗುತ್ತಿದ್ದವು. ಇದೀಗ ಇದರಲ್ಲಿ ಅರ್ಧದಷ್ಟು ಮಾತ್ರ ಪೂರೈಕೆ ಆಗುತ್ತಿವೆ. ಮಧ್ಯಪ್ರದೇಶ, ಕರ್ನಾಟಕದ ಹಾವೇರಿ ಜಿಲ್ಲೆ ಹಾಗೂ ಮತ್ತಿತ ಕಡೆಗಳಲ್ಲಿ ಅಲ್ಪ ಪ್ರಮಾಣದಲ್ಲಿಬೆಳ್ಳುಳ್ಳಿ ಬೆಳೆಯಲಾಗಿದೆ. ಆಮದು ಕಡಿಮೆ, ಉತ್ಪಾದನೆಯು ಕಡಿಮೆ ಆಗಿದ್ದರಿಂದ ಸಹಜವಾಗಿಯೇ ಬೆಳ್ಳುಳ್ಳಿಗೆ ಬೆಲೆ ಹೆಚ್ಚಾಗಿದೆ ಎಂದು ವರ್ತಕರು ತಿಳಿಸಿದ್ದಾರೆ.












Click it and Unblock the Notifications